ಆರ್ಥಿಕ ಹಿಂಜರಿತ ಮತ್ತು ಅಭಿವೃದ್ಧಿ : ನಿಜ ಭ್ರಮೆಗಳಾಚೆ

ಜಿಡಿಪಿ

 ಬಿ. ಶ್ರೀಪಾದ ಭಟ್

ಸರಳವಾಗಿ ವಿವರಿಸಬೇಕೆಂದರೆ ಈ ದೇಶದ ಶ್ರೇಣೀಕೃತ ವರ್ಗ ವ್ಯವಸ್ಥೆಯಲ್ಲಿ ಕೆಳವರ್ಗದ, ಅತಿ ಕೆಳವರ್ಗದ ಶೇ.70 ಜನಸಂಖ್ಯೆಯ ವಾರ್ಷಿಕ ಆದಾಯ ಅಥವಾ ಕಳೆದ ಹತ್ತು ವರ್ಷಗಳ ಆದಾಯ ಎಷ್ಟಿದೆ? ಮದ್ಯಮ ವರ್ಗದ ಶೇ.20 ಜನಸಂಖ್ಯೆಯ, ಮೇಲ್ವರ್ಗದ ಶ್ರೀಮಂತರ ಶೇ.9, ಅತಿ ಶ್ರೀಮಂತರ ಶೇ.1 ಜನಸಂಖ್ಯೆಯ ವಾರ್ಷಿಕ ಅಥವಾ ಕಳೆದ ಹತ್ತು ವರ್ಷಗಳ ಆದಾಯ ಎಷ್ಟಿದೆ? ಇಲ್ಲಿನ ಜಿಡಿಪಿ ಲೆಕ್ಕಾಚಾರವು ಈ ಎಲ್ಲಾ ಅಂಶಗಳನ್ನು ಬಿಡಿಬಿಡಿಯಾಗಿ ಪರಿಗಣಿಸುವುದಿಲ್ಲ. ಬದಲಿಗೆ ಬಂಡವಾಳ ಹೂಡಿಕೆ, ಬಂಡವಾಳದ ಪುನರುತ್ಪಾದನೆ, ಮಿಗುತಾಯ ಮೌಲ್ಯ ಮತ್ತು ಜೀವನೋಪಾಯದ ಉಳಿತಾಯದ ಪ್ರಮಾಣದ ಮೇಲೆ ಜಿಡಿಪಿಯ ಅಬಿವೃದ್ದಿ ಸೂಚ್ಯಂಕದ ಲೆಕ್ಕಾಚಾರವನ್ನು ನಿರ್ಧರಿಸುತ್ತಾರೆ.

ಪ್ರಸ್ತುತ ಬಿಕ್ಕಟ್ಟು

1990ರ ನವ ಉದಾರೀಕರಣದ ನಂತರ ಆರ್ಥಿಕ ಅಭಿವೃದ್ಧಿ ಕುರಿತಾದ ನೀತಿಗಳು, ಸರಕಾರದ ಅಂಕಿಅಂಶಗಳು ಸದಾ ಚರ್ಚೆಗೊಳಪಟ್ಟಿವೆ. ನಿಸ್ಸಿಂ ನಿಕೋಲಾಸ್ ತಲೆಬ್ ‘ಒಂದು ಕತೆಯನ್ನು ಕದಲಿಸಲು ಮತ್ತೊಂದು ಕತೆಯ ಅಗತ್ಯವಿದೆ. ವಿಚಾರಗಳಿಗಿಂತಲೂ ರೂಪಕಗಳು, ಕತೆಗಳು ತುಂಬಾ ಪ್ರಭಾವಶಾಲಿಯಾಗಿವೆ… ವಿಚಾರಗಳು ಬರುತ್ತವೆ, ಹೋಗುತ್ತವೆ. ಆದರೆ ಕತೆಗಳು ಉಳಿದುಕೊಳ್ಳುತ್ತವೆ’ ಎಂದು ಬರೆಯುತ್ತಾರೆ. ಮೋದಿ ನೇತೃತ್ವ ಬಿಜೆಪಿ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆಯ ಕುರಿತು ಕಟ್ಟಿದ, ತೇಲಿಬಿಟ್ಟ ಕತೆಗಳು ಅವರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಮ್ಮದೇ ಕೊಡುಗೆ ನೀಡಿವೆ. ಮೋದಿ & ಟೀಂನ ಈ ಸುಳ್ಳು ಕತೆಗಳ ಮುಂದೆ ನಿಷ್ಪಕ್ಷಪಾತ, ಅಂಕಿಅಂಶಗಳನ್ನು ಆಧರಿಸಿದ ಆರ್ಥಿಕ ವಿಚಾರಗಳಿಗೆ ಯಾವುದೇ ಬೆಂಬಲ ದೊರಕುತ್ತಿಲ್ಲ.

ಉದಾಹರಣೆಗೆ 2016ರಲ್ಲಿ ಚಲಾವಣೆಯಲ್ಲಿದ್ದ ಶೇ.85ರಷ್ಟು ನೋಟುಗಳನ್ನು ಅಮಾನ್ಯಗೊಳಿಸಿದ ಮೋದಿಯವರ ದಿಢೀರ್ ನಿರ್ಧಾರದಿಂದ ಭಾರತದ ಆರ್ಥಿಕತೆ ದಶಕಗಳಷ್ಟು ಹಿಂದಕ್ಕೆ ತಳ್ಳಲ್ಪಟ್ಟಿತು. ಉದ್ಯೋಗ ನಷ್ಟವಾಯಿತು. ಎಂಎಸ್‌ಎಂಇ ಮುಚ್ಚಿಕೊಂಡವು. ಆದರೆ ಕಪ್ಪುಹಣ, ದೇಶಪ್ರೇಮ ಎಂದು ಕತೆ ಕಟ್ಟಿದ ಮೋದಿಯವರನ್ನು ನಂಬಿದ ಬಹುಸಂಖ್ಯಾತರು 2017ರ ಉತ್ತರ ಪ್ರದೇಶ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಮರಳಿ ಬಿಜೆಪಿ ಪಕ್ಷಕಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟರು. ವಾಸ್ತವವನ್ನು ಬಿಂಬಿಸುವ ನೈಜ ವಿಚಾರಗಳು ಗೋರಿಗಳಲ್ಲಿ ಹೂತು ಹೋದವು. ಮಾರ್ಚ 24, 2020ರಂದು ಪ್ರಧಾನಿ ಮೋದಿ ಯಾವುದೇ ಮುನ್ಸೂಚನೆ ನೀಡದೆ ಲಾಕ್ ಡೌನ್ ಘೋಷಿಸಿದ್ದರ ಪರಿಣಾಮವಾಗಿ ಸುಮಾರು 40 ಕೋಟಿ ಜನಸಂಖ್ಯೆ ಆಹಾರವಿಲ್ಲದೆ, ಉದ್ಯೋಗವಿಲ್ಲದೆ ಬೀದಿಗೆ ಬರುವಂತಾಯಿತು. ಸುಮಾರು 12 ಕೋಟಿ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಮರಳಿ ತಮ್ಮ ಊರಿಗೆ ರಿವರ್ಸ ವಲಸೆ ಹೊರಟರು. ಲಕ್ಷಾಂತರ ಕಾರ್ಮಿಕರು ವಾಹನ, ರೈಲು ಸೇವೆಗಳ ಲಭ್ಯವಿಲ್ಲದೆ ಕಾಲ್ನಡಿಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದ ಹಸಿವಿನ ಭೀಕರತೆ, ಸರಕಾರದ ನಿರ್ಲಕ್ಷ್ಯ  ಕಾರಣದಿಂದ ಅಂದಾಜು 800 ವಲಸೆ ಕಾರ್ಮಿಕರು ಮೃತರಾಗಿದ್ದಾರೆ. ಅಂದಾಜು 200 ಜನ ಹಸಿವಿನಿಂದ ಮೃತರಾಗಿದ್ದಾರೆ. ರೈಲು ಪ್ರಯಾಣದಲ್ಲಿ ನಿಶ್ಯಕ್ತಿ ಮತ್ತು ಆಹಾರ ದೊರಕದೆ 90 ಜನ ಮೃತರಾಗಿದ್ದಾರೆ. ಇದು ವಾಸ್ತವ ಘಟನೆಗಳು, ಸಂಗತಿಗಳು.

26, ಮಾರ್ಚ 2020ರಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ʼ (ಪಿಎಂಜಿಕೆಪಿ) ಅಡಿಯಲ್ಲಿ ೮೦ ಕೋಟಿ ಜನಸಂಖ್ಯೆಗೆ (‘ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ 2011ರ ಜನಗಣತಿ ಆದಾರದ ಮೇಲೆ ಗುರುತಿಸಲ್ಪಟ್ಟ ಶೇ.67% ಜನಸಂಖ್ಯೆ) ಈಗಾಗಲೆ ದೊರಕುತ್ತಿರುವ 5 ಕೆ.ಜಿ. ಪಡಿತರದ ಜೊತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಬೇಳೆ, ಕಾಳು ಉಚಿತವಾಗಿ ವಿತರಿಸಲಾಗುವುದು, ಇದನ್ನು ಎಪ್ರಿಲ್, ಮೇ, ಜೂನ್ ಮೂರು ತಿಂಗಳು ಕೊಡಲಾಗುತ್ತದೆ ಎಂದು ಹೇಳಿದರು. ಆದರೆ ‘ದ ವೈರ್ ಇನ್ ನ ವರದಿಯ ಪ್ರಕಾರ 14 ಕೋಟಿ ಜನಸಂಖ್ಯೆಗೆ 2020ರ ಮೇ ತಿಂಗಳಲ್ಲಿ, 6.4 ಕೋಟಿ ಜನಸಂಖ್ಯೆಗೆ ಎಪ್ರಿಲ್ ತಿಂಗಳಿಂದ ಈ 5 ಕೆ.ಜಿ. ಬೇಳೆ ಕಾಳು,  ದೊರಕಿಲ್ಲ. ಇದರ ಜೊತೆಗೆ 20 ಕೋಟಿ ಜನಸಂಖ್ಯೆಗೆ 2020ರ ಎಪ್ರಿಲ್ ತಿಂಗಳಲ್ಲಿ ಹೆಚ್ಚುವರಿ 5 ಕೆ.ಜಿ. ಬೇಳೆ, ಕಾಳು ದೊರೆತಿರಲಿಲ್ಲ. ಜೂನ್ ತಿಂಗಳಲ್ಲಿ ಪರಿಶೀಲಿಸಿದಾಗ 6 ಕೋಟಿ ಜನಸಂಖ್ಯೆಗೆ ಹೆಚ್ಚುವರಿ ಪಡಿತರ ದೊರಕಿರಲಿಲ್ಲ. ಅಲ್ಲದೆ ಎಲ್ಲಕ್ಕಿಂತಲೂ ಮುಖ್ಯವಾಗಿ ಜೀನ್ ಡ್ರೀಜೆ, ಮೇಘನಾ ಮುಂಗೇಕರ್ ಅವರು ಹೇಳಿದಂತೆ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ’ (ಎನ್‌ಎಫ್‌ಎಸ್‌ಎ) ಕಾಯಿದೆಯ ಅನುಸಾರ ಪಡಿತರ ವಿತರಣೆಗೆ ಶೇಕಡಾ 67% ಪ್ರಮಾಣದ ಜನಸಂಖ್ಯೆಯನ್ನು 2011ರ ಜನಗಣತಿಯನ್ನು ಆಧರಿಸಲಾಗಿತ್ತು. ಆದರೆ ಕಳೆದ 9 ವರ್ಷಗಳಲ್ಲಿ 10 ಕೋಟಿ ಜನಸಂಖ್ಯೆ ಹೆಚ್ಚಳವಾಗಿದೆ ಹಾಗೂ ಇವರನ್ನು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಪರಿಗಣಿಸಿಲ್ಲ ಮತ್ತು ಇವರೆಲ್ಲರೂ ಪಡಿತರ ಸೌಲಬ್ಯದಿಂದ ವಂಚಿತರಾಗಿದ್ದಾರೆ.ಆದರೆ ಕತೆಯೇ ಮುಖ್ಯವಾಗಿ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮರು ಆಯ್ಕೆಯಾಯಿತು. ವಿಚಾರಗಳಿಗೆ ಮೊಳೆ ಹೊಡೆಯಲಾಯಿತು.

ಇದನ್ನೂ  ಓದಿ:6,366 ಕೋಟಿ ನರೇಗಾ ವೇತನ ಬಾಕಿ ಉಳಿಸಿಕೊಂಡಿರುವ ಮೋದಿ ಸರ್ಕಾರ: ಖರ್ಗೆ ಆರೋಪ

ಪ್ರಸ್ತುತ ನಾಜೀವಾದದ ಸಂದರ್ಭದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಗೋಬೆಲ್ಸ್ ಕತೆಗಳ ಮುಂದೆ ಮೇಲೆ ಉದಾಹರಿಸಿದ ವಾಸ್ತವ ಅಂಕಿಅಂಶಗಳು ತೆರೆಮರೆಗೆ ಸರಿದುಬಿಡುತ್ತವೆ. ಜನಗಳಿಗೂ ತಲೆಚಿಟ್ಟು ಹಿಡಿಸುವ ತಮ್ಮದೇ ಬದುಕಿನ ಸಂಗತಿಗಳಿಗಿಂತ ಮೋದಿ ತೇಲಿಬಿಡುವ ಸುಳ್ಳುಗಳ ಫ್ಯಾಂಟಸಿ ಲೋಕ ಇಷ್ಟವಾಗುತ್ತದೆ. ಕಳೆದ ವಾರ ದ.ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಮಾತನಾಡುತ್ತಾ ಮೋದಿ ‘ಅತಿ ಶೀಘ್ರದಲ್ಲಿ ಭಾರತವು 5 ಟ್ರಿಲಿಯನ್ (500 ಲಕ್ಷ ಕೋಟಿ) ಆರ್ಥಿಕತೆ ದೇಶವಾಗಲಿದೆ’ ಎಂದು ಹೇಳಿದರು. 77ನೆ ಸ್ವಾತಂತ್ರ್ಯಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಿಂದ ಮಾತನಾಡುತ್ತಾ ‘2014ರಲ್ಲಿ ಭಾರತವು 10ನೇ ಅತಿ ದೊಡ್ಡ ಆರ್ಥಿಕ ದೇಶವಾಗಿತ್ತು, ಈಗ 5ನೇ ಪಟ್ಟಿಯಲ್ಲಿದೆ, ಮುಂದಿನ ದಿನಗಳಲ್ಲಿ ಮೂರನೆ ಆರ್ಥಿಕ ದೇಶವಾಗಲಿದೆ ಎಂದು ಹೇಳಿದರು. ಇದು ಎಲ್ಲಾ ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಯಾಗಿ ಬಿತ್ತರಗೊಂಡಿತು. ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ಸುದ್ದಿಯಾಗಿ ಪ್ರಚಾರಗೊಂಡಿತು. ಈ ಹುಸಿ ಘೋಷಣೆಗಳ ಮೂಲಕ 2024ರ ಚುನಾವಣೆಗೆ ವೇದಿಕೆಯೂ ಸಜ್ಜಾಯಿತು. ಆದರೆ ಸತ್ಯ ಮತ್ತು ವಾಸ್ತವಗಳು ಕತ್ತಲಿನ ಮೂಲೆಗೆ ತಳ್ಳಲ್ಪಟ್ಟಿತು. ಜಿಡಿಪಿ

ಹಾಗಿದ್ದಲ್ಲಿ ಏನಿದು ವಾಸ್ತವ? ಏನಿದು ಸತ್ಯ? ಹಾದಿ ತಪ್ಪಿದ ಆರ್ಥಿಕತೆ

ಇಲ್ಲಿನ ಪ್ರತಿಷ್ಠಿತರು, ಕ್ರೂನಿ ಬಂಡವಾಳಶಾಹಿಗಳು, ಬಹುಪಾಲು ಮಾಧ್ಯಮಗಳು ಸೃಷ್ಟಿಸಿದ “ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಕತೆ 2004ರ ವಾಜಪೇಯಿ ಕಾಲಕ್ಕಿಂತಲೂ ಟೊಳ್ಳಾಗಿದೆ. ಐಎಂಎಫ್ ಸಂಸ್ಥೆಯು ಈ ವರ್ಷ ಭಾರತದ ಜಿಡಿಪಿ ಶೇ.6.1ರಷ್ಟು ಮತ್ತು ಮುಂದಿನ ವರ್ಷ ಶೇ.6.8ರಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ. ವಾಸ್ತವದಲ್ಲಿ ಇದು ಪರೀಕ್ಷೆಯಲ್ಲಿ 100 ಮಾರ್ಕ್ಸಗೆ 20 ಅಂಕಗಳನ್ನು ತೆಗೆದುಕೊಂಡವ ಮುಂದಿನ ವರ್ಷ 40 ಅಂಕಗಳನ್ನು ಗಳಿಸಿದಾಗ ಅದನ್ನು ಡಬಲ್ ಧಮಾಕ, ದುಪ್ಪಟ್ಟು ಹೆಚ್ಚಳ ಎಂದು ಪೋಷಕರು ಕೊಚ್ಚಿಕೊಂಡಂತೆ. ಇದನ್ನೇ ಮುಂದಿಟ್ಟುಕೊಂಡು ಸಂಘ ಪರಿವಾರವು “ಭಾರತದ ದಶಕ’ ಶುರುವಾಗಿದೆ ಎಂದು ರಾಗ ಶುರು ಮಾಡಿದೆ. ಮಾಧ್ಯಮಗಳೂ ಪಕ್ಕವಾದ್ಯ ನುಡಿಸುತ್ತಿದ್ದಾರೆ. ಆದರೆ ಬಿಜೆಪಿ ಮತ್ತು ಮಾಧ್ಯಮಗಳು ಆಡುತ್ತಿರುವ ಈ ಅಂಕಿಅಂಶಗಳ ಮೇಲಾಟದಲ್ಲಿ ಇಂಡಿಯಾದ ಭಯಾನಕ ಆರ್ಥಿಕ ಪರಿಸ್ಥಿತಿ ಚರ್ಚೆಗೆ ಬರುತ್ತಿಲ್ಲ. ಕೋವಿಡ್ ಕಾಲದ ಆರ್ಥಿಕ ದುಸ್ಥಿತಿಯನ್ನು ಎಲ್ಲರೂ ಮರೆತಿದ್ದಾರೆ.

2020ರ ಕೋವಿಡ್ ಸಂದರ್ಭದಲ್ಲಿ ಜಿಡಿಪಿಯುಶೇ. 7ರಷ್ಟು ಋಣಾತ್ಮಕ ಕುಸಿತ ಕಂಡಿತ್ತು. crisil (Credit Rating Information Services Of India Limited) ಎಂಬ ಅಂತರಾಷ್ಟ್ರೀಯ ಏಜೆನ್ಸಿ 2021ರ ವಿತ್ತೀಯ ಅವಧಿಯಲ್ಲಿ ಜಿಡಿಪಿ ಶೇಕಡಾ 5% ಪ್ರಮಾಣಕ್ಕಿಂತಲೂ ಕಡಿಮೆಯಾಗಲಿದೆ, ಆದರೆ ಕೃಷಿಯೇತರ ಜಿಡಿಪಿ 6% ಪ್ರಮಾಣಕ್ಕೆ ಕುಸಿಯಲಿದೆ ಎಂದು ಹೇಳಿತ್ತು. ಸ್ವಾತಂತ್ರ್ಯಯ ಬಂದ ನಂತರ ಇದು ನಾಲ್ಕನೆ ಆರ್ಥಿಕ ಹಿಂಜರಿತ. ಈ ಹಿಂದೆ 1958, 1966, 1980ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು. ಆಗ ಸತತವಾಗಿ ಕೈಕೊಟ್ಟ ಮುಂಗಾರು ಹಿಂಜರಿತಕ್ಕೆ ಪ್ರಧಾನ ಕಾರಣವಾಗಿತ್ತು ಮತ್ತು ಆ ಕಾಲದಲ್ಲಿ ಜಿಡಿಪಿಗೆ ಕೃಷಿಯ ಕೊಡುಗೆ ಶೇ.50% ಪ್ರಮಾಣಕ್ಕಿಂತಲೂ ಹೆಚ್ಚಿತ್ತು ಎಂದು ಏಜನ್ಸಿ ವಿವರಿಸಿದೆ.ಆದರೆ ಮೋದಿ ಸರಕಾರದ ವಿಫಲ ಆರ್ಥಿಕ ನೀತಿ ಮತ್ತು ಗೊತ್ತು ಗುರಿಯಿಲ್ಲದ ನಿರ್ಧಾರಗಳಿಂದಾಗಿ 2017ರಿಂದ ಇಂದಿನವರೆಗೆ ಸತತವಾಗಿ ಆರ್ಥಿಕ ಕುಸಿತ ಉಂಟಾಗಿದೆ. ಕೋವಿಡ್ ಪೂರ್ವದಲ್ಲಿಯೇ ಹಳಿ ತಪ್ಪಿದ ಆರ್ಥಿಕ ಪರಿಸ್ಥಿತಿ ಕೋವಿಡ್ ನಂತರದಲ್ಲಿ ಮತ್ತಷ್ಟು ಹದಗೆಟ್ಟಿದೆ. ಕೋವಿಡ್ ನಂತರದ ಮೂರು ವರ್ಷಗಳಲ್ಲಿ ಭಾರತದ ವಾರ್ಷಿಕ ಅಭಿವೃದ್ಧಿಯು ಸರಾಸರಿ ಶೇ.3.5ರಷ್ಟಿದೆ. ಕೋವಿಡ್‌ಪೂರ್ವದ 2019-2020ಜಿಡಿಪಿ ಸೂಚ್ಯಂಕ 4.2%ಪ್ರಮಾಣದಲ್ಲಿದ್ದರೆ, ಆ ವರ್ಷದ ಜನವರಿ-ಮಾರ್ಚ ತ್ರೈಮಾಸಿಕದಲ್ಲಿ ಕಳೆದ ಹನ್ನೊಂದು ವರ್ಷಗಳ ಇತಿಹಾಸದಲ್ಲಿ ಕನಿಷ್ಟ 3.1% ಪ್ರಮಾಣಕ್ಕೆ ತಲುಪಿತ್ತು. ಜಿಡಿಪಿ

ನಿರುದ್ಯೋಗ

ಯಾವುದೇ ದೇಶದ ಅಭಿವೃದ್ಧಿಯ ಅಳತೆಗೆ ಅಲ್ಲಿನ ಉದ್ಯೋಗ ಮತ್ತು ನಿರುದ್ಯೋಗದ ಪ್ರಮಾಣವು ಮುಖ್ಯ ಮಾನದಂಡವಾಗಿರುತ್ತದೆ. ಕಳೆದ ಒಂಬತ್ತು ವರ್ಷಗಳ ಮೋದಿ ನೇತೃತ್ವದ ಆಡಳಿತದಲ್ಲಿ ಉದ್ಯೋಗ ವಲಯವು ದಾರುಣ ಸ್ಥಿತಿಯಲ್ಲಿದೆ. ವಿಶ್ವ ಬ್ಯಾಂಕ್ ಆರ್ಥಿಕ ತಜ್ಞೆ ಸುಪ್ರಿಯೋ ‘2011ರ ಜನಗಣತಿಯ ಪ್ರಕಾರ ಭಾರತದೊಳಗಡೆ 45 ಕೋಟಿ ಜನಸಂಖ್ಯೆ ಉದ್ಯೋಗವನ್ನರಸಿ ನಗರ ಮತ್ತು ಪಟ್ಟಣಗಳಿಗೆ ವಲಸೆ ಬಂದರು. ಅದಕ್ಕೂ ಹಿಂದೆ 2001ರಲ್ಲಿ 30 ಕೋಟಿ ಜನಸಂಖ್ಯೆ ವಲಸೆ ಬಂದರು’ ಎಂದು ಹೇಳುತ್ತಾರೆ. ಇದೇ ಪ್ರಮಾಣವನ್ನು ಆಧರಿಸುವುದಾದರೆ 2018-19ರಲ್ಲಿ ಅಂದಾಜು 50 ಕೋಟಿ ಜನಸಂಖ್ಯೆ ವಲಸೆ ಬಂದಿರುವ ಸಾದ್ಯತೆಗಳಿವೆ. ಅಸಂಘಟಿತ ವಲಯದಲ್ಲಿ ಸುಮಾರು 92% ಪ್ರಮಾಣದ ಜನಸಂಖ್ಯೆ ಕೆಲಸ ಮಾಡುತ್ತಿದ್ದಾರೆ. ಇದರ ಅಡಿಯಲ್ಲಿ ಅನೌಪಚಾರಿಕ ಹುದ್ದೆಗಳಲ್ಲಿ (ನೇಮಕಾತಿ ಪತ್ರವಿಲ್ಲ, ಉದ್ಯೋಗ ಭದ್ರತೆಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಪಿಎಫ್, ಪೆನ್ಷನ್, ಇಎಸ್‌ಐ ಯೋಜನೆಗಳಿಲ್ಲ) ಶೇ.96ರಷ್ಟು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತರ ಅವರ ಬದುಕು ಮತ್ತಷ್ಟು ಚಿದ್ರಗೊಂಡಿದೆ. ಅದೆ ಸಂದರ್ಭದಲ್ಲಿ ಭಾರತದ ನಗರಗಳಲ್ಲಿ ಉದ್ಯೋಗದ ಪ್ರಮಾಣ ಶೇ.40.9% ಮತ್ತು ಗ್ರಾಮೀಣ ಭಾಗಗಳಲ್ಲಿ ಶೇ.33% ಪ್ರಮಾಣದಷ್ಟಿತ್ತು. ಕೋವಿಡ್ ಪೂರ್ವದಲ್ಲಿ 2019ರಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 12% ಪ್ರಮಾಣದಲ್ಲಿತ್ತು. ಕೋವಿಡ್ ನಂತರದ ಲಾಕ್‌ಡೌನ್ ಸಂದರ್ಭದಲ್ಲಿ  ನಿರುದ್ಯೋಗದ ಪ್ರಮಾಣ ಮೇ, 2020ರಲ್ಲಿ ಶೇಕಡಾ 27% ಪ್ರಮಾಣಕ್ಕೇರಿತ್ತು. ಈ ಲಾಕ್‌ಡೌನ್ ಕಾರಣಕ್ಕೆ ಸುಮಾರು 12 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಸಿಎಮ್‌ಐಇ ವರದಿ ಮಾಡಿದೆ. ಸಿಎಂಐಇ ವರದಿಯ ಪ್ರಕಾರ ಪ್ರಸ್ತುತ ನಿರುದ್ಯೋಗದ ಪ್ರಮಾಣ ಶೇ.8.4ರಷ್ಟಿದೆ. ಮುಂದಿನ ಹತ್ತು ವರ್ಷಗಳಲ್ಲಿ ಅಂದಾಜು 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಪ್ರತಿ ವರ್ಷ 80-90 ಲಕ್ಷ ಜನಸಂಖ್ಯೆ ಉದ್ಯೋಗ ಮಾರುಕಟ್ಟೆಗೆ ಸೇರಿಕೊಳ್ಳುತ್ತಿದ್ದಾರೆ. ಇವರೆಲ್ಲರನ್ನೂ ನಿರುದ್ಯೋಗಿಗಳೆಂದೇ ಪರಿಗಣಿಸಲಾಗುತ್ತದೆ. 2019ರಲ್ಲಿ ರೇಲ್ವೆ ಇಲಾಖೆಯ 35೦೦೦ ಹುದ್ದೆಗಳಿಗೆ 1.25 ಕೋಟಿ ಅಭ್ಯರ್ಥಿಗಳು ಅರ್ಜಿ ಗುಜರಾಯಿಸಿದ್ದರು. ಅಂದರೆ ಪ್ರತಿ ಹುದ್ದೆಗೆ 357 ಆಕಾಂಕ್ಷಿಗಳಿದ್ದರು.

ಕರ್ನಾಟಕ ರಾಜ್ಯದಲ್ಲಿ 2.4 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿದೆ. ದೇಶದ 29 ರಾಜ್ಯಗಳಲ್ಲಿ ಅಂದಾಜು 28 ಲಕ್ಷ ಹುದ್ದೆಗಳು ಮತ್ತು ಕೇಂದ್ರ ಸರಕಾರದ 9 ಲಕ್ಷ ಹುದ್ದೆಗಳು ಖಾಲಿ ಇದೆ ಎಂದು ಅಂದಾಜಿಸಲಾಗಿದೆ. ಹಾಗಿದ್ದಲ್ಲಿ ಉದ್ಯೋಗ ಎಲ್ಲಿಂದ ಸೃಷ್ಟಿಯಾಗುತ್ತದೆ? ಪ್ರಭಾವಶಾಲಿಯಾಗಿರುವ ಮೋದಿ ಸಾಹೇಬರು ಆಗಲೇ ಕತೆ ಹೆಣೆಯುತ್ತಿದ್ದಾರೆ. ದುರ್ಬಲರಾದ ನಾವುಗಳು ವಿಚಾರಗಳನ್ನು ಎಲ್ಲಿಂದ, ಹೇಗೆ ಹೇಳಬೇಕು?

ಆದರೆ ಈ ಅಂಕಿಅಂಶಗಳೂ ಸಹ ಪರಿಪೂರ್ಣವಲ್ಲ. ಮೊದಲನೆಯದಾಗಿ ಈ ಸಮೀಕ್ಷೆ 2011ರ ಜನಗಣತಿಯನ್ನು ಆಧರಿಸಿದೆ. 2021ರ ಜನಗಣತಿ ಇನ್ನೂ ಪ್ರಾರಂಭವಾಗಿಲ್ಲ. ಕಳೆದ 12 ವರ್ಷಗಳಲ್ಲಿ 10 ಕೋಟಿ ಜನಸಂಖ್ಯೆ ಹೆಚ್ಚಾಗಿರುವ ಅಂದಾಜಿದೆ. ಹಾಗಿದ್ದಲ್ಲಿ ಈ ಹತ್ತು ಕೋಟಿಯ ಜನಸಂಖ್ಯೆಯ ಸ್ಥಿತಿಗತಿಗಳ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇವರು ನಿರುದ್ಯೋಗದ ಸಮೀಕ್ಷೆಯ ಲೆಕ್ಕಾಚಾರದಲ್ಲಿ ಪರಿಗಣಿಸಲ್ಪಡುವುದಿಲ್ಲ. ಎರಡನೆಯದಾಗಿ ಸಿಎಂಐಇ ಸಂಸ್ಥೆಯು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅದು ಇಡೀ ಊರನ್ನು ಸಮಗ್ರವಾಗಿ ಪರಿಗಣಿಸದೆ ಊರಿನ ಆರಂಭದಲ್ಲಿ ಸಿಗುವ ವ್ಯಕ್ತಿಗಳನ್ನು ಮಾತ್ರ ಸಂದರ್ಶಿಸುತ್ತಾರೆ. ಮತ್ತು ಆ ವ್ಯಕ್ತಿ ಅಸಂಘಟಿತ ವಲಯದಲ್ಲಿದ್ದರೆ ಆ ದಿನದ ಉದ್ಯೋಗ ಮಾತ್ರ ಅನ್ವಯವಾಗುತ್ತದೆ. ಮರುದಿನ ಅವರು ಕೆಲಸ ಕಳೆದುಕೊಳ್ಳಬಹುದು. ಒಟ್ಟಾರೆ ನಿರುದ್ಯೋಗದ ಸಮೀಕ್ಷೆಗೆ ಸೂಕ್ತ ಮಾನದಂಡಗಳಿಲ್ಲ. ಜಿಡಿಪಿ

ಜಿಡಿಪಿಯ ಶೇ.17 ರಷ್ಟಿರುವ ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಅನಿಶ್ಚತೆಯಿಂದ ಕೂಡಿದೆ. ನಿರಂತರತೆಯನ್ನು ಕಾಯ್ದುಕೊಂಡಿಲ್ಲ. ಇಂದು ಕೃಷಿ ಕೂಲಿ ಕಾರ್ಮಿಕರು ಅಸಂಘಟಿತರಾಗಿದ್ದಾರೆ ಮಾತ್ರವಲ್ಲ, ಅನೌಪಚಾರಿಕ ವೃತ್ತಿಯಲ್ಲಿದ್ದಾರೆ. ಇವರ ಬದುಕು ಕ್ರೂನಿ ಬಂಡವಾಳಶಾಹಿಗಳನ್ನು ಬೆಳೆಸುವ ಮೋದಿಯವರ ಜಿಡಿಪಿಯಲ್ಲಿ ಪರಿಗಣಿತವಾಗುವುದಿಲ್ಲ.ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವ ಉತ್ಪಾದನಾ ವಲಯದ ಪ್ರಮಾಣವು ಜಿಡಿಪಿಯ ಶೇ೧೪ರಷ್ಟಿದೆ. ಈ ವಲಯದ ಶೇ.45ರಷ್ಟು ಪ್ರಮಾಣದಲ್ಲಿರುವ ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ, ಮಧ್ಯಮ ಗಾತ್ರ) ಉದ್ಯಮಗಳು ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತವೆ. ಆದರೆ 2019ರ ನಂತರ ಶೇ.33ರಷ್ಟು ಎಂಎಸ್‌ಎಂಇ ಮುಚ್ಚಿ ಹೋಗಿವೆ.ಇಂಡಿಯಾ ಸ್ಪೆಂಡ್ ಪತ್ರಿಕೆಯಲ್ಲಿ “2017ರ ಎನ್‌ಎಎಸ್ (ರಾಷ್ಟ್ರೀಯ ಅಕೌಂಟ್ ಅಂಕಿಅಂಶಗಳು) ಮತ್ತು 2017-18ರ ಲೇಬರ್ ಸಮೀಕ್ಷೆಯ ಅನುಸಾರ ಶೇ.7೦ ಪ್ರಮಾಣದ ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ.2015-16ರಲ್ಲಿ ಗ್ರಾಮೀಣ ಭಾಗದ ಸರಾಸರಿ ವಾರ್ಷಿಕ ಆದಾಯ 40,928 ರೂ (ತಿಂಗಳಿಗೆ 341೦, ದಿನಕ್ಕೆ 110 ರೂ)  ನಗರ ಭಾಗದಲ್ಲಿ ಸರಾಸರಿ ವಾರ್ಷಿಕ ಆದಾಯ 98,435 ರೂ (ತಿಂಗಳಿಗೆ 8200, ದಿನಕ್ಕೆ 264ರೂ)   ಇತ್ತು’  ಎಂದು ವರದಿಯಾಗಿದೆ.

ಬಡತನ ಮತ್ತು ಸರಕಾರದ ಅಭಿವೃದ್ಧಿ

ವಿಶ್ವ ಬ್ಯಾಂಕ್‌ನ ಅನುಸಾರ ಕೋವಿಡ್ ಕಾಯಿಲೆಯ ಸಂದರ್ಭದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ 10 ಕೋಟಿ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತಾರೆ. ಇವರ ಆದಾಯವು ಸರಕಾರವೇ ನಿಗದಿಪಡಿಸಿದ ಪ್ರತಿ ದಿನ 224 ರೂಗಿಂತಲೂ ಕಡಿಮೆಯಾಗಲಿದೆ. ಫೈನಾನ್ಸ್ ಎಕ್ಸಪ್ರೆಸ್‌ನಲ್ಲಿ ವರದಿಯಾದಂತೆ ಕೋವಿಡ್ ಪೂರ್ವದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆ 81 ಕೋಟಿ ಇತ್ತು (ಶೇ.60%) ಕೋವಿಡ್ ನಂತರ ಅದು 92 ಕೋಟಿಗೆ ಏರಿಕೆಯಾಗುವ ಸಂಭವವಿದೆ (ಶೇ.68%). ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ 35 ಕೋಟಿ ಜನಸಂಖ್ಯೆ ಬಡವರಿದ್ದಾರೆ ಎಂದು ಸರಕಾರದ ಅಂಕಿಅಂಶಗಳು ಹೇಳುತ್ತಿದೆ. 4.9 ಕೋಟಿ ಜನಸಂಖ್ಯೆ ತೀವ್ರ ಹಸಿವಿನ ಬಾಧೆಯಿಂದ ನರಳುತ್ತಿದ್ದಾರೆ.

ಇತ್ತೀಚೆಗೆ ನಿತಿ ಆಯೋಗವು ಬಿಡುಗಡೆ ಮಾಡಿದ ವರದಿಯ ಪ್ರಕಾರ ಕಳೆದ ಒಂಬತ್ತು ವರ್ಷಗಳಲ್ಲಿ ‘ಬಹುಆಯಾಮದ ಬಡತನ’ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು 13.5 ಕೋಟಿ ಜನಸಂಖ್ಯೆ ಬಡತನದಿಂದ ಹೊರ ಬಂದಿದ್ದಾರೆ. ಆದರೆ ಈ ಸಮೀಕ್ಷೆಗೆ ಆಧರಿಸಿದ ಮಾನದಂಡಗಳು ಅನುಮಾನಸ್ಪದವಾಗಿದೆ. ‘ಬಹು ಆಯಾಮಗಳ ಬಡತನ ಸೂಚ್ಯಂಕ’ (ಎಂಪಿಐ) ಸಮೀಕ್ಷೆ ಆಧರಿಸಿ ಈ ವರದಿ ಪ್ರಕಟಿಸಲಾಗಿದೆ. ಆದರೆ ಈ ವಿಧಾನವು ಬಡತನದ ಸಮಗ್ರ ಸ್ಥಿತಿಯನ್ನು ಪರಿಚಯಿಸುವುದಿಲ್ಲ. ಎನ್‌ಎಸ್‌ಸಿ, ಎನ್‌ಎಸ್‌ಎಸ್‌ಒ, ಐಐಪಿಎಸ್ ಸಂಸ್ಥೆಗಳು ಬಿಡುಗಡೆಗೊಳಿಸಿದ ಬಡತನ, ಪೌಷ್ಟಿಕತೆ ಮುಂತಾದವುಗಳ ಕುರಿತಾದ ವರದಿಯನ್ನು ಬಹಿರಂಗಗೊಳಿಸದೆ ಸಬ್ ಚಂಗಾಸ್ ಹೈ ಎಂದು ಹೇಳುವ ತನ್ನದೇ ಆದ ಸಮೀಕ್ಷೆಯನ್ನು ಪ್ರಕಟಿಸಿರವುದು ಸಂಶಯಾಸ್ಪದವಾಗಿದೆ. ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕದ (ಎಂಪಿಐ) ಸಮೀಕ್ಷೆಯ ಚೌಕಟ್ಟನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡು ಸಮೀಕ್ಷೆ ನಡೆಸಿರುವ ಎನ್‌ಎಂಪಿಐ (ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ) 2022ರಲ್ಲಿ ಪ್ರಟಿಸಿರುವ ವರದಿಯ ಪ್ರಕಾರ ಭಾರತದಲ್ಲಿ 2005-06ರಲ್ಲಿ ಶೇ.54ರಷ್ಟಿದ್ದ ಎಂಪಿಐ 20015-16ರಲ್ಲಿ ಶೇ.27.9ಕ್ಕೆ,2019-21ರಲ್ಲಿ ಶೇ.16ಕ್ಕೆ ಕಡಿಮೆಯಾಗಿದೆ ಎಂದು ಹೇಳಿದೆ. ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರ ಅವರು ‘ಜಾಗತಿಕ ಎಂಪಿಐಯ ವಿಧಾನವನ್ನು ಬದಲಾಯಿಸಿದ ಎನ್‌ಎಂಪಿಐ ಶೇ.18ರಷ್ಟು ಜನಸಂಖ್ಯೆಯಿರುವ 6-14ನೆ ವಯಸ್ಸಿನ ಮಕ್ಕಳನ್ನು ತನ್ನ ಸಮೀಕ್ಷೆಯಲ್ಲಿ ಹೊರಗಿಟ್ಟಿದೆ. ಆದರೆ ಗುಂಪಿನ ಮುಕ್ಕಾಲು ಪಾಲು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಎನ್‌ಎಂಪಿಐ ಸಮೀಕ್ಷೆಯಲ್ಲಿ ಇದು ಒಳಗೊಂಡಿಲ್ಲ. ವಿಶ್ವಸಂಸ್ಥೆಯು ಪ್ರಕಟಿಸಿದ ‘ವಿಶ್ವ 2023ರಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆ’ ಕುರಿತ ವರದಿಯ ಅನುಸಾರ ಭಾರತದಲ್ಲಿ 104.3 ಕೋಟಿ (ಶೇ.74.1) ಜನಸಂಖ್ಯೆಯು ಗುಣಮಟ್ಟದ ಆಹಾರ ಸೇವಿಸುತ್ತಿಲ್ಲ. ಇದು ಎಂಪಿಐ ಸಮೀಕ್ಷೆಯಲ್ಲಿ ಪ್ರತಿಫಲಿತವಾಗಿಲ್ಲ. ಎನ್‌ಎಂಪಿಐ ಸಮೀಕ್ಷೆಯಲ್ಲಿ ವಿಶ್ವಾಸಾರ್ಹವಲ್ಲದ ತೂಕ ಮತ್ತು ವಯಸ್ಸನ್ನು ಆಧರಿಸಿ ಅಪೌಷ್ಟಿಕತೆಯನ್ನು ಅಳೆದರೆ ಜಾಗತಿಕ ಎಂಪಿಐ ಸಮೀಕ್ಷೆಯಲ್ಲಿ ಎತ್ತರ ಮತ್ತು ವಯಸ್ಸನ್ನು ಆಧರಿಸಿ (tunting) ಅಪೌಷ್ಟಿಕತೆಯನ್ನು ಅಳೆಯುತ್ತಾರೆ.  ಎರಡನೆಯಾಗಿ ಗರ್ಭಿಣಿ ಮಹಿಳೆಯರು ಪರಿಣಿತರಲ್ಲದ ಆರೋಗ್ಯ ಕಾರ್ಯಕರ್ತರ ಕೈಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದನ್ನು ಸೂಚಕವಾಗಿ ಬಳಸಿಕೊಳ್ಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಶೇ.80ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ಹೆರಿಗೆ ಆಧಾರಿತ ಸಾವುಗಳ ಸಹ ಕಡಿಮೆಯಾಗಿರುತ್ತದೆ. ಆದರೆ ಸಾವುನೋವುಗಳು ತುಂಬಾ ಕಡಿಮೆ ಇರುವ ಮೊದಲ ವಿಧಾನವನ್ನೇ ಒಂದು ಸೂಚಕವಾಗಿ ಬಳಸಿಕೊಳ್ಳುವದರಿಂದ ಇಲ್ಲಿ ಸಹಜವಾಗಿಯೇ ಉತ್ತಮ ಫಲಿತಾಂಶ ದೊರಕುತ್ತದೆ’ ಎಂದು ಬರೆಯುತ್ತಾರೆ. ಅಂದರೆ ಸುಸಂಬದ್ಧವಾಗಿರುವ ಅಂಶಗಳನ್ನೇ ಸಮೀಕ್ಷೆಗೆ ಬಳಸಿಕೊಳ್ಳುವುದರಿಂದ ಸಹಜವಾಗಿಯೇ ಎಂಪಿಐ ಕಡಿಮೆಯಾಗಿದೆ ಎನ್ನುವ ಫಲಿತಾಂಶ ಬರುತ್ತದೆ. ಇದು ಸಹ ವಂಚನೆಯಾಗಿದೆ. (ಉದಾಹರಣೆಗೆ ಶೈಕ್ಷಣಿಕ ಸಮೀಕ್ಷೆಗೆ ಬೆಂಗಳೂರಿನ ಹಿಂದುಳಿದ, ಸ್ಲಂ ನಿವಾಸಿಗಳು ಹೆಚ್ಚಾಗಿರುವ ಯಾರಬ್ ನಗರ, ಡಿ.ಜಿ.ಹಳ್ಳಿಯನ್ನು ಪರಿಗಣಿಸದೆ ಪ್ರತಿಷ್ಠಿತ ಸದಾಶಿವ ನಗರದಲ್ಲಿ ವಾಸಿಸುವ ಮೇಲ್ವರ್ಗದ ಮಕ್ಕಳನ್ನು ಬಳಸಿಕೊಂಡು ರ‍್ನಾಟಕದಲ್ಲಿ ಮಕ್ಕಳ ದಾಖಲಾತಿ, ಉತ್ತೀರ್ಣದ ಪ್ರಮಾಣ ಶೇ.100ರಷ್ಟಿದೆ ಎಂದು ವರದಿ ಮಾಡಿದಂತೆ)

ಇದನ್ನೂ ಓದಿ:ಮೋದಿ ಸರ್ಕಾರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ರಾಜಕೀಯ: ಸಿಪಿಐ(ಎಂ) ಪ್ರತಿಭಟನೆ

ಜಿಡಿಪಿ ಎನ್ನುವ ಮರೆಮೋಸ

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಈ ಜಿಡಿಪಿ ಎನ್ನುವ ಅಭಿವೃದ್ದಿ ಸೂಚ್ಯಂಕದ ಹಾವು ಏಣಿಯಾಟದಲ್ಲಿ ಮೇಲಿನ ವಲಸೆ ಕಾರ್ಮಿಕರ, ಕೂಲಿ ಕಾರ್ಮಿಕರ, ಬಡ ರೈತರ ಹಸಿವು ಮತ್ತು ನಿರುದ್ಯೋಗ ಮುಂತಾದವುಗಳನ್ನು ಒಳಗೊಂಡಿರುವುದಿಲ್ಲ ಮತ್ತು ಪರಿಗಣಿಸಿರುವುದಿಲ್ಲ. 2019ರಲ್ಲಿ ಅಂದಾಜು ಶೇ.12% ಪ್ರಮಾಣದ ನಿರುದ್ಯೋಗವಿತ್ತು, 2020ರಲ್ಲಿ ಲಾಕ್‌ಡೌನ್ ಕಾರಣದಿಂದ ನಿರುದ್ಯೋಗದ ಪ್ರಮಾಣ ಶೇ.27%ರಷ್ಟು ಏರಿಕೆಯಾಗಿದೆ ಮತ್ತು 12 ಕೋಟಿ ಜನಸಂಖ್ಯೆ ನಿರುದ್ಯೋಗಿಗಳಾಗಿದ್ದಾರೆ. ಆದರೆ ಈ ವಾಸ್ತವ ಸಂಗತಿಗಳನ್ನು ಜಿಡಿಪಿ ಅಳತೆಯಲ್ಲಿ ಒಳಗೊಳ್ಳುವುದಿಲ್ಲ.ಬಡ ರೈತರ ಬವಣೆ, ಆಟೋ ಚಾಲಕರು, ಬೀದಿ ಬದಿಯ ವ್ಯಾಪಾರಿಗಳು, ಕುಶಲ ಕರ್ಮಿಕಗಳ ಬದುಕಿನ ಉದ್ಯೋಗದ ಕುರಿತು ಈ ಜಿಡಿಪಿ ಒಳಗೊಂಡಿರುವುದಿಲ್ಲ. ಈ ಕಾರಣಕ್ಕಾಗಿಯೆ ಬಹುತೇಕ ದೇಶಗಳಲ್ಲಿ ಅಭಿವೃದ್ದಿಯ ಬೆಳವಣಿಗೆಯನ್ನು ನಿರ್ಧರಿಸಲು ಕೇವಲ ಜಿಡಿಪಿಯನ್ನು ಮಾತ್ರ ಅವಲಂಬಿಸುವುದಿಲ್ಲ.

2.94 ಅಥವಾ 3.30 ಡಾಲರ್ ಟ್ರಿಲಿಯನ್ ಎಂದು ಹೇಳಲಾಗುವ ಜಿಡಿಪಿ ಹೊಂದಿರುವ ಭಾರತ (ಎಷ್ಟು ನಿಜ? ಎಲ್ಲಿದೆ ಮಾನದಂಡ?) ದೇಶದಲ್ಲಿ 27 ಕೋಟಿ ಜನಸಂಖ್ಯೆ ಬಡತನ ರೇಖೆಗಿಂತ (ಸರಕಾರ ನಿಗದಿಪಡಿಸಿದ 87.5ರೂ/ಪ್ರತಿ ದಿನ) ಕೆಳಗಿದೆ ಎಂದು ವರದಿಯಾಗಿದೆ. ‘ಸ್ಕ್ರಾಲ್.ಇನ್’ ವರದಿಯ ಪ್ರಕಾರ ಭಾರತದ ಕೋಟ್ಯಾಂತರ ಕೂಲಿ ಕಾರ್ಮಿಕರು ಮತ್ತು 138 ಬಿಲಿಯನಾಧಿಪತಿಗಳಿಗೆ ಜಿಡಿಪಿಯ per capita ಒಂದೇ ಆಗಿರುತ್ತದೆ. ವಾರ್ಷಿಕವಾಗಿ 2018-19ರಲ್ಲಿ per capita ಆದಾಯ 1,26,406 ರಷ್ಟಿತ್ತು. ಆದರೆ ನಂತರದ ಲಾಕ್‌ಡೌನ ಸಂದರ್ಭದಲ್ಲಿ ಹಸಿವಿನಿಂದ ಮೃತರಾದ ವಲಸೆ ಕಾರ್ಮಿಕರ ಮತ್ತು ಕೋಟ್ಯಾಂತರ ಕೂಲಿ ಕಾರ್ಮಿಕರ ವಾರ್ಷಿಕ ಆದಾಯ 1,26,406  ರೂ. ಇರುವುದಿಲ್ಲ ಮತ್ತು ಬಿಲಿಯಾದಿಪತಿಗಳದ್ದೂ ಇರುವುದಿಲ್ಲ. ಜಾಗತಿಕವಾಗಿ 112 ಹಸಿವಿನ ದೇಶಗಳಲ್ಲಿ ಭಾರತವು 100ನೆ ಸ್ಥಾನದಲ್ಲಿದೆ. ವ್ಯಂಗ್ಯವೆಂದರೆ ‘ಭಾರತೀಯ ಆಹಾರ ನಿಗಮ’(ಎಫ್‌ಸಿಐ) ಬಳಿ 79 ಮಿಲಿಯನ್ ಟನ್ ಆಹಾರ ಧಾನ್ಯದ ಸಂಗ್ರಹವಿದೆ. ಆದರೆ ಅದು ಬಡಜನರಿಗೆ ವಿತರಣೆಯಾಗುತ್ತಿಲ್ಲ ಮತ್ತು ಜನತೆಗೆ ಕೊಳ್ಳುವ ಸಾಮರ್ಥ್ಯ ಸೃಷ್ಟಿಸುತ್ತಿಲ್ಲ.

ಇನ್ನೂ ಸರಳವಾಗಿ ವಿವರಿಸಬೇಕೆಂದರೆ ಈ ದೇಶದ ಶ್ರೇಣೀಕೃತ ವರ್ಗ ವ್ಯವಸ್ಥೆಯಲ್ಲಿ ಕೆಳವರ್ಗದ, ಅತಿ ಕೆಳವರ್ಗದ ಶೇ.70 ಜನಸಂಖ್ಯೆಯ ವಾರ್ಷಿಕ ಆದಾಯ ಅಥವಾ ಕಳೆದ ಹತ್ತು ವರ್ಷಗಳ ಆದಾಯ ಎಷ್ಟಿದೆ? ಮದ್ಯಮ ವರ್ಗದ ಶೇ.20 ಜನಸಂಖ್ಯೆಯ, ಮೇಲ್ವರ್ಗದ ಶ್ರೀಮಂತರ ಶೇ.9, ಅತಿ ಶ್ರೀಮಂತರ ಶೇ.1 ಜನಸಂಖ್ಯೆಯ ವಾರ್ಷಿಕ ಅಥವಾ ಕಳೆದ ಹತ್ತು ವರ್ಷಗಳ ಆದಾಯ ಎಷ್ಟಿದೆ? ಇಲ್ಲಿನ ಜಿಡಿಪಿ ಲೆಕ್ಕಾಚಾರವು ಈ ಎಲ್ಲಾ ಅಂಶಗಳನ್ನು ಬಿಡಿಬಿಡಿಯಾಗಿ ಪರಿಗಣಿಸುವುದಿಲ್ಲ. ಬದಲಿಗೆ ಬಂಡವಾಳ ಹೂಡಿಕೆ, ಬಂಡವಾಳದ ಪುನರುತ್ಪಾದನೆ, ಮಿಗುತಾಯ ಮೌಲ್ಯ ಮತ್ತು ಜೀವನೋಪಾಯದ ಉಳಿತಾಯದ ಪ್ರಮಾಣದ ಮೇಲೆ ಜಿಡಿಪಿಯ ಅಬಿವೃದ್ದಿ ಸೂಚ್ಯಂಕದ ಲೆಕ್ಕಾಚಾರವನ್ನು ನಿರ್ಧರಿಸುತ್ತಾರೆ. ಇಲ್ಲಿನ ಜಿಡಿಪಿ ಆಧರಿತ ಅಬಿವೃದ್ದಿ ಸೂಚ್ಯಂಕವು ಮೇಲೆ ಹೇಳಿದ  9-10% ಪ್ರಮಾಣದ ಮೇಲ್ವರ್ಗದ ಶ್ರಿಮಂತರು, ಅತಿಶ್ರೀಮಂತರು, ಕ್ರೂನಿ ಬಂಡವಾಳಶಾಹಿಗಳ ಬಂಡವಾಳ ಹೂಡಿಕೆ, ಅವರ ವ್ಯಾಪಾರದ ಅಭಿವೃದ್ದಿ, ಪುನರುತ್ಪಾದನೆ ಮತ್ತು ಅವರ ಮಿಗುತಾಯ ಮೌಲ್ಯದ ಏರಿಳಿತದ ಮೇಲೆ ನಿರ್ದರಿಸಲ್ಪಡುತ್ತದೆ. ಈ ಬಂಡವಾಳಶಾಹಿ ಕುಟುಂಬಗಳ ವಹಿವಾಟಿನಿಂದ ದೊರಕುವ ವಿದೇಶಿ ವಿನಿಮಯ, ಉತ್ಪಾದನೆ ಮತ್ತು ಉದ್ಯೋಗದ ಪ್ರಮಾಣದ ಮೇಲೆ, ಉಳಿತಾಯದ ಮೇಲೆ ಜಿಡಿಪಿ ಸೂಚ್ಯಂಕ ನಿರ್ದರಿಸಲಾಗುತ್ತದೆ. ಆದರೆ ಜಿಡಿಪಿಯ ಅಭಿವೃದ್ದಿ ಸೂಚ್ಯಂಕವನ್ನು ನಿರ್ದರಿಸಲು ಬಡತನ ರೇಖೆಗಿಂತ ಕೆಳಗಿರುವ ಶೇ.70 ಪ್ರಮಾಣದ ಜನಸಂಖ್ಯೆಯ ದಾರುಣ ಬದುಕು ಮಾನದಂಡವಾಗುವುದಿಲ್ಲ. ಅವರ ಜೀವನ ದೇಶದ ಅಭಿವೃದ್ದಿಯ ಮೌಲ್ಯಮಾಪನಕ್ಕೆ ಒಳಪಡುವುದೆ ಇಲ್ಲ. ಹೀಗಾಗಿ ಜಿಡಿಪಿ ಪ್ರಮಾಣ ಹೆಚ್ಚಿರುವ ಅವಧಿಯಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅಭಿವೃದ್ದಿಯನ್ನು ನಿರ್ಧರಿಸುವ ಮಾನದಂಡಗಳ ಮಿಥ್ಯೆಯನ್ನು, ಮರೆಮೋಸವನ್ನು ಸಾಬೀತುಪಡಿಸುತ್ತವೆ. ಬಂಡವಾಳಶಾಹಿಗಳ ಪಾಲಿಗೆ ನಿಜವಾಗಿರುವ ಸುಸ್ಥಿರ ಅಬಿವೃದ್ದಿ ಕೂಲಿ ಕಾರ್ಮಿಕರು, ರೈತರು, ದಲಿತರು, ಆದಿವಾಸಿಗಳ ಪಾಲಿಗೆ ನೇಣುಗಂಬವಾಗಿದೆ.

ಆಶೀಶ್ ಖೈತಾನ್ ಅವರು “ವಿಶ್ವ ಸಂಸ್ಥೆಯು 2015ರಲ್ಲಿ ‘17 ಸುಸ್ಥಿರ ಅಭಿವೃದ್ದಿ ಗುರಿಗಳನ್ನು’ ನಿಗದಿಪಡಿಸಿತು. ಅದರಲ್ಲಿ ಮೊದಲನೆ ಗುರಿ ಬಡತನ ನಿರ್ಮೂಲನೆ, ಹತ್ತನೇ ಗುರಿ ದೇಶದೊಳಗೆ ಮತ್ತು ದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವುದು. ಆದರೆ national indicator framework baseline (ಎನ್‌ಐಎಫ್‌ಬಿ) ವರದಿಯು ಹೇಳುವಂತೆ ಸಂಪೂರ್ಣ ಜನಸಂಖ್ಯೆಯ ಅಥವಾ ಶೇ.4೦ ಪ್ರಮಾಣದ ಕೆಳವರ್ಗದ ಕುಟುಂಬಗಳ per capita ವೆಚ್ಚದ ಬೆಳವಣಿಗೆ ದರವನ್ನು ಅಳೆಯಲು ಅವಶ್ಯಕವಾದ ದತ್ತಾಂಶಗಳು ಭಾರತದ ಸರಕಾರದ ಬಳಿ ಇಲ್ಲ. ಕುಟುಂಬ ವೆಚ್ಚಗಳ ‘ಗಿನಿ ಗುಣಾಂಕ’ ಅಥವಾ ‘ಗಿನಿ ಸೂಚ್ಯಂಕ’ವನ್ನು ಸಂಗ್ರಹಿಸಿಲ್ಲ. (‘ಗಿನಿ ಗುಣಾಂಕ’ ವೆಂದರೆ ದೇಶದ ಪ್ರಜೆಗಳ ಆದಾಯ ಅಥವಾ ಸಂಪತ್ತಿನ ಹಂಚಿಕೆಯನ್ನು ಪ್ರತಿನಿದಿಸುವ statistical dispersionನ ಮಾಪನ. ಇದನ್ನು ಅಸಮಾನ ಹಂಚಿಕೆಯನ್ನು ಅಳೆಯಲು ಬಳಸುತ್ತಾರೆ. ಸರಳ ನುಡಿಯಲ್ಲಿ ಹೇಳುವುದಾದರೆ ‘ಗಿನಿ ಗುಣಾಂಕ’ ೦ ಇದ್ದರೆ ಸಂಪತ್ತು ಸಮಾನ ಹಂಚಿಕೆಯಾಗಿದೆ, ಅದು 1 ಇದ್ದರೆ ಒಬ್ಬನೆ ವ್ಯಕ್ತಿಯ ಬಳಿ ಎಲ್ಲಾ ಸಂಪತ್ತು ಸಂಚಯಗೊಂಡಿದೆ). ಸರಾಸರಿ ಕುಟುಂಬ ವೆಚ್ಚದ ಅರ್ಧದಷ್ಟು ಅಥವಾ ಶೇ.50 ಪ್ರಮಾಣಕ್ಕಿಂತಲೂ ಕೆಳಗಿರುವ ಪ್ರಮಾಣದ ಜನಸಂಖ್ಯೆಯ ದತ್ತಾಂಶವೂ ಭಾರತ ಸರಕಾರದ ಬಳಿ ಇಲ್ಲ. ಸಮಾನ ಅವಕಾಶಗಳನ್ನು ಖಾತರಿಪಡಿಸಲು ಮತ್ತು ಅಸಮಾನತೆಯನ್ನು ಕಡಿಮೆಗೊಳಿಸಲು ಅಗತ್ಯವಾದ ರಾಷ್ಟ್ರೀಯ ಸೂಚ್ಯಂಕಗಳನ್ನೂ ಅಭಿವೃದ್ದಿಪಡಿಸಿಲ್ಲ” ಎಂದು ಬರೆಯುತ್ತಾರೆ.

ಕೃಷಿ ತಜ್ಞ ದೇವಿಂದರ್ ಶರ್ಮ ಅವರು “ಕಳೆದ 22 ವರ್ಷಗಳಲ್ಲಿ 3,33,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿ ವರ್ಷ ಸರಾಸರಿ 12,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯು ಒಂದು ಬಗೆಯ ಬಹುಮುಖಿ ಅವನತಿ. ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಿರುವ ರೈತರ ಪರಿಸ್ಥಿತಿ ಮತ್ತಷ್ಟು ದಾರುಣವಾಗಿದೆ. ನಿತಿ ಆಯೋಗದ ವರದಿಯ ಪ್ರಕಾರವೆ ಪ್ರತಿ ರೈತನ ಸರಾಸರಿ ಆದಾಯದ ಏರಿಕೆ ಶೇ.೦.44 ಪ್ರಮಾಣದಲ್ಲಿದೆ. ಇದಕ್ಕೆ ಸರಕಾರವನ್ನೆ ನೇರ ಹೊಣೆ ಮಾಡಬೇಕಾಗುತ್ತದೆ. ವಿಶ್ವಬ್ಯಾಂಕ್ 400 ಮಿಲಿಯನ್ ಜನರನ್ನು ಗ್ರಾಮದಿಂದ ಹೊರಬಂದು ನಗರ, ಪಟ್ಟಣಗಳನ್ನು ಸೇರಬೇಕು ಎಂದು ಸಲಹೆ ನೀಡುತ್ತಲೆ ಇದೆ. ವಿಶ್ವಬ್ಯಾಂಕ್ ಆದೇಶವನ್ನು ಸಾದಿಸಲು ಸರಕಾರವು ರೈತರು ಗ್ರಾಮದಲ್ಲಿ ಬದುಕಲು ಸಾದ್ಯವಿಲ್ಲದಂತಹ, ವ್ಯವಸಾಯಕ್ಕೆ ಪ್ರತಿಕೂಲ ವಾತಾವರಣ ಸೃಷ್ಟಿಸುತ್ತಿದೆ. ಇದರ ಫಲವಾಗಿ ರೈತರು ಕೃಷಿ ತೊರೆದು ನಗರಕ್ಕೆ ವಲಸೆ ಬರುತ್ತಿದ್ದಾರೆ’ ಎಂದು ಹೇಳುತ್ತಾರೆ. ಈಗಿನ ಮೋದಿ ಸರಕಾರ 2016ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರವೆ (17 ರಾಜ್ಯಗಳಲ್ಲಿ) ರೈತನ ಸರಾಸರಿ ವಾರ್ಷಿಕ ಆದಾಯ ರೂ. 20,೦೦೦ ಎಂದು ಹೇಳುತ್ತದೆ (ತಿಂಗಳಿಗೆ ರೂ. 1660). ಮೋದಿ ಸರಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಆಶ್ವಾಸನೆ ಕೊಡುತ್ತಿದೆ. ಅದರ ಅನುಸಾರವೆ ಮಾಸಿಕ ಆದಾಯ 1660 ರೂಗಳನ್ನು ದ್ವಿಗುಣಗೊಳಿಸಿದರೆ2023ರಲ್ಲಿ ರೈತನ ಸರಾಸರಿ ಮಾಸಿಕ ಆದಾಯ 3,330 ರೂಗಳು. ಈ ಹಣದಲ್ಲಿ ರೈತ ಒಂದು ಗಂಟೆಯೂ ಜೀವಿಸಲು ಸಾಧ್ಯವಿಲ್ಲ’.

ಮತ್ತೊಂದೆಡೆ ಈ ಕೋವಿಡ್ ಪೂರ್ವದ ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಕಾಲದ ಆರ್ಥಿಕ ಕುಸಿತದ ದುಷ್ಪರಿಣಾಮದಿಂದಾಗಿ ಶೇ.7೦ ಪ್ರಮಾಣದ ಎಂಎಸ್‌ಎಂಇಗಳಲ್ಲಿ ತಮ್ಮ ನೌಕರರ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ. ಶೇ.35ರಷ್ಟು ಎಂಸ್‌ಎಂಇಗಳು, ಶೇ.37ರಷ್ಟು ಸ್ವಯಂ ಉದ್ಯೋಗ ಸಂಸ್ಥೆಗಳು ಮುಚ್ಚುತ್ತಿವೆ. ಇದು ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ ಕಡೆಗೆ ಬೇಡಿಕೆ ಸೃಷ್ಟಿಯಾಗುವುದಿಲ್ಲ. 2018-19ರ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನೆ, ನಿರ್ಮಾಣ ಇತ್ಯಾದಿಗಳ ಬೆಳವಣಿಗೆ 7.4% ಪ್ರಮಾಣದಲ್ಲಿದ್ದರೆ 2019-20ರ ಮೊದಲ ತ್ರೈಮಾಸಿಕದಲ್ಲಿ ಅದು 2.3% ಪ್ರಮಾಣಕ್ಕೆ ಕುಸಿದಿದೆ ಮತ್ತು 2019-20 ಕಡೆಯ ತ್ರೈಮಾಸಿಕದಲ್ಲಿ ಅದು – ೦.16% (ಖುಣಾತ್ಮಕ) ಪ್ರಮಾಣಕ್ಕೆ ಕುಸಿದಿದೆ.

ಮೇಲಿನ ಯಾವುದೇ ಅಂಶಗಳು ಜಿಡಿಪಿಯ ಸೂಚ್ಯಂಕದಲ್ಲಿ ಪರಿಗಣಿಸಲ್ಪಡುವುದಿಲ್ಲ. ಸರಕಾರಗಳು ತನ್ನ ಬಳಿ ಇರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರತಿಯೊಂದು ವರ್ಗದ ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿನ ಅಸಮಾನತೆ ಮತ್ತು ಸಂಪತ್ತಿನ ಬಳಕೆ, ಹೂಡಿಕೆ ಮಾಗೂ ಬೇಡಿಕೆಗಳ ನಡುವಿನ ವಿರೋಧಾಭಾಸಗಳು ಮತ್ತು ಅಸಂಗತ ಇವುಗಳನ್ನೆಲ್ಲಾ ಪರಿಗಣಿಸಿ ತನ್ನ ಆರ್ಥಿಕ ನೀತಿಗಳೊಂದಿಗೆ ಸಂಯೋಜಿಸಬೇಕಾಗುತ್ತದೆ. ಆದರೆ ಪ್ರಭುತ್ವ ಆ ಮಾರ್ಗದಲ್ಲಿ ನಡೆಯುತ್ತಿಲ್ಲ. ಇದನ್ನು ಆಶೀಶ್ ಖೈತಾನ್ ಅವರು ‘ನಮ್ಮ ಸರಕಾರಗಳ ನೀತಿಗಳು ಮತ್ತು ರಾಷ್ಟ್ರೀಯ ಅಕೌಂಟುಗಳ ವ್ಯವಸ್ಥೆಯು ‘ಬೀದಿ ದೀಪದ ಪರಿಣಾಮ’ದ ರೀತಿಯಲ್ಲಿದೆ. ಅಂದರೆ ಕುಡುಕನೊಬ್ಬ ಕತ್ತಲಲ್ಲಿ ಕಳೆದುಕೊಂಡ ತನ್ನ ಕೀಗಳನ್ನು ಬೀದಿ ದೀಪದ ಅಡಿಯಲ್ಲಿ ಹುಡುಕುತ್ತಾನೆ. ಏಕೆಂದರೆ ದೀಪ ಇರುವುದು ಅಲ್ಲಿ ಮಾತ್ರ’ ಎಂದು ವಿವರಿಸುತ್ತಾರೆ.

ನಮ್ಮ ಜಿಡಿಪಿಯ ಅರ್ಥೈಸುವಿಕೆಯನ್ನು ಸಂಪೂರ್ಣ ಬದಲಿಸಬೇಕಾದ ಕಾಲ ಬಂದಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?

Donate Janashakthi Media

Leave a Reply

Your email address will not be published. Required fields are marked *