ಬಸ್ ಪ್ರಯಾಣ ದರದಲ್ಲಿ ಭಾರಿ ಏರಿಕೆಗೆ ಶಿಫಾರಸು: ಬಿಎಂಟಿಸಿಗೆ ಶೇ.45, ಇತರ ಮೂರು ನಿಗಮಗಳಿಗೆ ಶೇ.28 ಹೆಚ್ಚಳ!

ನವೆಂಬರ್ 4ರಂದು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ; ನವೆಂಬರ್ 3ರಂದು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ
ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಬಸ್ ಪ್ರಯಾಣ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪ್ರಯಾಣ ದರವನ್ನು ಶೇ.45ರಷ್ಟು ಹಾಗೂ ರಾಜ್ಯದ ಇತರ ಮೂರು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಗಳ ದರವನ್ನು ಶೇ.28ರಷ್ಟು ಹೆಚ್ಚಿಸುವಂತೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ.

ದರ ಏರಿಕೆ ಕುರಿತು ರಾಜ್ಯ ಸರ್ಕಾರ ಮುಂದಿನ ವಾರ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ನವೆಂಬರ್ 3ರಂದು ನಾಲ್ಕೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನವೆಂಬರ್ 4ರಂದು ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಶಿಫಾರಸಿನ ಪ್ರಕಾರ, ಬಿಎಂಟಿಸಿಗೆ ಶೇ.45ರಷ್ಟು ದರ ಹೆಚ್ಚಳ ಮಾಡಬೇಕು. ನಗರ ಪ್ರದೇಶದ ಕಾರ್ಯಾಚರಣೆಯ ವೆಚ್ಚ ಮತ್ತು ಅಲ್ಲಿನ ಸಾರಿಗೆ ವ್ಯವಸ್ಥೆಯ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮಾಣದ ಹೆಚ್ಚಳವನ್ನು ಸಮಿತಿ ಶಿಫಾರಸು ಮಾಡಿದೆ.

ಇನ್ನು ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಿಗಮಗಳಿಗೆ ಶೇ.28ರಷ್ಟು ದರ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಈ ಮೂರು ನಿಗಮಗಳ ಗ್ರಾಮೀಣ, ನಗರ ಮತ್ತು ಅಂತರನಗರ ಸೇವೆಗಳಿಗೆ ಹೋಲಿಕೆಯಾಗುವ ರೀತಿಯಲ್ಲಿ ಒಂದೇ ಮಾದರಿಯ ದರ ವ್ಯವಸ್ಥೆ ರೂಪಿಸುವಂತೆಯೂ ಸಮಿತಿ ಸೂಚಿಸಿದೆ. ಬಿಎಂಟಿಸಿಗೆ ಪ್ರತ್ಯೇಕ ನಗರ ಸಾರಿಗೆ ದರ ವ್ಯವಸ್ಥೆ ಮುಂದುವರಿಸುವಂತೆ ಶಿಫಾರಸು ಮಾಡಿದೆ.

ಆದರೆ, ಈ ಪ್ರಮಾಣದ ದರ ಏರಿಕೆಗೆ ಸರ್ಕಾರ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ. ಸಮಿತಿಯ ಶಿಫಾರಸುಗಳು ಮಾತ್ರ ಹೊರಬಿದ್ದಿದ್ದು, ನವೆಂಬರ್ 3ರ ಸಭೆಯ ಬಳಿಕವಷ್ಟೇ ದರ ಏರಿಕೆಯ ಪ್ರಮಾಣದ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚದ ನೆಪ

ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಸಮಿತಿ ತನ್ನ ಶಿಫಾರಸಿನಲ್ಲಿ ಪ್ರಮುಖವಾಗಿ ಉಲ್ಲೇಖಿಸಿದೆ. ಇಂಧನ, ಸಿಬ್ಬಂದಿ ವೇತನ, ವಾಹನಗಳ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಾಚರಣೆ ವೆಚ್ಚಗಳು ಹೆಚ್ಚಾಗಿವೆ. ಮತ್ತೊಂದೆಡೆ, ದೀರ್ಘಕಾಲದಿಂದ ಪ್ರಯಾಣ ದರ ಪರಿಷ್ಕರಣೆ ಆಗದಿರುವುದರಿಂದ ಸೇವೆ ಒದಗಿಸುವ ವೆಚ್ಚ ಮತ್ತು ಪ್ರಯಾಣಿಕರಿಂದ ಸಂಗ್ರಹವಾಗುವ ಆದಾಯದ ನಡುವೆ ಅಂತರ ಹೆಚ್ಚಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಕೇವಲ ಕಾರ್ಯಕ್ಷಮತೆ ಸುಧಾರಿಸುವುದರಿಂದ ಈ ಆರ್ಥಿಕ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ ಎಂದೂ ಸಮಿತಿ ಹೇಳಿದೆ. ಕಾರ್ಯಾಚರಣೆಯ ವೆಚ್ಚ, ಇತರ ಮೂಲಗಳಿಂದ ಬರುವ ಆದಾಯ ಮತ್ತು ಸರ್ಕಾರದ ಖಚಿತ ಆರ್ಥಿಕ ನೆರವನ್ನು ಪರಿಗಣಿಸಿ ಪ್ರಯಾಣಿಕರ ಟಿಕೆಟ್ ದರದ ಮೂಲಕ ಸಂಗ್ರಹಿಸಬೇಕಾದ ಮೊತ್ತವನ್ನು ನಿರ್ಧರಿಸುವ ‘ಮಾರ್ಪಡಿಸಿದ ವಾರ್ಷಿಕ ಆದಾಯ ಅಗತ್ಯ’ (Modified Annual Revenue Requirement – ARR) ಆಧಾರದಲ್ಲಿ ಶಿಫಾರಸುಗಳನ್ನು ರೂಪಿಸಲಾಗಿದೆ.

ಇದನ್ನೂ ಓದಿ :ಜಾಮಿಯಾ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ: ವಿದ್ಯಾರ್ಥಿ ಸಂಘದ ಸಂವಿಧಾನ ಜಾರಿಗೆ ಒಪ್ಪಿದ ವಿಶ್ವವಿದ್ಯಾಲಯ

ದರ ಏರಿಕೆ ಮಾಡದಿದ್ದರೆ ಸರ್ಕಾರವೇ ಹೊಣೆ ಹೊರಬೇಕು

ಸಮಿತಿಯ ಮತ್ತೊಂದು ಪ್ರಮುಖ ಶಿಫಾರಸಿನ ಪ್ರಕಾರ, ಸರ್ಕಾರವು ಪ್ರಯಾಣಿಕರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಸಮಿತಿ ಅಂದಾಜಿಸಿರುವ ಮಟ್ಟಕ್ಕಿಂತ ಕಡಿಮೆ ದರ ನಿಗದಿಪಡಿಸಿದರೆ, ಅದರಿಂದ ಉಂಟಾಗುವ ಆದಾಯದ ಕೊರತೆಯನ್ನು ‘ನೀತಿ ದರ ಅಂತರ’ (Policy Fare Gap) ಎಂದು ಪರಿಗಣಿಸಬೇಕು. ಈ ಕೊರತೆಯನ್ನು ರಾಜ್ಯ ಸರ್ಕಾರವು ತನ್ನ ಬಜೆಟ್‌ನಿಂದ ಸಂಪೂರ್ಣವಾಗಿ ಭರಿಸಬೇಕು ಎಂದು ಸಮಿತಿ ಸೂಚಿಸಿದೆ.

ಇದಲ್ಲದೆ, ಸಾರಿಗೆ ನಿಗಮಗಳ ಕಾರ್ಯಾಚರಣೆ ವೆಚ್ಚ ಮತ್ತು ಆದಾಯವನ್ನು ಪ್ರತಿವರ್ಷ ಪರಿಶೀಲಿಸಿ, ವಾಸ್ತವಿಕ ಆರ್ಥಿಕ ಫಲಿತಾಂಶಗಳ ಆಧಾರದಲ್ಲಿ ದರ ಪರಿಷ್ಕರಣೆ ಮಾಡುವ ವ್ಯವಸ್ಥೆ ರೂಪಿಸಬೇಕು. ಪ್ರಯಾಣದ ಹಂತ ಮತ್ತು ಸೇವೆಯ ಆಧಾರದಲ್ಲಿ ದರಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.

ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ

2025ರ ಜನವರಿಯಲ್ಲಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆಗೆ ಶಿಫಾರಸು ಮಾಡಿರುವುದು ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ದುಡಿಯುವ ವರ್ಗದವರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀರುವ ಸಾಧ್ಯತೆಯಿದೆ.

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸುವ ನಿರ್ಧಾರ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ. ನವೆಂಬರ್ 3ರಂದು ನಡೆಯಲಿರುವ ಸಭೆ ಮತ್ತು ನವೆಂಬರ್ 4ರಂದು ಸರ್ಕಾರ ಪ್ರಕಟಿಸಲಿರುವ ನಿರ್ಧಾರವು ರಾಜ್ಯದ ಲಕ್ಷಾಂತರ ಬಸ್ ಪ್ರಯಾಣಿಕರ ಖರ್ಚಿನ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ನೋಡಿ :ಎಸ್‌ಐಆರ್‌ ಕರ್ನಾಟಕ | ಪತ್ತೆಯಾದ ವಿದೇಶಿ ಪ್ರಜೆಗಳೆಷ್ಟು? ಬಾಂಗ್ಲಾದೇಶದವರು ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *