ರೈತರ ವಿರುದ್ಧ ಹರಿಯಾಣದಲ್ಲಿ ಪ್ರಕರಣ ದಾಖಲು

  • ಕೊಲೆ ಯತ್ನ, ಗಲಭೆ ಸೃಷ್ಟಿಸಿದ ಆರೋಪ

ನವದೆಹಲಿ: ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ರೈತರ ವಿರುದ್ಧ ಕೊಲೆ ಯತ್ನ, ಗಲಭೆಗೆ ಪ್ರಚೋದನೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಹಲವು ಪ್ರಕರಣಗಳನ್ನು ಹರಿಯಾಣ ಸರ್ಕಾರ ದಾಖಲಿಸಿದೆ.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ಗುರ್‌ನಮ್‌ ಸಿಂಗ್ ಚಾರುಣಿ ಸೇರಿದಂತೆ ಪ್ರತಿಭಟನಾನಿರತ ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹರಿಯಾಣ ಪೊಲೀಸ್‌ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.  ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 147 (ಗಲಭೆಗೆ ಪ್ರಚೋದನೆ), 149 (ಕಾನೂನುಬಾಹಿರ ಸಭೆ), 186 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟುಮಾಡುವುದು) ಮತ್ತು 269 (ಕೋವಿಡ್‌-19 ಮಾರ್ಗಸೂಚಿ ಉಲ್ಲಂಘನೆ) ಅಡಿಯಲ್ಲಿ ನವೆಂಬರ್ 26 ರಂದು ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೊಲೀಸ್‌ ಅಧಿಕಾರಿ ಪರ್‌ದೀಪ್‌ ಕುಮಾರ್ ಅವರ ದೂರಿನ ಮೇರೆಗೆ ಹರಿಯಾಣದ ಪರಾವೊ ಪೊಲೀಸ್ ಠಾಣೆಯಲ್ಲಿ ನೂರಾರು ರೈತ ಮುಖಂಡರ ಮೇಲೆ ಪ್ರಕರಣಗಳನ್ನು ಹಾಕಲಾಗಿದೆ. ರೈತರ ಮೇಲೆ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಚಾರುಣಿ ಮತ್ತು ಇತರ ರೈತರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

‘ಭಾರತೀಯ ಕಿಸಾನ್ ಯೂನಿಯನ್‌ಗೆ ಸಂಬಂಧಿಸಿದ ಹರಿಯಾಣ ಮುಖ್ಯಸ್ಥರು ಮತ್ತು ಇತರರು ಅಂಬಾಲಾದ ಮೊಹ್ರಾ ಗ್ರಾಮದ ಬಳಿ ಜಮಾಯಿಸಿದ್ದರು. ಆ ಜಾಗದಲ್ಲಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕುಮಾರ್ ಅವರು ಪ್ರತಿಭಟನಾನಿರತ ರೈತರಿಗೆ ಮುಂದೆ ಹೋಗದಂತೆ ಕೇಳಿಕೊಂಡರು. ಪೊಲೀಸರ ಮನವಿಯನ್ನು ತಿರಸ್ಕರಿಸಿದ ಚಾರುಣಿ ತಮ್ಮ ಜೊತೆ ನೂರಾರು ರೈತರನ್ನು ಕರೆದುಕೊಂಡು ಮುನ್ನಡೆದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಲು ರೈತರು ಮುಂದಾದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ‘ದೆಹಲಿ ಚಲೊ’ ಪ್ರತಿಭಟನಾ ನಡೆಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *