ಜನಮತ 2023 : ಲಕ್ಷ ಲಕ್ಷ ಕೂಡಿಟ್ಟರೂ ನಿಲ್ಲದ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಹಣದ ದಾಹ!

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭಗೊಂಡಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ವಿವರವನ್ನ ತಿಳಿಸುತ್ತಿದ್ದಾರೆ. ಇದು ಅನೇಕ ವಿಚಾರಗಳನ್ನು ಹೊರಹಾಕಿದೆ.

ಈ ಆಸ್ತಿಯ ವಿವರಗಳು ಕಳೆದ ಬಾರಿಗಿಂತ  ದ್ವಿಗುಣವಾಗಿರುವುದನ್ನು ಕಾಣಬಹುದಾಗಿದೆ. ಅಂತಹ ವ್ಯಕ್ತಿಗಳ ವಿವರಗಳು ಈ ಕೆಳಗಿನಂತಿವೆ.


ಎಂಟಿಬಿ ನಾಗರಾಜ್‌ – ಬಿಜೆಪಿ ಪಕ್ಷ
ಹೊಸಕೋಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಎಂಟಿಬಿ ನಾಗರಾಜ್‌, 1510 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದಾರೆ. ಕೇವಲ ಮೂರೇ ಮೂರು ವರ್ಷದಲ್ಲಿ ಎಂಟಿಬಿ ಅವರ ಆಸ್ತಿ ಸುಮಾರು 300 ಕೋಟಿ ರೂ. ಹೆಚ್ಚಾಗಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.
2019ರ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್‌ 1195 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದರು. ಅದಕ್ಕೂ ಮುನ್ನ 2018ರ ಚುನಾವಣೆಯಲ್ಲಿ 1,015 ಕೋಟಿ ರೂ. ಆಸ್ತಿಯನ್ನು ಎಂಟಿಬಿ ಸಲ್ಲಿಸಿದ್ದರು. ಅದಾದ ಬಳಿಕ 2020ರಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆ ವೇಳೆ 1224 ಕೋಟಿ ರೂ. ಆಸ್ತಿಯನ್ನು ಎಂಟಿಬಿ ಘೋಷಿಸಿದ್ದರು. ಈಗ 1510 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಎಂಟಿಬಿ ಘೋಷಿಸಿದ್ದು, ಮೂರು ವರ್ಷದಲ್ಲಿ ಬರೋಬ್ಬರಿ 286 ಕೋಟಿ ರೂ. ಆಸ್ತಿ ಹೆಚ್ಚಾಗಿದೆ.



ಬಸನಗೌಡ ಪಾಟೀಲ್​ ಯತ್ನಾಳ್ –  ಬಿಜೆಪಿ ಪಕ್ಷ
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್​ ಯತ್ನಾಳ್ ರವರು 9.65 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಹಾಗೂ 6.39 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. 6,81,32,842 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 3,04,30,893 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 9,85,63,740 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.




ಡಿಕೆ ಶಿವಕಮಾರ್‌ – ಕಾಂಗ್ರೆಸ್‌ ಪಕ್ಷ

ಕನಕಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿಕೆ ಶಿವಕಮಾರ್‌ ಹೆಸರಿನಲ್ಲಿ 244.93 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ , ಪತ್ನಿ ಉಷಾ ಹೆಸರಿನಲ್ಲಿ 20.30 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿ 12.99 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಡಿಕೆ ಶಿವಕುಮಾರ್ ಹೆಸರಿನಲ್ಲಿ 970 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, ಪತ್ನಿ ಉಷಾ ಹೆಸರಿನಲ್ಲಿ 113.38 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿ 54.33 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.ಒಟ್ಟಾರೆ  ಐದು ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಆಸ್ತಿ 595 ಕೋಟಿ ರೂ. ಏರಿಕೆಯಾಗಿದೆ. 2018ರಲ್ಲಿ 619.75 ಕೋಟಿ ರೂ. ಆಸ್ತಿ ಇರುವುದಾಗಿ ಡಿಕೆಶಿ ಘೋಷಣೆ ಮಾಡಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 595.18 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಡಿಕೆಶಿ ಬಳಿ 9 ಲಕ್ಷ ರೂ. ರೋಲೆಕ್ಸ್ ವಾಚ್ ಮತ್ತು 23.90 ಲಕ್ಷ ರೂ. ಹ್ಯೂಬ್ಲೆಟ್ ವಾಚ್ ಇದೆ.

ಚಿನ್ನಾಭರಣ, ಬೆಳ್ಳಿ, ವಜ್ರ, ಮಾಣಿಕ್ಯ, ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡಗಳನ್ನು ಡಿಕೆಶಿ ಹೊಂದಿದ್ದಾರೆ. ಇದರೊಂದಿಗೆ 226.41 ಕೋಟಿ ರೂ. ಸಾಲ ಇರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಬಳಿ 133.68 ಕೋಟಿ ರೂ., ಪುತ್ರ ಮತ್ತು ಪುತ್ರಿಯ ಹೆಸರಲ್ಲಿ 68 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಡಿಕೆಶಿ ಬಳಿ 4.85 ಲಕ್ಷ ನಗದು, ಬ್ಯಾಂಕು ಖಾತೆಗಳಲ್ಲಿ 14.67 ಕೋಟಿ ರೂ. ಇದೆ ಎಂದು ಹೇಳಲಾಗಿದೆ.



ಹೆಚ್‌.ಡಿ. ಕುಮಾರಸ್ವಾಮಿ – ಜೆಡಿಎಸ್‌ ಪಕ್ಷ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹೆಚ್‌.ಡಿ. ಕುಮಾರಸ್ವಾಮಿರವರು ಸುಮಾರು 189.27 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ 92.84 ಕೋಟಿ ರೂ ಸ್ಥಿರಾಸ್ತಿ ಹಾಗೂ 96.43 ಕೋಟಿ ರೂ ಚರಾಸ್ತಿ ಹೊಂದಿದ್ದು ಒಟ್ಟು ಸುಮಾರು  189.27 ಕೋಟಿ ರೂ ಹೊಂದಿದ್ದಾರೆ.


ಬಿ.ವೈ.ವಿಜಯೇಂದ್ರ – ಬಿಜೆಪಿ ಪಕ್ಷ
ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ ಮಾಡಿದ್ದು, ಇವರ ಬಳಿ 46.82 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ ಅವರ ಪತ್ನಿ ಪ್ರೇಮಾ ವಿಜಯೇಂದ್ರ ಅವರ ಹೆಸರಿನಲ್ಲಿ 7.85 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಇದೆ. ಇನ್ನು ಈ ದಂಪತಿ ಪ್ರಸ್ತುತ 70.11 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಶಿಕಾರಿಪುರದಲ್ಲಿ ಕೃಷಿ ಭೂಮಿ, ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿ ಜೊತೆಗೆ ಏಳು ಮನೆಗಳಿದ್ದು, ಒಟ್ಟು 1.75 ಲಕ್ಷ ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಹೊಂದಿದ್ದಾರೆ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ ಹಾಗೂ ಅವರ ಪತ್ನಿ ಬಳಿಕ 1.25 ಕೆಜಿ ಚಿನ್ನಾಭರಣ ಸೇರಿದಂತೆ ಒಟ್ಟು ದಂಪತಿ ಬಳಿ 2.29 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇದೆ ಎಂದು ನಾಮಪತ್ರದಲ್ಲಿ ಸಲ್ಲಿಸಿದ್ದಾರೆ.



ಸಿದ್ದರಾಮಯ್ಯ – ಕಾಂಗ್ರೆಸ್‌ ಪಕ್ಷ
ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದು,  ಸಿದ್ದರಾಮಯ್ಯ ಅವರ ಒಟ್ಟು ಆಸ್ತಿ ಮೌಲ್ಯ 19.29 ಕೋಟಿ, ಅದರಲ್ಲಿ ಸಾಲ 6.89 ಕೋಟಿ. ಒಟ್ಟು ಆಸ್ತಿಯಲ್ಲಿ ಚರಾಸ್ತಿ 9.58 ಕೋಟಿ, ಸ್ಥಿರಾಸ್ತಿ 9.43 ಕೋಟಿ ಇದರ ಜೊತೆಗೆ ಪತ್ನಿ ಪಾರ್ವತಿ ಸಿದ್ದರಾಮಯ್ಯ ಒಟ್ಟು ಆಸ್ತಿ ಮೌಲ್ಯ 30.82 ಕೋಟಿ. ಅದರಲ್ಲಿ ಸಾಲ 16.24 ಕೋಟಿ, ಒಟ್ಟು ಚರಾಸ್ತಿ 11.26 ಕೋಟಿ, ಸ್ಥಿರಾಸ್ತಿ 19.56 ಕೋಟಿಯನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿ 28 ಲಕ್ಷ ರೂ. ಮೌಲ್ಯದ ಕಾರು ಹಾಗೂ 350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇದೆ. ಹೆಂಡತಿ ಪಾರ್ವತಿ ಸಿದ್ದರಾಮಯ್ಯ ಅವರು 540 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಹೊಂದಿದ್ದಾರೆ.



ಬಾಲಚಂದ್ರ ಜಾರಕಿಹೊಳಿ –
ಬಿಜೆಪಿ ಪಕ್ಷ
ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇವರು ಒಟ್ಟು 35,69,92,186 ರೂ.ಗಳ ಒಡೆಯರಾಗಿದ್ದು, ಇವರ ಹೆಸರಿನಲ್ಲಿ ಯಾವುದೇ ಸಾಲವಿಲ್ಲ. ಬಾಲಚಂದ್ರ ಜಾರಕಿಹೊಳಿ ಬಳಿ 8,55,777 ರೂ. ನಗದು ಹಣ ಇದೆ.1.50 ಕೋಟಿ ರೂ.ಗಳ ಎಫ್.ಡಿ ಇದೆ. ಉಳಿತಾಯ ಖಾತೆಗಳಲ್ಲಿ 62,15,688 ರೂ. ಜಮಾ ಇದೆ. 34,45,541 ರೂ ಎನ್‌ಎಸ್‌ಎಸ್ ಪೋಸ್ಟಲ್ ಸೇವಿಂಗ್ಸ್ ಇನ್ಸೂರನ್ಸ್ ಇದ್ದು, 10,97,862 ರೂ. ಮೌಲ್ಯದ ಹುಂಡೈ ಐ20 ಅಸ್ಟಾ ಕಾರ್ ಹೊಂದಿದ್ದಾರೆ. 92,57,810 ರೂ. ಮೌಲ್ಯದ 1510 ಗ್ರಾಂ ಚಿನ್ನವಿದ್ದರೆ, 8,14,100 ರೂ. ಮೌಲ್ಯದ10 ಕೆಜಿ ಬೆಳ್ಳಿ ಇದೆ. 31,13,85,052 ರೂ. ಮೌಲ್ಯದ ಕೃಷಿ, ಕೃಷಿಯೇತರ ಭೂಮಿ ಹಾಗೂ ವಾಸಿಸುವ ಮನೆ ಸೇರಿದೆ. ಬಾಲಚಂದ್ರ ಜಾರಕಿಹೊಳಿ ಅವರು 1,29,30,703 ರೂ.ಗಳನ್ನು ಬೇರೆಯವರಿಗೆ ಸಾಲವನ್ನಾಗಿ ನೀಡಿದ್ದಾರೆ.


 

ಜಿ. ಕರುಣಾಕರರೆಡ್ಡಿ – ಬಿಜೆಪಿ ಪಕ್ಷ
ಹರಪನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಒಟ್ಟು ಆಸ್ತಿ ರೂ 36.27 ಕೋಟಿಯಿದ್ದರೆ, ರೂ.23.56 ಕೋಟಿ ಸಾಲ ಇದೆ.  2018ರಲ್ಲಿ ಒಟ್ಟು ರೂ.36.10 ಕೋಟಿ ಆಸ್ತಿ ರೂ.34.84 ಕೋಟಿ ಸಾಲ ಘೋಷಿಸಿದ್ದರು.
2017 18ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಇವರು ಸಲ್ಲಿಸಿದ ಮಾಹಿತಿಯಲ್ಲಿ ರೂ.5.91 ಲಕ್ಷ ಆದಾಯ ತೋರಿದ್ದರು. 2021-22ನೇ ಸಾಲಿಗೆ ಇದು ರೂ.3.12 ಲಕ್ಷಕ್ಕೆ ಕುಸಿದಿದೆ. ಇವರ ಪತ್ನಿ ವನಜಾ ರೂ6.52 ಲಕ್ಷ ಆಸ್ತಿ ತೆರಿಗೆ ತುಂಬಿರುವುದಾಗಿ ತೋರಿಸಿದ್ದಾರೆ. 2017-18ರಲ್ಲಿ ರೂ76 ಸಾವಿರ ಆಸ್ತಿ ತೋರಿಸಿದ್ದರು. ಪತಿಯ ಆದಾಯ ಇಳಿಕೆಯಾಗಿದ್ದರೆ, ಪತ್ನಿ ಆದಾಯ ಹೆಚ್ಚಾಗಿದೆ.



ನಿಖಿಲ್ ಕುಮಾರಸ್ವಾಮಿ – ಜೆಡಿಎಸ್‌ ಪಕ್ಷ 

ರಾಮನಗರದಿಂದ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ, ಲ್ಯಾಂಬೊರ್ಗಿನಿ ಕಾರು ಸೇರಿ ಐದು ಕಾರುಗಳ ಒಡೆಯರಾಗಿದ್ದಾರೆ. ಒಟ್ಟು 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿರೋ ನಿಖಿಲ್ ಬಳಿ ಚರಾಸ್ತಿ 46 ಕೋಟಿ 81 ಲಕ್ಷ, 28 ಕೋಟಿ ಸ್ಥಿರಾಸ್ತಿ ಇದೆ. ಹಾಗೆಯೇ ಪತ್ನಿ ರೇವತಿ ಬಳಿ ಚರಾಸ್ತಿ 1ಕೋಟಿ 79 ಲಕ್ಷ, 28 ಲಕ್ಷ ಸ್ಥಿರಾಸ್ತಿ ಇರೋದಾಗಿ ಉಲ್ಲೇಖಿಸಿದ್ದಾರೆ. ಒಟ್ಟು 38ಕೋಟಿ 94 ಲಕ್ಷ ರೂಪಾಯಿ ಸಾಲ ತೋರಿಸಿರೋ ನಿಖಿಲ್, 2019 ಲೋಕಸಭೆ ಚುನಾವಣೆವೇಳೆ ನಿಖಿಲ್ ಆಸ್ತಿ 74 ಕೋಟಿ ರೂಪಾಯಿ ಇತ್ತು.



ಎಸ್‌.ಟಿ ಸೋಮಶೇಖರ್ –  ಬಿಜೆಪಿ  ಪಕ್ಷ
ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ ಸೋಮಶೇಖರ್ ನಾಮಪತ್ರ ಸಲ್ಲಿಸಿದ್ದು, ಇವರು ಬರೋಬ್ಬರಿ 27ಕೋಟಿ 88 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ  ಘೋಷಿಸಿದ್ದಾರೆ. 5ಕೋಟಿ 46ಲಕ್ಷ ಚರಾಸ್ತಿ, 8ಕೋಟಿ 91ಲಕ್ಷ ಸ್ಥಿರಾಸ್ತಿ ಇರೋದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಪತ್ನಿ ರಾಧಾ ಹೆಸರಲ್ಲಿ ಚರಾಸ್ತಿ 48 ಲಕ್ಷದ 18 ಸಾವಿರ, 8 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಅಲ್ಲದೇ ಪುತ್ರ ನಿಶಾಂತ್ ಹೆಸರಲ್ಲಿ ಚರಾಸ್ತಿ 48 ಲಕ್ಷದ 18 ಸಾವಿರ ರೂಪಾಯಿ ಚರಾಸ್ತಿ, 3 ಕೋಟಿ 75 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 1ಕೋಟಿ 22 ಲಕ್ಷ ಸಾಲವಿದ್ದು, ಕುಟುಂಬದದ ವಿವಿಧ ಸದಸ್ಯರಿಗೆ 2ಕೋಟಿ 46 ಲಕ್ಷ ಸಾಲ ನೀಡಿರುವುದಾಗಿ ಘೋಷಿಸಿದ್ದಾರೆ. 2019ರ ಬೈ ಎಲೆಕ್ಷನ್‌ ವೇಳೆ 18 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇರೋದಾಗಿ ಘೋಷಿಸಿಕೊಂಡಿದ್ದರು. 2018 ರಲ್ಲಿ 67.83 ಲಕ್ಷ ಇದ್ದಂತಹ ಆಸ್ತಿಯ ವಿವರ ಈ ಬಾರಿ 5.46 ಕೋಟಿ ಗೂಗಳಿಗೆ ಏರಿಕೆಯಾಗಿದೆ.


ಸುಧಾಕರ್‌ : ಬಿಜೆಪಿ ಪಕ್ಷ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಆರೋಗ್ಯ  ಸಚಿವ ಸುಧಾಕರ್‌ ರವರು 4.28 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಅವರಿಗಿಂತ ಅವರ ಪತ್ನಿ ಡಾ. ಪ್ರೀತಿ ಜಿ.ಎ. ಹೆಚ್ಚಿನ ಆಸ್ತಿ ಘೋಷಿಸಿಕೊಂಡಿದ್ದಾರೆ. ಪತ್ನಿ ಬಳಿ 22.69 ಕೋಟಿ ರೂ. ಆಸ್ತಿ ಇದೆ. ಈ ಮೂಲಕ ಸುಧಾಕರ್‌ ಅವರಿಗಿಂತ ಅವರ ಪತ್ನಿಯೇ ಹೆಚ್ಚಿನ ಶ್ರೀಮಂತರಾಗಿದ್ದಾರೆ. ಸುಧಾಕರ್‌ ಅವರು 2.79 ಕೋಟಿ ರೂ. ಚರಾಸ್ತಿ ಘೋಷಿಸಿಕೊಂಡಿದ್ದರೆ, ತಮ್ಮ ಪತ್ನಿ ಬಳಿ 6.59 ಕೋಟಿ ರೂ. ಚರಾಸ್ತಿ ಇದೆ ಎಂದು ತಿಳಿಸಿದ್ದಾರೆ. ಅವರ ಬಳಿ ಮೂರು ಟ್ರ್ಯಾಕ್ಟರ್‌ಗಳಿದ್ದರೆ, ಪತ್ನಿ ಬಳಿ ಹೋಂಡಾ ಆಕ್ವಿವಾ ವಾಹನ ಇರುವುದಾಗಿ ತಿಳಿಸಿದ್ದಾರೆ.
ಸುಧಾಕರ್‌ ರವರು 2018ರಲ್ಲಿ ಸ್ಪರ್ಧಿಸಿದಾಗ 1.11 ಕೋಟಿಗಳಿದ್ದ ಚರಾಸ್ತಿ ಈ ಬಾರಿ 2.79 ಕೋಟಿಗಳಷ್ಟಾಗಿದೆ. ಅದೇ ರೀತಿ 52.81.000 ಗಳಷ್ಟಿದ್ದ ಸ್ಥಿರಾಸ್ತಿ 1.66.60.480 ಆಗಿದೆ. ಇದೀಗ ಕೇವಲ 5 ವರ್ಷಗಳಲ್ಲಿ 16.10.04.961 ರೂಪಾಯಿಗಳುಗೆ ಏರಿಕೆ ಕಂಡುಬಂದಿದೆ.



ಬಸವರಾಜ ಬೊಮ್ಮಾಯಿ : ಬಿಜೆಪಿ ಪಕ್ಷ
ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಸ್ತಿಯು 2018ರಲ್ಲಿ 6.09 ಕೋಟಿಯಷ್ಟಿದ್ದ ಬೊಮ್ಮಾಯಿಯವರ ಆಸ್ತಿ ಇದೀಗ 28.94 ಕೋಟಿಗೆ ಹೆಚ್ಚಾಗಿರುವುದು ಕಂಡು ಬಂದಿದೆ. ಇದರಂತೆ ಅವರ ಸ್ಥಿರಾಸ್ತಿಗಳ ಮೌಲ್ಯ 3.77 ಕೋಟಿ ರೂ.ಗಳಿಂದ 22.96 ಕೋಟಿ ರೂ.ಗೆ ಏರಿಕೆಯಾಗಿದ್ದು, ಆರು ಪಟ್ಟು ಹೆಚ್ಚಾಗಿದೆ. ಅದೇ ರೀತಿ ಚರಾಸ್ತಿ ಮೌಲ್ಯ 2.32 ಕೋಟಿ ರೂ.ನಿಂದ 5.98 ಕೋಟಿ ರೂ.ಗೆ ಏರಿಕೆಯಾಗಿದೆ. ಭಾರತೀಯ ಚುನಾವಣಾ ಆಯೋಗದ ಮುಂದೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಬೊಮ್ಮಾಯಿ ಅವರು 28,93,94,208 ರೂಪಾಯಿ ಮೌಲ್ಯದ ಆಸ್ತಿ ಮತ್ತು 5,79,20,753 ರೂಪಾಯಿಗಳ ಸಾಲ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹಿಂದೂ ಅವಿಭಜಿತ ಕುಟುಂಬ ಎಂಬ ಕಾಲಂ ಅಡಿಯಲ್ಲಿ ಅವರು 20,77,41,231 ರೂ.ಗಳ ಪಿತ್ರಾರ್ಜಿತ ಆಸ್ತಿಯನ್ನು ಘೋಷಿಸಿದ್ದಾರೆ. ಹಾಗಾಗಿ ಬೊಮ್ಮಾಯಿ ಏನರ ಒಟ್ಟು ಆಸ್ತಿ 49.70 ಕೋಟಿ ರೂ ಗಳಾಗಿದೆ. ಇದಲ್ಲದೆ ಬೊಮ್ಮಾಯಿಯವರ ಬಳಿಕ 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳಿದ್ದು, ಅವರ ಪತ್ನಿ ಚೆನ್ನಮ್ಮ 78.83 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದಾರೆಂದು ತಿಳಿಸಿದ್ದಾರೆ.


ಸುನಿಲ್ ಕುಮಾರ್ : ಬಿಜೆಪಿ
ಕಾರ್ಕಾಳ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಸುನಿಲ್‌ ಕುಆಮರ್‌ ರವರ ಆಸ್ತಿ 2018ರಲ್ಲಿ  2,22,10,194 ರೂ. (2.22 ಕೋಟಿ ರೂ.) ಗಳಾಗಿತ್ತು. ಇದೀಗ ಒಟ್ಟು ಸಂಪತ್ತಿನ ಮೊತ್ತ 5,63,48,832 ರೂ. (5.63 ಕೋಟಿ ರೂ.) ಗಳಾಗಿವೆ.

ಚರಾಸ್ಥಿಯ ಮೊತ್ತ 1,59,72,832 ರೂ.ಗಳಾದರೆ, ಸ್ಥಿರಾಸ್ಥಿಯ ಮೌಲ್ಯ 4,03,76,000ರೂ. ಗಳಾಗಿವೆ. ಇನ್ನು ಪತ್ನಿ ಪ್ರಿಯಾಂಕ ಅವರ ಆದಾಯದಲ್ಲೂ ಹೆಚ್ಚಳ ಕಂಡುಬಂದಿದೆ. ಅವರ ಒಟ್ಟು ಆದಾಯ 1,80,51,942 ರೂ.ಗಳಾಗಿವೆ. ಇದರಲ್ಲಿ 1.42 ಕೋಟಿ ರೂ. ಚರಾಸ್ಥಿಯಾದರೆ, 37.62 ಲಕ್ಷ ರೂ. ಸ್ಥಿರಾಸ್ಥಿಯದ್ದಾಗಿದೆ. ಸುನಿಲ್ ಕುಮಾರ್ ಬಳಿ 18,650ರೂ. ನಗದು, ಪತ್ನಿ ಬಳಿ 14,500ರೂ. ನಗದು ಹಣವಿದೆ. ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ವಿವಿಧ ಕಂಪೆನಿಗಳಲ್ಲಿ ಶೇರು, ಬಾಂಡುಗಳು, ವಿವಿಧ ಪಾಲಿಸಿಗಳು, ಎನ್‌ಎಸ್‌ಎಸ್ ಉಳಿತಾಯ, 14.31 ಲಕ್ಷ ರೂ. ಮೌಲ್ಯದ 272.70ಗ್ರಾಂ ಚಿನ್ನ ಸೇರಿದಂತೆ ಅವರ ಚರಾಸ್ಥಿಗಳ ಒಟ್ಟು ಮೌಲ್ಯ 1.59 ಕೋಟಿ ರೂ.ಗಳಾಗಿವೆ. ಅವರ ಪತ್ನಿಯ ಬಳಿ 1.17 ಕೋಟಿ ರೂ.ಮೌಲ್ಯದ 2230ಗ್ರಾಂ ಚಿನ್ನ, 7.42 ಲಕ್ಷ ರೂ.ಮೌಲ್ಯದ ಬೆಳ್ಳಿ ಸಾಮಗ್ರಿ ಸೇರಿದಂತೆ ಇರುವ ಚರಾಸ್ಥಿಯ ಒಟ್ಟು ಮೌಲ್ಯ 1.42 ಕೋಟಿರೂ.ಗಳಾಗಿವೆ. ಅಲ್ಲದೇ ಸುನಿಲ್ ಅವರಲ್ಲಿ 24.60 ಲಕ್ಷ ರೂ.ಮೌಲ್ಯದ ಟೊಯೊಟಾ ಇನ್ನೋವಾ ಕಾರು ಸಹ ಇದೆ. ಸುನೀಲ್ ಕುಮಾರ್ ಅವರ ಸ್ವಯಾರ್ಜಿತ ಸ್ವತ್ತುಗಳು, ಮನೆ ಸೇರಿದಂತೆ ಇರುವ ಸ್ಥಿರಾಸ್ಥಿಯ ಒಟ್ಟು ಮೌಲ್ಯ 4.03 ಕೋಟಿ ರೂ.ಗಳಾಗಿವೆ. ಪತ್ನಿ ಪ್ರಿಯಾಂಕ ಹೆಸರಿನಲ್ಲಿ 37.62 ಲಕ್ಷ ರೂ.ಮೌಲ್ಯದ ಚರಾಸ್ಥಿಗಳಿವೆ.



ಸಿಟಿ ರವಿ : ಬಿಜೆಪಿ ಪಕ್ಷ
ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು  ನಾಮಪತ್ರ ಸಲ್ಲಿಸಿರುವ ಇವರ ಆಸ್ತಿಯು ಕಳೆದ ಐದು ವರ್ಷದ ಅವಧಿಯಲ್ಲಿ  1.41 ಕೋಟಿ ರೂ. ನಷ್ಟು ಹೆಚ್ಚಳವಾಗಿದೆ. , 2018ರ ಚುನಾವಣೆ ವೇಳೆ ಸಿ.ಟಿ.ರವಿಯವರದ್ದು 5.01 ಕೋಟಿ ಆಸ್ತಿ ಇತ್ತು. ಅದೀಗ 6.42 ಕೋಟಿಗೆ ಹೆಚ್ಚಳವಾಗಿದೆ. ಜತೆಗೆ, ಕಳೆದ ಚುನಾವಣೆಯಲ್ಲಿ ರವಿ ಅವರ ಹೆಸರಿನಲ್ಲಿ1,11,42,993 ಸಾಲವಿತ್ತು. ಅದು ಈ ಸಲ ಏರಿಕೆಯಾಗಿದೆ. ಈ ಬಾರಿ 1.15 ಕೋಟಿಯಷ್ಟು ಸಾಲ ಹೆಚ್ಚಳವಾಗಿದ್ದು, ಒಟ್ಟಾರೆ ಸಾಲ 2,16,99,595ಕ್ಕೆ ಹೆಚ್ಚಳವಾಗಿದೆ.ಇವರ ಬಳಿ 86,431 ರೂ. ನಗದು ಇದ್ದು, ಪತ್ನಿ ಪಲ್ಲವಿ ಅವರ ಬಳಿ 7,89,257 ರೂ. ನಗದು ಇದೆ. ಇನ್ನು ಸಿಟಿ ರವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ 1,61,51,302 ರೂ. ಚರಾಸ್ತಿ ಮೌಲ್ಯ: 2,38,87,384 ರೂ., ಸಿಟಿ ರವಿ ಪತ್ನಿ ಪಲ್ಲವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ 96,27,829 ರೂ. ಹಾಗೂ ಪತ್ನಿ ಪಲ್ಲವಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ 84,22,597 ರೂ. ಆಗಿದೆ.



ಮಾಧುಸ್ವಾಮಿ : ಬಿಜೆಪಿ ಅಭ್ಯರ್ಥಿ

ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮಾಧುಸ್ವಾಮಿ ಅವರು 2018-2019ರಲ್ಲಿ ಸಲ್ಲಿಸಿದ ದಾಖಲೆಯಲ್ಲಿ ₹6.13 ಲಕ್ಷ ಆದಾಯ ಇರುವುದಾಗಿ ತೋರಿಸಿಕೊಂಡಿದದರು.ಇದೀಗ  2022-2023ನೇ ಸಾಲಿನಲ್ಲಿ ₹25.09 ಲಕ್ಷ ಆದಾಯ ಹೊಂದಿರುವುದಾಗಿ ನಮೂದಿಸಿದ್ದಾರೆ. ಸಚಿವರ ಪತ್ನಿ 2019-2020ರಲ್ಲಿ ₹7.92 ಲಕ್ಷ ಆದಾಯ ಹೊಂದಿದ್ದರೆ, 2022-2023 ವೇಳೆಗೆ ಆದಾಯದ ಮೊತ್ತ ₹1.83 ಕೋಟಿಗೆ ಏರಿಕೆಯಾಗಿದೆ. ಮಾಧುಸ್ವಾಮಿ ಅವರು ನಗದು, ಬ್ಯಾಂಕ್ ಠೇವಣಿ, ಒಡವೆ, ಕೃಷಿ ಜಮೀನು, ಕೃಷಿಯೇತರ ಭೂಮಿ, ನಿವೇಶನ, ಕಟ್ಟಡಗಳು ಸೇರಿದಂತೆ ಒಟ್ಟು ₹9.29 ಕೋಟಿ ಮೊತ್ತದ ಆಸ್ತಿ ಒಡೆಯರಾಗಿದ್ದಾರೆ. ತ್ರಿವೇಣಿ ಅವರು ಒಟ್ಟು ₹15.14 ಕೋಟಿ ಮೊತ್ತದ ಆಸ್ತಿಪಾಸ್ತಿ ಹೊಂದಿದ್ದು, ಗಂಡನಿಗಿಂತ ಶ್ರೀಮಂತರು. ಸಚಿವರು ₹7.30 ಕೋಟಿ ಹಾಗೂ ಪತ್ನಿ ₹10.50 ಕೋಟಿ ಸಾಲ ಹೊಂದಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವ ಜನಪ್ರತಿನಿಧಿಗಳು  ಜನ ಸಾಮಾನ್ಯರ ಸಮಸ್ಯೆಗಳನ್ನು ಸುಧಾರಿಸುವತ್ತ ಗಮನವಹಿಸುವ ಬದಲು ತಮ್ಮ ಹಾಗೂ ಅವರ ಕುಟುಂಬಗಳ ಹೆಸರಿನಲ್ಲಿ ಎಲ್ಲೇ ಮೀರಿ ಆಸ್ತಿ ಮಾಡಿಕೊಳ್ಳುವುದು ಈ  ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದೇ ಹೇಳಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಜನ ಸಾಮಾನ್ಯರು ಕೂಡ ಇತೀಚಿನ ದಿನಗಳಲ್ಲಿ ಗಮನಕ್ಕೆ ಬಂದಂತೆ  ಚುನಾವಣಾ ಅಭ್ಯರ್ಥಿಗಳು ನೀಡುವ ಆಶ್ವಾಸನೆಗಳಿಗೆ ಮಾರು ಹೋಗಿ  ದಿನಕ್ಕೆ 300,500 ಹಣ ಪಡೆದು ಚುನಾವಣಾ ಪ್ರಚಾರದ ಸ್ಥಳಗಳಲ್ಲಿ ತೂರಾಡಿ ಬೀಳುವುದನ್ನು ಬಿಟ್ಟು ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅತೀ ಅನಿವಾರ್ಯವಾಗಿದೆ. ಇದರ ಜೊತೆಗೆ ಚುನಾವಣಾ ಪ್ರಚಾರದ ಹೆಸರಿನಲ್ಲಿ ಉಂಟಾಗುತ್ತಿರುವ ಟ್ರಾಫಿಲ್‌ ಸಮಸ್ಯೆ ಉಂಟಾಗದಿರುವಂತೆ ಆರೋಗ್ಯಕರವಾದ ಪ್ರಚಾರದ ಜೊತೆಗೆ, ಪ್ರಚಾರಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕಿದೆ. ಈ ಮೂಲಕ ಮತದಾರರೂ ಕೂಡ ಎಚ್ಚೆತ್ತುಕೊಂಡಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲಿ ಮುಂಬರುವ ಪ್ರತಿನಿಧಿಗಳು ತಮ್ಮಗಳ ಕುಟುಂಬಕ್ಕೆ ಆಸ್ತಿ ಮಾಡುವುದರ ಬದಲಾಗಿ  ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವತ್ತ ಮನಸ್ಸು ಮಾಡುವ ವಿಚಾರವನ್ನು ತಳ್ಳಿ ಹಾಕುವಂತಿಲ್ಲ.

Donate Janashakthi Media

Leave a Reply

Your email address will not be published. Required fields are marked *