ಬಹುಕೋಟಿ ಮೌಲ್ಯದ ಗೋಮಾಳ ಜಮೀನು ರಾಷ್ಟ್ರೋತ್ಥಾನಕ್ಕೆ!

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯಲ್ಲಿರುವ ಹೆಸರಘಟ್ಟ ಬಳಿ 24.8 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ ಸಂಘಪರಿವಾರದ ಅಂಗಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್‌ಗೆಬಹುಕೋಟಿ ಮೌಲ್ಯದ 9.32 ಎಕರೆ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಲು ರಾಜ್ಯ ಬಿಜೆಪಿ ಸರಕಾರ ಮುಂದಾಗಿರುವುದನ್ನು ‘the-file.in‘ ಬಯಲಿಗೆಳೆದಿದೆ.

ಇದೇ ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ 76 ಎಕರೆ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು.

ಈ ವರದಿಯನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಈ ಸಮಿತಿಗೆ ಯಾವುದೇ ವರದಿಯನ್ನೂ ಸಲ್ಲಿಸದ ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ ಹೆಸರಘಟ್ಟದಲ್ಲಿ 9.32 ಎಕರೆ ಜಮೀನು ಮಂಜೂರು ಮಾಡಲು ಮುಂದಾಗಿರುವುದು ಮತ್ತೊಮ್ಮೆ ಸಿಎಜಿ ಆಕ್ಷೇಪಣೆಗೆ ದಾರಿಮಾಡಿಕೊಡಲಿದೆ.

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2009 ಮತ್ತು 2011ರಲ್ಲಿ ಒಟ್ಟು 76 ಎಕರೆ 3 ಗುಂಟೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿದ್ದರೂ ಪ್ರಸಕ್ತ 2021ನೇ ಸಾಲಿನಲ್ಲಿಯೂ 9 ಎಕರೆ 32 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಲು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಆಸಕ್ತಿ ವಹಿಸಿದ್ದಾರೆ ಎಂದು ಗೊತ್ತಾಗಿದೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್ 69ರಲ್ಲಿ 9-32 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಸಂಬಂಧ 2021ರ ನವೆಂಬರ್ 25ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕಡತ ಮಂಡನೆಯಾಗಿತ್ತು.

ಇದನ್ನೂ ಓದಿ : ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 50 ಸಾವಿರ, ಎಲ್ಲಿದೆ ಶಿಕ್ಷಣ ಹಕ್ಕು ಕಾಯ್ದೆ?

ಆದರೆ ಈ ಕುರಿತು ಸಚಿವ ಸಂಪುಟವು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಬದಲಿಗೆ ಮಂಜೂರಾತಿ ವಿಚಾರವನ್ನು ಕಂದಾಯ ಇಲಾಖೆಯೇ ನೇರವಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸೂಚಿಸಲಾಯಿತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಒಟ್ಟು 24.8 ವಿಸ್ತೀರ್ಣದ ಗೋಮಾಳ ಇದೆ. 2012ರಿಂದ 2021-22ರವರೆಗೂ ಈ ಜಮೀನು ಗೋಮಾಳ ಎಂದೇ ನಮೂದಾಗಿರುವುದು ಭೂಮಿ ತಂತ್ರಾಂಶದಿಂದ ತಿಳಿದು ಬಂದಿದೆ.

ಹುರುಳಿಚಿಕ್ಕನಹಳ್ಳಿಯಲ್ಲಿ ಖುಷ್ಕಿ ಜಮೀನಿಗೆ ತಲಾ ಎಕರೆಯೊಂದಕ್ಕೆ 61.00 ಲಕ್ಷ ರೂ. ಸರಕಾರಿ ಮಾರ್ಗಸೂಚಿ ದರವಿದೆ. ಇದರ ಪ್ರಕಾರ 9.32 ಎಕರೆಗೆ 5.49 ಕೋಟಿ ರೂ.ಗೂ ಹೆಚ್ಚು ಬೆಲೆಬಾಳಲಿದೆ. ಮುಕ್ತ ಮಾರುಕಟ್ಟೆಯಲ್ಲಿನ ಲೆಕ್ಕಚಾರದ ಪ್ರಕಾರ (ಸರಕಾರಿ ಮಾರ್ಗಸೂಚಿ ದರಕ್ಕಿಂತ ಗರಿಷ್ಠ 3 ಪಟ್ಟು) ತಲಾ ಎಕರೆಗೆ 1.81 ಕೋಟಿ ರೂ. ಆಗಲಿದೆ. ಇದರ ಪ್ರಕಾರ 9.32 ಎಕರೆಗೆ ಅಂದಾಜು 16.86 ಕೋಟಿ ರೂ. ಆಗಲಿದೆ.

2009ರ ಅಕ್ಟೋಬರ್ ಮತ್ತು 2011ರಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 76 ಎಕರೆ 3 ಗುಂಟೆ ವಿಸ್ತೀರ್ಣದ ಜಾಗವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲಾಗಿತ್ತು. ಫಲಾನುಭವಿಗಳು ಯಾವುದೇ ಅರ್ಜಿಯನ್ನು ಸಲ್ಲಿಸದಿದ್ದರೂ ರಿಯಾಯಿತಿಗಳನ್ನು ನೀಡಲು ಯಾವುದೇ ಕಾರಣಗಳನ್ನೂ ದಾಖಲಿಸದೆಯೇ ಸರಕಾರವು ಸ್ವಯಂ ಪ್ರೇರಿತವಾಗಿ ರಿಯಾಯಿತಿ ನೀಡಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಯಮ 27ರ ಅಡಿಯಲ್ಲಿ ಅಗತ್ಯವಿರುವ ಯಾವುದೇ ಕಾರಣಗಳನ್ನು ದಾಖಲಿಸಿರಲಿಲ್ಲ. ಇದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು.

ಅದೇ ರೀತಿ ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿಯಲ್ಲಿ 2009ರಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಗೆ 6 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಶೇ.50ರ ರಿಯಾಯಿತಿಯನ್ನು ನೀಡ ಲಾಗಿದ್ದ ಮೂಲ ಆದೇಶವನ್ನು ಆನಂತರ ಶೇ.75ರ ರಿಯಾಯಿತಿಗೆ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಹಂಚಿಕೆಯನ್ನು ಪಡೆದವರ ಕೋರಿಕೆ ಮೇರೆಗೆ ಎಂದು ಹೇಳಲಾಗಿತ್ತು. ಆದರೂ ಅಂತಹ ಕೋರಿಕೆಯ ಪತ್ರವು ದಾಖಲೆಗಳಲ್ಲಿ ಇರಲಿಲ್ಲ. ಭೂಮಿಯ ಮಾರ್ಗ ಸೂಚಿ ಮೌಲ್ಯವು ಎಕರೆಗೆ 45 ಲಕ್ಷ ರೂ. ಆಗಿತ್ತು ಹಾಗೂ ಹೆಚ್ಚುವರಿ ಯಾಗಿ ನೀಡಿದ್ದ ರಿಯಾಯಿತಿಯು 67.50 ಲಕ್ಷ ರೂ. ಆಗಿತ್ತು.

ಸರಕಾರವು ಯಾವುದೇ ಕಾರಣಗಳನ್ನು ದಾಖಲಿಸದೆಯೇ ಸ್ವಯಂ ಪ್ರೇರಿತವಾಗಿ ಶೇ. 20ರಿಂದ 100ರಷ್ಟು ರಿಯಾಯಿತಿಗಳನ್ನು ನೀಡಿತ್ತು. ಒಟ್ಟಾರೆಯಾಗಿ ಭೂಮಿಯ ಬೆಲೆಯನ್ನು 18.93 ಕೋಟಿ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ವಸೂಲಾತಿ ಮಾಡುವಲ್ಲಿ ಪರಿಣಿಮಿಸಿತ್ತು ಎಂದು ಸಿಎಜಿ (ಅನುಬಂಧ-5) ವರದಿಯಲ್ಲಿ ವಿವರಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *