ಮೀಸಲಾತಿ ಮರುಹಂಚಿಕೆ: ಆದೇಶ ಪ್ರಕಟ

ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ಆರ್ಥಿಕವಾಗಿ ಹಿಂದುಳಿದವರ ಕೋಟಾದಡಿ ಮೀಸಲಾತಿ ಹಂಚಿಕೆ ಮತ್ತು ಹೊಸ ಪ್ರವರ್ಗಗಳನ್ನು ಸೃಜಿಸಿ ಹಿಂದುಳಿದ ವರ್ಗಗಳ ಮೀಸಲಾತಿಯ ಮರುಹಂಚಿಕೆ ಕುರಿತು ಸಂಪುಟ ಸಭೆಯ ನಿರ್ಧಾರವನ್ನು ಅನುಷ್ಠಾನಗೊಳಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.

ಹಿಂದುಳಿದ ವರ್ಗಗಳ ಪ್ರವರ್ಗ 2-ಬಿ ಪಟ್ಟಿಯಲ್ಲಿದ್ದ ಸಮುದಾಯಗಳನ್ನು (ಮುಸ್ಲಿಂ) ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್‌) ಪಟ್ಟಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಇಡಬ್ಲ್ಯುಎಸ್‌ ಕೋಟಾದಡಿ ನಿಗದಿಪಡಿಸಿರುವ ಶೇಕಡ 10ರಷ್ಟು ಮೀಸಲಾತಿಯಲ್ಲಿ ಮುಸ್ಲಿಮರಿಗೂ ಮೀಸಲಾತಿ ನೀಡಬೇಕೆಂಬ ಉಲ್ಲೇಖ ಆದೇಶದಲ್ಲಿದೆ.

ಶೇ. 4ರಷ್ಟು ಮೀಸಲಾತಿ ಮರುಹಂಚಿಕೆ :
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2022ರ ಡಿಸೆಂಬರ್‌ 21ರಂದು ಸಲ್ಲಿಸಿರುವ ಮಧ್ಯಂತರ ವರದಿ ಆಧಾರದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಮರುಹಂಚಿಕೆ ಮಾಡಿ ಮತ್ತೊಂದು ಆದೇಶ ಹೊರಡಿಸಲಾಗಿದೆ. ಮುಸ್ಲಿಮರನ್ನು ಇಡಬ್ಲ್ಯುಎಸ್‌ ಪ್ರವರ್ಗಕ್ಕೆ ಸ್ಥಳಾಂತರ ಮಾಡಿರುವುದರಿಂದ ಉಳಿಯುವ ಶೇ 4ರಷ್ಟು ಮೀಸಲಾತಿಯನ್ನು ಸೇರಿಸಿ ಮರುಹಂಚಿಕೆ ಮಾಡಲಾಗಿದೆ. ಹೊಸದಾಗಿ ಸೃಜಿಸಿರುವ ಪ್ರವರ್ಗ 2-ಸಿ ಮತ್ತು 2-ಡಿಗಳೂ ಸೇರಿದಂತೆ ನಾಲ್ಕು ಪ್ರವರ್ಗಗಳಿಗೆ ಒಟ್ಟು ಶೇ 32ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.

ಪ್ರವರ್ಗ 1ಕ್ಕೆ ಶೇ 4ರಷ್ಟು, ಪ್ರವರ್ಗ 2-ಎಗೆ ಶೇ 15ರಷ್ಟು ಮೀಸಲಾತಿಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಪ್ರವರ್ಗ 2-ಬಿಗೆ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಪ್ರವರ್ಗ 2-ಸಿಗೆ ಶೇ 6ರಷ್ಟು ಮತ್ತು ಪ್ರವರ್ಗ 2-ಡಿಗೆ ಶೇ 7ರಷ್ಟು ಮೀಸಲಾತಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಎರಡೂ ಆದೇಶಗಳ ಅನುಸಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಒಳಮೀಸಲಾತಿ; ಸದಾಶಿವ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿಲ್ಲ

ಎಸ್‌ಸಿ: ಯಾರಿಗೆ ಎಷ್ಟು ಒಳ ಮೀಸಲು
ಪರಿಶಿಷ್ಟ ಜಾತಿಗೆ ನೀಡಿರುವ ಶೇಕಡ 17ರಷ್ಟು ಮೀಸಲಾತಿಯನ್ನು 101 ಜಾತಿಗಳಿಗೆ ಮರುಹಂಚಿಕೆ ಮಾಡಿ ಒಳ ಮೀಸಲಾತಿ ಕಲ್ಪಿಸುವುದಕ್ಕೂ ಸಮಾಜ ಕಲ್ಯಾಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಮೊದಲ ಗುಂಪಿನಲ್ಲಿ ಆದಿ ದ್ರಾವಿಢ, ಭಾಂಭಿ, ಮಾದಿಗ, ಸಮಗಾರ ಜಾತಿಗಳಿಗೆ ಶೇ 6ರಷ್ಟು, ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಛಲವಾದಿ, ಚೆನ್ನದಾಸರ/ಹೊಲೆಯ ದಾಸರ, ಮಹರ್/ತರಲ್/ ಧೇಗುಮೇಗು ಜಾತಿಗಳಿಗೆ ಶೇ 5.5ರಷ್ಟು, ಮೂರನೇ ಗುಂಪಿನಲ್ಲಿ ಬಂಜಾರ/ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳಿಗೆ ಶೇ 4.5ರಷ್ಟು ಮತ್ತು ನಾಲ್ಕನೇ ಗುಂಪಿನಲ್ಲಿ ಆದಿ ಆಂಧ್ರ, ಆದಿಯಾ, ಅಜಿಲರು ಸೇರಿದಂತೆ 89 ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *