ಜನಸಂಖ್ಯೆಯ ಆಧಾರದ ಮೇಲೆ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕಡಿಮೆ ಮಾಡುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ

ಭಾರತದ ಒಕ್ಕೂಟವು ಜಟಿಲ ಸಮಸ್ಯೆಯನ್ನು ಎದುರಿಸುತ್ತಿದೆ. 2026ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಸ್ಥಾನಗಳ ಪುನರ್ ವಿಂಗಡಣೆ ಪ್ರಕ್ರಿಯೆಯು ‘ದಕ್ಷಿಣದವರ ತಲೆಯ ಮೇಲೆ ತೂಗುಗತ್ತಿ’ಎಂದು ತಮಿಳುನಾಡು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಉತ್ತರದ ರಾಜ್ಯಗಳಲ್ಲಿನ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಅದು ಹೆಚ್ಚಾದರೂ ಅವುಗಳ ಪಾಲು ಹೆಚ್ಚಾಗಬೇಕಾದಷ್ಟು ಹೆಚ್ಚಾಗುವುದಿಲ್ಲ ಎಂದು ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಟೀಕಿಸುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದಕ್ಷಿಣ ರಾಜ್ಯಗಳನ್ನು ಮೌನಗೊಳಿಸಲು ಮರುವಿಂಗಡಣೆಯ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರತ್ ಕೂಡ ಕೇಂದ್ರವು ಎಲ್ಲರೊಂದಿಗೂ ಚರ್ಚಿಸಿ ಕ್ರಮ ಕೈಗೊಳ್ಳಬೇಕು, ಅನುಮಾನಗಳನ್ನು ನಿವಾರಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಜನಸಂಖ್ಯೆ

-ಸಿ. ಸಿದ್ದಯ್ಯ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯು ಹೊಸ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ದೇಶದ ಭವಿಷ್ಯ ಮತ್ತು ರಾಜಕೀಯ ದಿಕ್ಕಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಹಾ, ಪಾರದರ್ಶಕ ಹಾಗೂ ಸಮಗ್ರ ಚರ್ಚೆ ನಡೆಸದೆ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ಹೇರುವುದು ವಾಡಿಕೆಯಾಗಿಬಿಟ್ಟಿದೆ. ಪ್ರತಿ ಹಂತದಲ್ಲೂ ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ಪ್ರಜಾಪ್ರಭುತ್ವ ವಿಧಾನಗಳನ್ನು ದುರ್ಬಲಗೊಳಿಸಿ, ಎಲ್ಲವನ್ನೂ ತನ್ನ ಕೈಗೆ ತೆಗೆದುಕೊಳ್ಳುವುದು ಸರ್ಕಾರದ ನೀತಿಯಾಗಿದೆ. ಇದು ರಾಜ್ಯಗಳ ಹಕ್ಕುಗಳ ಮೇಲಿನ ದಾಳಿಗಳು ಮತ್ತು ಅಧ್ಯಕ್ಷೀಯ ಮಾದರಿಯನ್ನು ಹೋಲುವ ಕೇಂದ್ರೀಕೃತ ಆಡಳಿತದ ಪ್ರವೃತ್ತಿಯಿಂದ ನಿರೂಪಿಸಲ್ಪಟ್ಟಿದೆ. ಅದೇ ಸಮಯದಲ್ಲಿ, ಎಲ್ಲವೂ ಸಾಂವಿಧಾನಿಕವಾಗಿ ಮತ್ತು ಕಾರ್ಯವಿಧಾನದ ಪ್ರಕಾರ ನಡೆಯುತ್ತಿದೆ ಎಂದು ಜನರನ್ನು ಮನವೊಲಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ.

ಕ್ಷೇತ್ರಗಳ ಪುನರ್ವಿಂಗಡಣೆಯೂ ಈ ಚಕ್ರದಲ್ಲಿ ಸಿಲುಕಿಕೊಂಡಿದ್ದು, ಹೊಸ ಸವಾಲುಗಳಿಗೆ ಕಾರಣವಾಗಿದೆ. ಜನಗಣತಿಯ ನಂತರ ಸಾಂವಿಧಾನಿಕವಾಗಿ ಕಡ್ಡಾಯಗೊಳಿಸಲಾದ ಪುನರ್ವಿಂಗಡಣೆಯು ಹಲವಾರು ಕಾರಣಗಳಿಂದ ಪ್ರಶ್ನಾರ್ಹವಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಅದು ಹೆಚ್ಚಾದರೂ ಅವರ ಪಾಲು ಹೆಚ್ಚಾಗಬೇಕಾದಷ್ಟು ಹೆಚ್ಚಾಗುವುದಿಲ್ಲ ಎಂದು ಈ ರಾಜ್ಯಗಳ ಮುಖ್ಯಮಂತ್ರಿಗಳು ಟೀಕಿಸುತ್ತಿದ್ದಾರೆ. ಈ ವಿಷಯದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾರ್ಚ್ 5 ರಂದು ಸರ್ವಪಕ್ಷ ಸಭೆ ಕರೆದರು.

ಇದನ್ನೂ ಓದಿ: “ದ್ವೇಷಕಾರಲು ‘ಪಾಕಿಸ್ತಾನ’ ಎಂಬ ಪದವನ್ನು ಚತುರತೆಯಿಂದ ಹೆಣೆದಿದ್ದಾರೆ”

ಯಾರ ಸೀಟುಗಳೂ ಕಡಿಮೆಯಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಭರವಸೆಯನ್ನು ನಂಬಲು ನಿರಾಕರಿಸಿ, ನಿಜವಾದ ಮರುವಿಂಗಡಣೆಯನ್ನು ಯಾವ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಬೇಕೆಂದು ಒತ್ತಾಯಿಸಿದರು. ಇದು ದಕ್ಷಿಣದ ವಿರುದ್ಧ ಬಿಜೆಪಿ ಮತ್ತು ಕೇಂದ್ರ ಸರ್ಕಾರ ನಡೆಸಿದ ರಾಜಕೀಯ ಪಿತೂರಿ ಎಂದೂ ಆರೋಪಿಸಿದರು.

ಅಮಿತ್ ಶಾ ಅವರ ಭರವಸೆಗಳನ್ನು ನಂಬಲು ಸಾಧ್ಯವಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ರಾಜ್ಯಗಳನ್ನು ಮೌನಗೊಳಿಸಲು ಮರುವಿಂಗಡಣೆಯ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕೇಂದ್ರವು ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ, ಈ ಪುನರ್ವಿಂಗಡಣೆಯನ್ನು ಯಾವ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ಅವರು ಪ್ರಶ್ನಿಸಿದರು. ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರತ್ ಕೂಡ ಕೇಂದ್ರವು ಎಲ್ಲರೊಂದಿಗೂ ಚರ್ಚಿಸಿ ಕ್ರಮ ಕೈಗೊಳ್ಳಬೇಕು, ಅನುಮಾನಗಳನ್ನು ನಿವಾರಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಜನಸಂಖ್ಯಾ ಸಮಸ್ಯೆಯ ಹಿನ್ನೆಲೆ

ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಆಧರಿಸಿದ ಪ್ರಜಾಪ್ರಭುತ್ವವು ಭಾರತೀಯ ಸಂವಿಧಾನದ ಅಡಿಪಾಯವಾಗಿದೆ. ಅದರಂತೆ, ಸಂವಿಧಾನದ 82ನೇ ವಿಧಿಯ ಪ್ರಕಾರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯಬೇಕು ಮತ್ತು ಬದಲಾವಣೆಗಳಿಗೆ ಅನುಗುಣವಾಗಿ ಶಾಸಕಾಂಗ ಕ್ಷೇತ್ರಗಳ ಸಂಖ್ಯೆ ಮತ್ತು ಗಡಿಗಳನ್ನು ಪರಿಷ್ಕರಿಸಬೇಕು. ಇತರ ಪ್ರಭಾವಗಳಿದ್ದರೂ 1976ರವರೆಗೆ ಹಾಗೆಯೇ ನಡೆಯಿತು.

1951 ಜನಗಣತಿ: 494 ಸ್ಥಾನಗಳು | ಜನಸಂಖ್ಯೆ: 36.1 ಕೋಟಿ (ಪ್ರತಿ ಸ್ಥಾನಕ್ಕೆ 7.3 ಲಕ್ಷ ಜನರು)

1961 ಜನಗಣತಿ: 522 ಸ್ಥಾನಗಳು | ಜನಸಂಖ್ಯೆ: 43.9 ಕೋಟಿ (ಪ್ರತಿ ಸ್ಥಾನಕ್ಕೆ 8.4 ಲಕ್ಷ ಜನರು)

1971 ಜನಗಣತಿ: 543 ಸ್ಥಾನಗಳು | ಜನಸಂಖ್ಯೆ: 54.8 ಕೋಟಿ (ಪ್ರತಿ ಸ್ಥಾನಕ್ಕೆ 10.1 ಲಕ್ಷ ಜನರು)

1971 ರ ಜನಗಣತಿಯಿಂದಲೂ ಲೋಕಸಭಾ ಸ್ಥಾನಗಳ ಸಂಖ್ಯೆ ಸ್ಥಗಿತಗೊಂಡಿದೆ. 1976 ರಲ್ಲಿ, ಕುಟುಂಬ ಯೋಜನಾ ಅಭಿಯಾನವು ಉತ್ತುಂಗದಲ್ಲಿದ್ದಾಗ, ಹೆಚ್ಚು ಸಮತೋಲಿತ ವ್ಯಾಯಾಮವನ್ನು ಮಾಡಲು ಅದನ್ನು 25 ವರ್ಷಗಳ ಕಾಲ ಮುಂದೂಡಲು ನಿರ್ಧರಿಸಲಾಯಿತು. ಜನಸಂಖ್ಯಾ ನಿಯಂತ್ರಣವನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಜನಸಂಖ್ಯೆಯ ಬೆಳವಣಿಗೆ ಹೊಂದಿರುವ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವುದನ್ನು ತಡೆಯಲು ಇದನ್ನು ಮಾಡಲಾಯಿತು.

2000 ರವರೆಗೆ ಜಾರಿಯಲ್ಲಿದ್ದ ಈ ಸ್ಥಗಿತವನ್ನು 42 ನೇ ತಿದ್ದುಪಡಿ ಕಾಯ್ದೆಯಿಂದ ಪರಿಚಯಿಸಲಾಯಿತು. 2001 ರಲ್ಲಿ ಮತ್ತೆ, 84 ನೇ ತಿದ್ದುಪಡಿ ಕಾಯ್ದೆಯೊಂದಿಗೆ, ಇದನ್ನು ಇನ್ನೂ 25 ವರ್ಷಗಳ ಕಾಲ ಮುಂದೂಡಲಾಯಿತು, 2026 ರವರೆಗೆ ಇದು ಜಾರಿಯಲ್ಲಿದೆ.

ರಾಜ್ಯವಾರು ಜನಸಂಖ್ಯೆಯ ಏರಿಳಿತ

ಆದಾಗ್ಯೂ, ಜನಸಂಖ್ಯಾ ನಿಯಂತ್ರಣದ ಗುರಿಯತ್ತ ಎಲ್ಲಾ ರಾಜ್ಯಗಳು ಒಂದೇ ರೀತಿಯ ಪ್ರಗತಿಯನ್ನು ಸಾಧಿಸಿಲ್ಲ. ಸರಿಯಾದ ಆರೋಗ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲ ಸೂಚಕಗಳಲ್ಲಿನ ಸುಧಾರಣೆ, ಸಾರ್ವಜನಿಕ ಕಲ್ಯಾಣ ಯೋಜನೆಗಳ ಅನುಷ್ಠಾನ ಮತ್ತು ಆರ್ಥಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯಗಳು ಮಾತ್ರ ಗುರಿಯತ್ತ ಪ್ರಗತಿ ಸಾಧಿಸಿದವು. ರಾಜ್ಯವಾರು ಜನಸಂಖ್ಯೆಯ ಏರಿಳಿತ, ಅದರಲ್ಲಿಯೂ ಉತ್ತರ ಮತ್ತು ದಕ್ಷಿಣ ಭಾರತದ ಜನಸಂಖ್ಯೆಯ ನಡುವಿನ ಏರಿಳಿತದ ವ್ಯತ್ಯಾಸಗಳು ಸಮಸ್ಯೆಗೆ ಕಾರಣವಾಗಿವೆ.

1976ರ ನಂತರದ ಕಾಲದಲ್ಲಿ ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಸಂಯುಕ್ತ ಆಂಧ್ರಪ್ರದೇಶ ಮತ್ತು ನಂತರ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದವು. ತಮಿಳುನಾಡಿನಲ್ಲಿ ಸಂತಾನೋತ್ಪತ್ತಿ ದರ 2001ರಲ್ಲಿ 2.0 ಇತ್ತು. ಅಂದರೆ, ಆ ರಾಜ್ಯದಲ್ಲಿ ಜನಸಂಖ್ಯೆಯು ಸ್ಥಿರತೆಯ ಹಂತವನ್ನು ತಲುಪಿದೆ ಎಂದು ಅಂದಾಜಿಸಲಾಗಿತ್ತು. ಅದೇ ಬಿಹಾರ ಮತ್ತು ಉತ್ತರ ಪ್ರದೇಶವನ್ನು ತೆಗೆದುಕೊಂಡರೆ, 2015ಲ್ಲಿ ಕೂಡಾ ಜನಸಂಖ್ಯಾ ಬೆಳವಣಿಗೆ ದರ 4.0 ರಷ್ಟಿತ್ತು. ಇತರ ಮಾನವಾಭಿವೃದ್ಧಿ ಸೂಚ್ಯಂಕಗಳಲ್ಲಿಯೂ ದಕ್ಷಿಣದ ರಾಜ್ಯಗಳು ಸ್ಪಲ್ಪ ಉತ್ತಮವಾಗಿವೆ.

ದಕ್ಷಿಣ ಭಾರತದಲ್ಲಿ ಫಲವತ್ತತೆ ದರ ಕುಸಿತ

“ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಫಲವತ್ತತೆ ದರ ಕುಸಿತದ ಬದಲಾಯಿಸಲಾಗದ ಬಿಕ್ಕಟ್ಟನ್ನು ಎದುರಿಸುತ್ತಿವೆ, ಇದು ರಾಷ್ಟ್ರೀಯ ಸರಾಸರಿ 2.1 ಕ್ಕಿಂತ ಬಹಳ ಕಡಿಮೆಯಾಗಿದೆ. ತಮಿಳುನಾಡು 1.4 ರ ಅತ್ಯಂತ ಕಡಿಮೆ ಫಲವತ್ತತೆ ದರವನ್ನು ಹೊಂದಿದೆ, ನಂತರ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ 1.5 ಮತ್ತು ಕರ್ನಾಟಕದಲ್ಲಿ 1.6 ಮಾತ್ರ” ಎಂದು ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯ (ಐಐಪಿಎಸ್) ವರದಿಯನ್ನು ಆದರಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ 25, ಅಕ್ಟೋಬರ್ 2024ರಂದು ವರದಿ ಮಾಡಿದೆ.

ಪರಿಣಾಮವಾಗಿ, ಹಿಂದಿ ರಾಜ್ಯಗಳ, ಇನ್ನೂ ವಿಷೇಶವಾಗಿ ಹೇಳುವುದಾದರೆ, ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದ ಜನಸಂಖ್ಯೆ ಮಾತ್ರ ಕಡಿಮೆಯಾಗದೆ ಹೆಚ್ಚುತ್ತಲೇ ಬಂದಿದೆ. ಜನಸಂಖ್ಯಾ ನಿಯಂತ್ರಣ ಕ್ರಮಗಳಲ್ಲಿ ನಿರ್ಲಕ್ಷ್ಯ, ಧಾರ್ಮಿಕ ಸಂಬಂಧಗಳನ್ನು ಒಳಗೊಂಡಂತೆ ಇದರ ಹಿಂದೆ ಹಲವು ರಾಜಕೀಯ ಕಾರಣಗಳು ಇರುವುದು ಸ್ಪಷ್ಟ. ಈಗಿರುವ ಕಾನೂನಿನ ಪ್ರಕಾರ, ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯಸೂಚಿಯಲ್ಲಿ ಬರುತ್ತಿದೆ.

ಎರಡು ರೀತಿಯಲ್ಲಿ ಅನ್ಯಾಯ

ಅಮಿತ್ ಶಾ ಅವರ ಹೇಳಿಕೆಯನ್ನು ನೋಡಿದರೆ, 2026 ರಲ್ಲಿ ಚುನಾವಣಾ ಕ್ಷೇತ್ರಗಳ ಮರು ವಿಂಗಡಣೆಯ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಕಾಣುತ್ತಿದೆ. ಕೇವಲ ಜನಸಂಖ್ಯೆಯ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸಿದರೆ, ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣದಲ್ಲಿ ಸ್ಥಾನಗಳು ಕಡಿಮೆಯಾಗುತ್ತವೆ ಮತ್ತು ಈಗಾಗಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಯುಪಿ, ಬಿಹಾರದಂತಹ ರಾಜ್ಯಗಳಲ್ಲಿನ ಸ್ಥಾನಗಳು ಇನ್ನಷ್ಟು ಹೆಚ್ಚಾಗುತ್ತವೆ.

ನಾಲ್ಕು ಕೋಟಿ ಜನಸಂಖ್ಯೆ ಹೊಂದಿರುವ ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳಿವೆ. 12.6 ಕೋಟಿ ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ 40 ಸ್ಥಾನಗಳಿವೆ. ಸರಾಸರಿಯಾಗಿ, ತೆಲಂಗಾಣದಲ್ಲಿ ಪ್ರತಿ 23 ಲಕ್ಷ ಜನರಿಗೆ ಒಂದು ಸ್ಥಾನವಿದ್ದರೆ, ಬಿಹಾರದಲ್ಲಿ ಪ್ರತಿ 32 ಲಕ್ಷ ಜನರಿಗೆ ಒಂದು ಸ್ಥಾನ ಇದೆ ಎಂಬುದು ಇದರರ್ಥ. ಅದರಲ್ಲಿಯೂ ಸಹ ಜನಸಂಖ್ಯೆಯನ್ನು ಅವಲಂಬಿಸಿ ಅನುಪಾತದ ಆಧಾರದ ಮೇಲೆ ಹೆಚ್ಚಿಸಿದರೆ, ಆ ಸೂತ್ರದ ಪ್ರಕಾರ ಈ ವ್ಯತ್ಯಾಸ ಇನ್ನೂ ಬಹಳಷ್ಟು ಹೆಚ್ಚಾಗಬಹುದು. ಅಂದರೆ ಇಲ್ಲಿ ಒಂದು ಹೆಚ್ಚಾದರೆ, ಅಲ್ಲಿ ನಾಲ್ಕು ಹೆಚ್ಚಾಗುತ್ತದೆ.

ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುತ್ತದೆ

ಲೋಕಸಭೆಯ 543 ಸ್ಥಾನಗಳಲ್ಲಿ 129 ಸ್ಥಾನಗಳು ದಕ್ಷಿಣದ 5 ರಾಜ್ಯಗಳಿಗೆ ಸರಿಸುಮಾರು ಶೇಕಡಾ 24 ರಷ್ಟು ಪ್ರಾತಿನಿಧ್ಯವನ್ನು ನೀಡುತ್ತವೆ. ಈಗ, ಈ ರಾಜ್ಯಗಳಿಗೆ ಅಂದಾಜು ಸ್ಥಾನಗಳನ್ನು ನೋಡಿದರೆ, ಪ್ರತಿ ಕ್ಷೇತ್ರಕ್ಕೆ 20 ಲಕ್ಷ ಜನಸಂಖ್ಯಾ ಅನುಪಾತವನ್ನು ಮಾತ್ರ ಆಧರಿಸಿ, ಒಟ್ಟು ಲೋಕಸಭಾ ಸ್ಥಾನಗಳು 753 ಆಗುತ್ತವೆ. ಆ ಸಂದರ್ಭದಲ್ಲಿ, ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯವು ಸರಿಸುಮಾರು ಹೀಗಿರುತ್ತದೆ:

ಕರ್ನಾಟಕ ಈಗಿನ 28 ಸ್ಥಾನಗಳಿಂದ 36ಕ್ಕೆ, ತೆಲಂಗಾಣ ಈಗಿನ 17 ಸ್ಥಾನಗಳಿಂದ 20ಕ್ಕೆ, ಆಂಧ್ರಪ್ರದೇಶ ಈಗಿನ 25 ಸ್ಥಾನಗಳಿಂದ 28ಕ್ಕೆ, ತಮಿಳುನಾಡು ಈಗಿನ 39 ಸ್ಥಾನಗಳಿಂದ 41ಕ್ಕೆ ಹೆಚ್ಚಳವಾದರೆ, ಕೇರಳ ಈಗಿನ 20 ಸ್ಥಾನಗಳಿಂದ 19ಕ್ಕೆ ಇಳಿದು ಒಂದು ಸ್ಥಾನ ಕಡಿಮೆಯಾಗುತ್ತದೆ. ಅದನ್ನು ಒಟ್ಟುಗೂಡಿಸಿದರೆ 753 ರಲ್ಲಿ 144 ಆಗಿರುತ್ತದೆ. ಈ ರಾಜ್ಯಗಳ ಪ್ರಮಾಣಾನುಗುಣ ಹೆಚ್ಚಳದೊಂದಿಗೆ, ಶೇಕಡಾವಾರು ಪ್ರಾತಿನಿಧ್ಯವು ಮತ್ತಷ್ಟು ಕಡಿಮೆಯಾಗುತ್ತದೆ. ಈ ರಾಜ್ಯಗಳಿಗೆ ಒಟ್ಟು ಪ್ರಾತಿನಿಧ್ಯವು ಶೇಕಡಾ 19 ರಷ್ಟಾಗುತ್ತದೆ. ಅದು ಶೇಕಡಾ ಐದು ರಷ್ಟು ಕುಸಿತ.

ಉತ್ತರ ಪ್ರದೇಶದಲ್ಲಿ ಅತಿ ದೊಡ್ಡ ಏರಿಕೆ

ಒಂದು ಅಂದಾಜಿನ ಪ್ರಕಾರ ಉತ್ತರ ಪ್ರದೇಶದಲ್ಲಿ ಈಗಿನ 80ರಿಂದ 91ಕ್ಕೆ ಹೆಚ್ಚಾಗುತ್ತವೆ. ಬಿಹಾರಕ್ಕೆ 10 ಹೆಚ್ಚಾಗಲಿದ್ದು, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿಯೂ ಗಣನೀಯವಾಗಿ ಏರಿಕೆ ಕಂಡುಬರಲಿದೆ.

ಮತ್ತೊಂದು ಅಂದಾಜಿನ ಪ್ರಕಾರ, 20 ಲಕ್ಷ ಜನಸಂಖ್ಯಾ ಅನುಪಾತವನ್ನು ಅನುಸರಿಸಿ ಕ್ಷೇತ್ರ ವಿಂಗಡಣೆ ಮಾಡಿದರೆ, ಉತ್ತರ ಪ್ರದೇಶದಲ್ಲಿ 80 ರಿಂದ 128 ಕ್ಕೆ (ಆ ರಾಜ್ಯದ ಜನಸಂಖ್ಯೆ 2001ರಲ್ಲಿ 16 ಕೋಟಿ ಇದ್ದದ್ದು ಈಗ 124 ಕೋಟಿಗೆ ಹೆಚ್ಚಳವಾಗಿದೆ), ಬಿಹಾರದಲ್ಲಿ 40 ರಿಂದ 70 ಕ್ಕೆ, ಮಧ್ಯಪ್ರದೇಶದಲ್ಲಿ 29 ರಿಂದ 47 ಕ್ಕೆ, ಮಹಾರಾಷ್ಟ್ರದಲ್ಲಿ 48 ರಿಂದ 68 ಕ್ಕೆ ಮತ್ತು ರಾಜಸ್ಥಾನದಲ್ಲಿ 25 ರಿಂದ 44 ಸ್ಥಾನಗಳಿಗೆ ತೀವ್ರ ಏರಿಕೆ ಕಂಡುಬರಲಿದೆ.

1977 ರಲ್ಲಿ, ಸರಾಸರಿಯಾಗಿ ಪ್ರತಿಯೊಬ್ಬ ಸಂಸದರು 10.11 ಲಕ್ಷ ಮತದಾರರನ್ನು ಪ್ರತಿನಿಧಿಸುತ್ತಿದ್ದರು. ಸರಾಸರಿ ಮತದಾರರ ಸಂಖ್ಯೆಯು ಪ್ರತಿ ಕ್ಷೇತ್ರಕ್ಕೆ ಎಷ್ಟಿರಬೇಕು ಎಂಬುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಹೊಸ ಸಂಸತ್ತಿನಲ್ಲಿ 888 ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದ್ದರಿಂದ, ಹಳೆಯ ಅನುಪಾತ ಸೂತ್ರವು ಮಾನ್ಯವಾಗಿಲ್ಲ. ಇದರ ಹೊರತಾಗಿ, ಇನ್ನೊಂದು ಸಮಸ್ಯೆಯೂ ಇದೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದಾಗ ಅವರಿಗೆ ಮೀಸಲಿಡುವ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಈ ಎರಡೂ ಅಂಶಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದು ಸಹ ಒಂದು ಪ್ರಮುಖ ಅಂಶವಾಗಲಿದೆ. ಇದಕ್ಕೆ ಸಮಂಜಸವಾದ ಪರಿಹಾರವನ್ನು ಕಂಡುಹಿಡಿಯಲು, ಜನಸಂಖ್ಯಾ ಅನುಪಾತದ ಜೊತೆಗೆ ಇತರ ಪ್ರೋತ್ಸಾಹಕ ಸೂಚಕಗಳನ್ನು ನಿರ್ಧರಿಸಬೇಕು.

ಭಾಷೆ ಮತ್ತು ನಿಧಿ ಹಂಚಿಕೆಯ ಸಮಸ್ಯೆಗಳು

ಈ ಬದಲಾವಣೆಗಳು ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಪ್ರಭಾವ ಬೀರುತ್ತವೆ. ಬಿಜೆಪಿ ಎಷ್ಟೇ ಬಾರಿ ದಾಳ ಉರುಳಿಸಿದರೂ, ದಕ್ಷಿಣದಲ್ಲಿ ಸ್ವಂತವಾಗಿ ಅಧಿಕಾರಕ್ಕೆ ಬರುವಷ್ಟು ಬಲವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕರ್ನಾಟಕವನ್ನು ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ಅದು ಪ್ರತ್ಯಕ್ಷ ಮತ್ತು ಪರೋಕ್ಷ ಮಿತ್ರರನ್ನು ಅವಲಂಬಿಸಿದೆ. ಇಂತಹ ಸಮಯದಲ್ಲಿ, ಉತ್ತರ ಭಾರತದಲ್ಲಿ ಸೀಟುಗಳನ್ನು ಹೆಚ್ಚಿಸುವುದು ಮತ್ತು ದಕ್ಷಿಣ ಭಾರತದಲ್ಲಿ ಪುನರ್ವಿಂಗಡಣೆಯ ಹೆಸರಿನಲ್ಲಿ ಸೀಟುಗಳನ್ನು ಕಡಿಮೆ ಮಾಡುವುದು ರಾಜಕೀಯ ಪ್ರೇರಿತವಾಗಿರುತ್ತದೆ.

ಆದ್ದರಿಂದಲೇ, ಈ ವಿಷಯದಲ್ಲಿ ಮೋದಿ-ಶಾ ಜೋಡಿ ಯಾವ ತಂತ್ರಗಳನ್ನು ರೂಪಿಸುತ್ತಿದೆ ಎಂಬುದು ತಿಳಿದಿಲ್ಲ. ಜನಸಂಖ್ಯೆ ಹೆಚ್ಚಾಗಿರುವುದಕ್ಕೆ ಚಾರಿತ್ರಿಕ ಕಾರಣಗಳು ಇವೆಯಾದರೂ ಆ ಪ್ರತಿಪಾದನೆ ಮೂಲಕ ಉತ್ತರದ ರಾಜ್ಯಗಳಿಗೆ ಸೀಟುಗಳನ್ನು ಕಡಿಮೆ ಮಾಡುವುದು ಸರಿಯಲ್ಲ ಎಂದು ಬಿಜೆಪಿಯ ಬೆಂಬಲಿಗರು ವಾದಿಸುತ್ತಿದ್ದಾರೆ. ಉತ್ತರದಿಂದ ಕೂಲಿಕಾರರು ಬಂದು ಅಗ್ಗವಾಗಿ ದುಡಿಯುತ್ತಿರುವ ಕಾರಣದಿಂದಲೇ ತಮಿಳುನಾಡಿನ ಸಂಪತ್ತು ಹೆಚ್ಚಾಗಿದೆ ಎಂಬ ವಿಚಿತ್ರ ಹೇಳಿಕೆಯನ್ನೂ ಅವರು ನೀಡುತ್ತಿದ್ದಾರೆ. ಈಗಾಗಲೇ ಸ್ವಂತ ಬಹುಮತ ಕಳೆದುಕೊಂಡಿರುವ ಬಿಜೆಪಿ, ನಾಳೆ ಮತ್ತಷ್ಟು ಕಡಿತವಾಗದಂತೆ ಉತ್ತರ ಭಾರತದ ರಾಜಕೀಯ ನಡೆಸುತ್ತಿದೆಯೇ ಎಂಬ ಸಂಶಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ನಿಜ ಹೇಳಬೇಕೆಂದರೆ, ನಿಧಿಗಳ ಹಂಚಿಕೆಯಲ್ಲೂ, ಹಿಂದಿ ಭಾಷೆಯ ಹೇರಿಕೆಯಲ್ಲೂ ಇದೇ ವೈರುಧ್ಯಗಳು ಸ್ಪಷ್ಟವಾಗುತ್ತಿದೆ. ಅದಕ್ಕಾಗಿಯೇ ಇದನ್ನು ಕೇವಲ ಚುನಾವಣಾ ಸ್ಥಾನಗಳ ಸಮಸ್ಯೆಯಾಗಿ ನೋಡುವುದು ತಪ್ಪಾಗುತ್ತದೆ. ಭಾರತ ದೇಶದ ಏಕತೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು, ಫೆಡರಲ್ ಸಂವಿಧಾನದ ಅಡಿಯಲ್ಲಿ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವುದು ಇದರಲ್ಲಿ ಅಡಗಿವೆ. ಸೀಟುಗಳನ್ನು ಹೆಚ್ಚಿಸಿ, ದಕ್ಷಿಣ ಭಾರತವನ್ನು ದಕ್ಷಿಣ ರಾಜ್ಯಗಳನ್ನು ಮೌನಗೊಳಿಸು ಪ್ರಯತ್ನವು ಏಕತೆಯ ಭಾವಕ್ಕೆ ಭಂಗ ಬರಲಿದೆ. ನೀತಿ ನಿರ್ಧಾರಗಳಲ್ಲಿನ ಸಮತೋಲನದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಏಕತೆ ಮತ್ತು ಒಕ್ಕೂಟ ತತ್ವಗಳನ್ನು ರಕ್ಷಿಸಲು ಜನತೆ ಮುಂದಾಗಬೇಕಿದೆ.

ಇದನ್ನೂ ನೋಡಿ: Karnataka Legislative Assembly Live Day 07 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *