ರಾಜ್ಯದ ಜನತೆಗೆ ಪಡಿತರ ಕಡಿತಕ್ಕೆ ಸಿಪಿಐ(ಎಂ) ತೀವ್ರ ವಿರೋಧ

ಬೆಂಗಳೂರು: ರಾಜ್ಯ ಸರಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ಜನತೆಗೆ ವಿತರಿಸುವ ಪಡಿತರದಲ್ಲಿ 10 ಕೆ.ಜಿ.ಯಿಂದ ಕೇವಲ ಎರಡು ಕೆಜಿ ಇಳಿಸಿರುವ ಕ್ರಮವನ್ನು ಖಂಡಿಸಿರುವ ಸಿಪಿಐ(ಎಂ) ಪಕ್ಷವು ರಾಜ್ಯದ ಜನತೆ ಕೋವಿಡ್‌ ಪರಿಸ್ಥಿತಿಯಿಂದಾ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಕೂಡಲೇ ಹಿಂದೆ ಇದ್ದ 10 ಕೆ.ಜಿ. ಪಡಿತರವನ್ನು ವಿತರಿಸಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ʻʻಕರ್ನಾಟಕ ಸರಕಾರವು ಕೇಂದ್ರ ಸರಕಾರದ ನಿರ್ದೇಶನದಂತೆ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ದುರುದ್ದೇಶದಿಂದಲೇ ರಾಜ್ಯದ ಬಡವರಿಗೆ ಅಂದರೇ ಬಿಪಿಎಲ್ ಕಾರ್ಡುದಾರರಿಗೆ ಪಡಿತರ ವ್ಯವಸ್ಥೆಯ ಆಥವಾ ನ್ಯಾಯ ಬೆಲೆ ಅಂಗಡಿಯ ಮೂಲಕ ನೀಡಲಾಗುತ್ತಿದ್ದ ಪಡಿತರವನ್ನು ಫಲಾನುಭವಿಗೆ 10 ಕೆಜಿಯಿಂದ ಈ ಹಿಂದೆ 5 ಕೆಜಿಗೆ ಮತ್ತು ಈಗ ಅದನ್ನು 2 ಕೆಜಿಗೆ ಇಳಿಸಿ ರಾಜ್ಯದ ಬಡವರಿಗೆ ವಂಚನೆ ಎಸಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳ : ವಾರಾಂತ್ಯದ ನೈಟ್ ಕರ್ಫ್ಯೂಗೆ ಸರಕಾರ ನಿರ್ಧಾರ

ಇದು, ಅದಾಗಲೇ ಜಾರಿಗೆ ತಂದಿರುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020, ಆಹಾರ ಧಾನ್ಯಗಳನ್ನು/ಪದಾರ್ಥಗಳನ್ನು ಎಥೇಚ್ಛವಾಗಿ ದಾಸ್ತಾನು ಮಾಡಿ ಕಾರ್ಪೊರೇಟ್ ಲೂಟಿಗೆ ಎಲ್ಲ ಗ್ರಾಹಕರನ್ನು ತೆರೆದಿರುವುದಕ್ಕೆ ಪೂರಕವಾಗಿದ್ದು ಕಂಪನಿಗಳ ಲೂಟಿಯನ್ನು ವ್ಯಾಪಕಗೊಳಿಸಲಿದೆ ಎಂದು ಸಿಪಿಐ(ಎಂ) ಬಲವಾಗಿ ಪ್ರತಿರೋಧಿಸುತ್ತದೆ.

ರಾಜ್ಯ ಹಾಗೂ ದೇಶದಲ್ಲಿ ಶೇ. 85 ನಾಗರೀಕರ ತಲಾ ಆದಾಯ ದಿನವೊಂದಕ್ಕೆ 20 ರೂ. ಗಿಂತ ಕಡಿಮೆ ಇರುವಾಗ, 104 ದೇಶಗಳ ಅಪೌಷ್ಟಿಕತೆಯಲ್ಲಿ ನಮ್ಮ ದೇಶದ ಸ್ಥಾನವು ನಾಚಿಕೆ ಗೇಡಿನ 94 ಆಗಿರುವಾಗ,  ಅಪೌಷ್ಠಿಕತೆಯನ್ನು ನಿವಾರಿಸಲು ದೇಶದ ದಾಸ್ತಾನು ಕೇಂದ್ರಗಳಲ್ಲಿ ಕೊಳೆಯುತ್ತಿರುವ 42 ಲಕ್ಷ ಟನ್ ಪಡಿತರವನ್ನು ಕಾಪಾಡಿ ವ್ಯಾಪಕವಾಗಿ ಹಂಚಬೇಕಾದ ಕರ್ತವ್ಯವನ್ನು ದುರುದ್ದೇಶದಿಂದಲೇ ಕೈಬಿಟ್ಟು ಬಡಜನತೆಯನ್ನು ಅಪೌಷ್ಠಿಕತೆಯ ಸಾವಿನ ದವಡೆಗೆ ವೇಗವಾಗಿ ತಳ್ಳುವ ನರಹತ್ಯೆಯ ನೀಚ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿವೆಯೆಂದು ಸಿಪಿಐ(ಎಂ) ಕಟುವಾಗಿ ವಿಮರ್ಶಿಸುತ್ತದೆ.

ಇದನ್ನು ಓದಿ: ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು

ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರ ಕೇಂದ್ರ ಸರಕಾರ ಹೇರುವ ಎಲ್ಲಾ ಧಾಳಿಗಳನ್ನು ಬಾಯಿ ಮುಚ್ಚಿಕೊಂಡು ಜಾರಿ ಮಾಡುವ ಕಾರ್ಪೊರೇಟ್ ಕಂಪನಿಗಳ ಗುಲಾಮಿ ಸರಕಾರವಾಗಿರುವುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. 2021 ರ ಕೇಂದ್ರ ಸರಕಾರದ ಬಜೆಟ್ ನಲ್ಲಿಯೇ ಆಹಾರದ ಸಹಾಯಧನವನ್ನು 2020ರ ಬಜೆಟ್ಟಿಗೆ ಹೋಲಿಸಿದರೇ ಶೇ.41 ರಷ್ಠು ಕಡಿತ ಮಾಡಿದಾಗಲೇ ಯಡಿಯೂರಪ್ಪರವರು ಬಾಯಿ ಮುಚ್ಚಿಕೊಂಡಿದ್ದರು. ಈ ರಾಜ್ಯ ಸರಕಾರಕ್ಕೆ ರಾಜ್ಯದ ಬಡವರು, ದಲಿತರು, ಮಹಿಳೆಯರ ಕುರಿತ ಕಿಂಚಿತ್ತೂ ಕಾಳಜಿ ಇಲ್ಲವೆಂಬುದು ಇದರಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ.

ರಾಜ್ಯದ ಜನತೆ ಆರ್ಥಿಕ ಬಿಕ್ಕಟ್ಟು ಹಾಗೂ ಕಳೆದ ಮೂರು-ನಾಲ್ಕು ವರ್ಷಗಳಿಂದ ಬರಗಾಲ, ಅತೀವೃಷ್ಟಿ, ಪ್ರವಾಹ, ಕೋವಿಡ್-19 ಹಾಗೂ ಲಾಕ್ ಡೌನ್ ಗಳಿಂದ ಬಾಧಿತರಾಗಿದ್ದಾರೆ.

ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ

ಈ ಬಾಧಿತರ ಮೇಲೆ, ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ಮತ್ತು ಆಸ್ತಿ ಮತ್ತಿತರೇ ತೆರಿಗೆ ಭಾರಗಳನ್ನು ಈಗಾಗಲೇ ಹೇರಿ ಗಾಯದ ಮೇಲೆ ಬರೆ ಎಳೆಯಲಾಗಿದೆ. ಇದೀಗ ರಾಜ್ಯ ಸರಕಾರ ಪಡಿತರ ಕಡಿತ ಮಾಡಿ ಬರೆ ಎಳೆದ ಗಾಯಕ್ಕೆ ಖಾರ ತುಂಬುವ ಘನಂಧಾರಿ ಕೆಲಸ ಮಾಡಿದೆ.

ಈ ಕೂಡಲೇ ಪಡಿತರ ಕಡಿತವನ್ನು ಹಿಂಪಡೆಯುವಂತೆ ಮತ್ತು ತಲಾ ವ್ಯಕ್ತಿಗೆ ಕನಿಷ್ಠ 10 ಕೆಜಿ ಸಮಗ್ರ ಪಡಿತರ ಒದಗಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿ ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ.

ಅದೇ ರೀತಿ, ರಾಜ್ಯದ ನಾಗರೀಕರು ಬಡವರು, ಸಂಘ ಸಂಸ್ಥೆಗಳು, ಪಕ್ಷದ ಘಟಕಗಳು ಸರಕಾರಗಳ ಈ ದೌರ್ಜನ್ಯವನ್ನು ಬಲವಾಗಿ ಪ್ರತಿರೋಧಿಸುವಂತೆ ಸಿಪಿಐ(ಎಂ) ಕರೆ ನೀಡುತ್ತದೆ.

Donate Janashakthi Media

Leave a Reply

Your email address will not be published. Required fields are marked *