ಬೆಂಗಳೂರು : “ಚಲಿಸು ಕರ್ನಾಟಕ” ಸೈಕಲ್ ಜಾಥಾ ಹಮ್ಮಿಕೊಂಡಿದ್ದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿಯವರಿಗೆ ತಟ್ಟೆಕೆರೆ ಕಣಿವೆಯ ಕಡಿದಾದ ಇಳಿಜಾರಿನಲ್ಲಿ ಸೈಕಲ್‌ನಿಂದ ಬಿದ್ದು ಅಪಘಾತವಾಗಿದೆ. ಈ ಅಪಘಾತ ದೈಹಿಕವಾಗಿ, ವೈಯಕ್ತಿಕವಾಗಿ, ಆರ್ಥಿಕವಾಗಿ ದುಬಾರಿಯಾದ ಅಪಘಾತ ಎಂದು ಫೆಸ್ಬುಕ್ ನಲ್ಲಿ ರವಿಕೃಷ್ಣಾರೆಡ್ಡಿ ಬರೆದುಕೊಂಡಿದ್ದಾರೆ.
“ಮುಂದಿನ ಎರಡು ತಿಂಗಳ ಕಾಲ ನಾನು ಪ್ರವಾಸ ಮಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಪಕ್ಷದ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳಲೂ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಕಣಿವೆ ದಾಟಿದರೆ ನಾವು ಈ ಯಾತ್ರೆಯನ್ನು ಜಯಿಸಿದಂತೆ ಎಂದು ನನಗೆ ಮೊದಲಿನಿಂದಲೂ ಅನ್ನಿಸುತ್ತಿತ್ತು. ಆದರೆ ನನ್ನ ಆತಂಕ ಈ ರೀತಿಯಲ್ಲಿ ಕೊನೆಯಾಗುತ್ತದೆ ಎಂದು ಎಣಿಸಿರಲಿಲ್ಲ ಎಂದು ಅಪಾಘತದ ಕುರಿತು ಅವರು ತಿಳಿಸಿದ್ದಾರೆ.
ಅವರ ಅನುಪಸ್ಥಿತಿಯಲ್ಲಿ ನೆನ್ನೆ ರಾತ್ರಿ ಸಭೆ ಸೇರಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯು ಸುದೀರ್ಘ ಚರ್ಚೆ ಮಾಡಿ #ಚಲಿಸುಕರ್ನಾಟಕ #KRSಸೈಕಲ್‌ಯಾತ್ರೆ‘ಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಮುಂದೂಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ನೆನ್ನೆಗೆ ಈ ಸೈಕಲ್ ಯಾತ್ರೆಯು ನಾಲ್ಕು ದಿನ ಪೂರೈಸಿ 235 ಕಿಲೋಮೀಟರ್ ದೂರ ಕ್ರಮಿಸಿ ಹಾರೋಹಳ್ಳಿ ಮುಟ್ಟಿತ್ತು.
ರವಿಕೃಷ್ಣಾ ರೆಡ್ಡಿಯವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಲಭುಜದ ಮೂಳೆ ಮುರಿದಿರುವುದರಿಂದ ಬಲಗೈ ಬಹುತೇಕ ನಿಷ್ಕ್ರಿಯವಾಗಿದೆ. ಬಲಭಾಗದ ದೇಹವೂ ಕೂಡ ಹಾನಿಯಾಗಿದೆ. ಸರ್ಜರಿ ಮಾಡುವ ತನಕ ಇದೇ ಸಮಸ್ಯೆ. ಆದರೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ಬರುವ ತನಕ ಸರ್ಜರಿ ಎಂದು ಆಗುತ್ತದೆ ಎನ್ನುವ ಬಗ್ಗೆ ಖಚಿತತೆ ಇಲ್ಲ ಎಂದು ರವಿಕೃಷ್ಣಾರೆಡ್ಡಿ ಆಪ್ತರು ಜನಶಕ್ತಿ ಮೀಡಿಯಾಕ್ಕೆ ತಿಳಿಸಿದ್ದಾರೆ.