ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಕೇಸರೀಕರಣದ ಅಜೆಂಡಾ: ವಾಸುದೇವರೆಡ್ಡಿ

ಹರಪನಹಳ್ಳಿ: ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ನೆಪದಲ್ಲಿ ಸಂಘಪರಿವಾರ, ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪೂರಕವಾದ ಹಿಡನ್ ಅಜೆಂಡಾ ಜಾರಿಗಾಗಿ ಶಿಕ್ಷಣದ ಕೇಸರೀಕರಣ, ಕೋಮುವಾದಿಕರಣ, ಖಾಸಗೀಕರಣ ತ್ರೀವ್ರಗೊಳಿಸಿ ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಅಪಾಯಕಾರಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯನ್ನು ಬಿಜೆಪಿ ಸರ್ಕಾರ ಅಪ್ರಜಾಸತ್ತಾತ್ಮಕವಾಗಿ ಜಾರಿಗೊಳಿಸುತ್ತಿದೆ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ), ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ಎಂದು ದೂರಿದರು.

ಸರ್ಕಾರಿ ನೌಕರರ ಭವನದಲ್ಲಿ ನಡೆದ ಎಸ್ಎಫ್ಐ 16ನೇ ಹರಪನಹಳ್ಳಿ ತಾಲ್ಲೂಕು ಸಮ್ಮೇಳನವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಬಿಜೆಪಿ ಸರ್ಕಾರ ಸರ್ವರಿಗೂ-ಶಿಕ್ಷಣ ಸರ್ವರಿಗೂ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಹಿಜಾಬ್ ಕೇಸರಿ-ಶಾಲು ವಿವಾದ ಸೃಷ್ಟಿಸಿದೆ. ಬಡವರ ಮಕ್ಕಳ ತಿನ್ನುವ ಮೊಟ್ಟೆ, ಧರಿಸುವ ಬಟ್ಟೆ ವಿಚಾರಗಳನ್ನು ಅನಾವಶ್ಯಕವಾಗಿ ವಿವಾದವಾಗಿ ಸೃಷ್ಟಿಸಲಾಗಿದೆ. ಈ ಹುನ್ನಾರಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಸಮಾನ ಗುಣಮಟ್ಟದ ಶಿಕ್ಷಣದ ಹಕ್ಕಿಗಾಗಿ, ದೇಶದ ಶಾಂತಿ ಸೌಹಾರ್ದತೆಗಾಗಿ ವಿದ್ಯಾರ್ಥಿಗಳು ಐಕ್ಯತೆಯಿಂದ ಹೋರಾಡಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪ ಮಾತನಾಡಿ, ಬೇರೆ ಜನಾಂಗದವರ ಬಗ್ಗೆ ದ್ವೇಷ ಬಿತ್ತುವ ಶಕ್ತಿಗಳಿಂದ ವಿದ್ಯಾರ್ಥಿಗಳು ದೂರವಿದ್ದು, ನಿಮ್ಮ ಹಕ್ಕುಗಳನ್ನು ರಕ್ಷಿಸುವ ಎಸ್ಎಫ್ಐ ನಂತಹ ಪ್ರಗತಿಪರ ಜಾತ್ಯತೀತತ ಸಂಘಟನೆಗಳನ್ನು ಬಲಪಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಗತಿಪರ ಚಿಂತಕ, ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ಗಡಿ-ಗುಡಿ-ನುಡಿ ಎಂಬ ಮೂರು ವಿಷಯಗಳಿಂದ ಒಂದು ದೇಶ ನಾಶವಾಗುತ್ತದೆ. ಆದ್ದರಿಂದ ಶಿಕ್ಷಣ ಸಂಘಟನೆ ಹೋರಾಟ ಮೂಲಕ ದೇಶ ಕಟ್ಟಬೇಕು ಎಂದರು.

ಎಸ್ಎಫ್ಐ ಮಾಜಿ ತಾಲ್ಲೂಕು ಕಾರ್ಯದರ್ಶಿ ಈಶ್ವರ್ ಅಭಿವ್ಯಕ್ತಿ ಮಾತನಾಡಿ, ಎಸ್ಎಫ್ಐ ಸಂಘಟನೆ ಹರಪನಹಳ್ಳಿ ತಾಲ್ಲೂಕು 371(ಜೆ) ಕಲಂ ಗೆ ಸೇರಿಸಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ನಿರ್ಣಾಯಕ ಹೋರಾಟಗಳನ್ನು ನಡೆಸುತ್ತಿದೆ ಎಂದರು.

ಸಮ್ಮೇಳನದ ಭಾಗವಾಗಿ ಹರಪನಹಳ್ಳಿ ಐಬಿ ಸರ್ಕಲ್‌ನಿಂದ ಶಿಕ್ಷಣದ ಕೇಸರೀಕರಣ, ಕೋಮುವಾದಿಕರಣ, ಖಾಸಗೀಕರಣ ನೀತಿಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಹಾಸ್ಟೆಲ್ ಗಳ ಸಮಗ್ರ ಅಭಿವೃದ್ಧಿಗಾಗಿ, ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆಗಾಗಿ ನೂರಾರು ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.

ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ರಾಮಾವತ್ ಅಧ್ಯಕ್ಷತೆ ವಹಿಸಿದ್ದರು. ದುರ್ಗಪ್ಪ, ವೆಂಕಟೇಶ್ ನಾಯಕ್ ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *