ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ಪೈಕಿ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ವಿಷಯದಲ್ಲಿ ಕಾಂಗ್ರೆಸ್ ಮತ್ತೆ ಗೊಂದಲ ಮಾಡಿಕೊಂಡಿದೆ. ಕಳೆದ ಬಾರಿಯೂ ಮುಳಬಾಗಿಲು ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಯಡವಟ್ಟು ಮಾಡಿಕೊಂಡಿತ್ತು.
ಈ ಬಾರಿ ರಾತ್ರಿ ಬಿ-ಫಾರಂ ಕೊಟ್ಟು ಬೆಳಗ್ಗೆ ಹಿಂಪಡೆಯುವ ಮೂಲಕ ಮೂಲ ಕಾಂಗ್ರೆಸಿಗರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ 2013ರಲ್ಲಿ ಕೊತ್ತನೂರು ಮಂಜುನಾಥ್ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 2018ರ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರಿದ್ದ ಅವರಿಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪಧಿಸಲು ಬಿ-ಫಾರಂ ನೀಡಲಾಗಿತ್ತು.
ಇದನ್ನೂ ಓದಿ : ಮೊದಲ ಬಾರಿಗೆ ಮತ ಹಾಕುವ ಮತದಾರರನ್ನು ಸೆಳೆಯಲು ‘ಯುವ ಮತ ಅಭಿಯಾನಕ್ಕೆʼ ಕಾಂಗ್ರೆಸ್ ಚಾಲನೆ
ಇತ್ತೀಚೆಗೆ ಅವರು ಬಿಜೆಪಿ ಸಖ್ಯಕ್ಕೆ ಗುಡ್ ಬಾಯ್ ಹೇಳಿ ಮತ್ತೆ ಕಾಂಗ್ರೆಸ್ ಸೇರಿದ್ದರು. ಆದರೆ ಕ್ಷೇತ್ರಕ್ಕೆ ಅವರು ಕಾಲಿಡದಂತೆ ಕೊತ್ತನೂರು ಮಂಜುನಾಥ್ ವಿರೋಧ ವ್ಯಕ್ತ ಪಡಿಸಿದ್ದರು. ಕೊನೆಗೆ ಡಿ.ಕೆ.ಶಿವಕುಮಾರ್ ಆಸಕ್ತಿ ವಹಿಸಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಸ್ಪಧಿಸಲು ಹೆಚ್.ನಾಗೇಶ್ಗೆ ಬಿ-ಫಾರಂ ನೀಡಿದ್ದಾರೆ. ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ ನ್ಯಾಯಾಲಯದ ತೀರ್ಪಿನ ವಿರುದ್ಧ ಹೋರಾಟ ನಡೆಸುತ್ತಲೇ ಇರುವ ಕೊತ್ತನೂರು ಮಂಜುನಾಥ್ ತಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಮತ್ತೆ ಮುಳಬಾಗಿಲು ಕ್ಷೇತ್ರದಿಂದಲೇ ಸ್ಪಧಿಸುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು.
ಆದರೆ ಕಳೆದ ಬಾರಿಯಂತೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಈ ಬಾರಿ ಅಳೆದು ತೂಗಿ ನಿನ್ನೆ ರಾತ್ರಿ ಪಕ್ಷದ ಮೂಲ ಕಾರ್ಯಕರ್ತ ಹಾಗೂ ಯುವ ನಾಯಕ ಡಾ.ಬಿ.ಸಿ.ಮುದ್ದುಗಂಗಾಧರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರಕಟಿಸಿತ್ತು. ತಡರಾತ್ರಿ ಅವರಿಗೆ ಬಿ-ಫಾರಂ ಕೂಡ ನೀಡಲಾಗಿತ್ತು. ಆದರೆ ಪಕ್ಷದ ನಾಯಕರ ತೀರ್ಮಾನದ ವಿರುದ್ಧ ಕೊತ್ತನೂರು ಮಂಜುನಾಥ್ ಬಂಡಾಯವೆದ್ದಿದ್ದರು.
ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಿದ್ದರೂ ಮುಳಬಾಗಿಲು ಕ್ಷೇತ್ರದಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪಧಿಸುತ್ತೇನೆ ಎಂದು ಹೇಳಿದ ನಂತರ ಆ ಕ್ಷೇತ್ರ ಹೈವೋಲೈಜ್ ಆಗಿ ಪರಿವರ್ತನೆಯಾಗಿತ್ತು.
ಆದರೆ ಸಿದ್ದರಾಮಯ್ಯ ಅವರ ಸ್ವ ಇಚ್ಚೆ ಮೇರೆಗೆ ಅವರ ತವರು ಜಿಲ್ಲೆ ವರುಣಾದಿಂದ ಸ್ಪಧಿಸಲು ಹೈಕಮಾಂಡ್ ಅವಕಾಶ ನೀಡಿದೆ. ನಂತರ ಕೋಲಾರವೂ ಸೇರಿದಂತೆ ದ್ವಿಸದಸ್ಯ ಕ್ಷೇತ್ರದಲ್ಲಿ ಸ್ಪಧಿಸಲು ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಅದಕ್ಕೆ ಹೈಕಮಾಂಡ್ ಮನ್ನಣೆ ನೀಡಿಲ್ಲ. ಹೀಗಾಗಿ ಕೋಲಾರಕ್ಕೆ ಕೊತ್ತನೂರು ಮಂಜುನಾಥ್‌ರಿಗೆ ಬಿ-ಫಾರಂ ನೀಡಲಾಗಿದೆ.
ಆದರೆ ಕೊತ್ತನೂರು ತಾವು ಹೇಳಿದವರಿಗೆ ಮುಳಬಾಗಿಲು ಕ್ಷೇತ್ರದಿಂದ ಸ್ಪಧಿಸಲು ಅವಕಾಶ ನೀಡಿದ್ದಾರೆ ಮಾತ್ರ ಕೋಲಾರದಿಂದ ಕಣಕ್ಕಿಳಿಯುವುದಾಗಿ ಬ್ಲಾಕ್‌ಮೇಲ್ ತಂತ್ರ ಮಾಡಿದ್ದಾರೆ ಎನ್ನಲಾಗಿದೆ. ತಡ ರಾತ್ರಿ ನಡೆದ ಹೈಡ್ರಾಮದಿಂದ ರಾತ್ರಿ ನೀಡಿದ್ದ ಬಿ-ಫಾರಂ ಅನ್ನು ಕಾಂಗ್ರೆಸ್ ನಾಯಕರು ಬೆಳಗ್ಗೆ ಹಿಂಪಡೆದಿದ್ದಾರೆ. ಜೆಡಿಎಸ್‌ನಿಂದ ವಲಸೆ ಬಂದಿದ್ದ ಆದಿನಾರಾಯಣ ಅವರಿಗೆ ನೀಡಲಾಗಿದೆ.
2018ರಿಂದಲೂ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಗುತ್ತಲೇ ಇದೆ. ಈ ಬಾರಿ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯ ಪ್ರವೇಶ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರಿಗೆ ಮಣೆ ಹಾಕಲಾಗಿದೆ ಎಂಬ ಅಪಸ್ವರಗಳು ಕೇಳಿ ಬಂದಿವೆ.