ಕಂದಕವನ್ನು ಮುಚ್ಚಿ ಸಮಸಮಾಜ ನಿರ್ಮಾಣ ಮಾಡಬೇಕಿದೆ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು: ‘ಶೇ 74ರಷ್ಟು ರಾಷ್ಟ್ರದ ಸಂಪತ್ತು, ಶೇ 1ರಷ್ಟು ಜನರು ಅನುಭವಿಸುತ್ತಿದ್ದಾರೆ. ಉಳಿದ ಶೇ 26ರಷ್ಟು ಸಂಪತ್ತನ್ನು ಶೇ. 99ರಷ್ಟು ಮಂದಿಗೆ ಹಂಚಿಕೆಯಾಗಿದೆ. ಈ ಪ್ರಮಾಣದಲ್ಲಿ ಸಂಪತ್ತಿನ ಏರುಪೇರಿನಿಂದಾಗಿ ಸಮಸ್ಯೆಗಳು ಸಹ ಏರುಗತಿಯಲ್ಲಿ ಸಾಗುತ್ತಿವೆ. ಕಂದಕದ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ಕಂದಕವನ್ನು ಮುಚ್ಚಿ ಸಮಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕರೆ ನೀಡಿದರು.

ಜನ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಡಾ.ಟಿ.ಆರ್‌. ಚಂದ್ರಶೇಖರ ಅವರ ‘ಅಭಿವೃದ್ಧಿಯ ಸಾಮಾಜಿಕ ಆಯಾಮಗಳು’ ಹಾಗೂ ‘ಬಜೆಟ್‌ ಎಂದರೇನು?’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬರಗೂರು ರಾಮಚಂದ್ರಪ್ಪ ಅವರು ‘ರಾಷ್ಟ್ರದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಕಂದಕ ಹೆಚ್ಚಳವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದರು.

‘ನಿರುದ್ಯೋಗದ ಸಮಸ್ಯೆಯೂ ರಾಷ್ಟ್ರದಲ್ಲಿ ಹೆಚ್ಚಳವಾಗಿದೆ ಎಂದು ಅಧ್ಯಯನಗಳೇ ಹೇಳುತ್ತಿವೆ. ಅಭಿವೃದ್ಧಿಯ ಪರಿಕಲ್ಪನೆಯೇ ಬದಲಾಗಿರುವ ಕಾಲಘಟ್ಟದಲ್ಲಿ ಚಂದ್ರಶೇಖರ ಅವರು ನಿಖರವಾದ ಆಧಾರಗಳೊಂದಿಗೆ ಬಜೆಟ್‌ ಎಂದರೇನು? ಕೃತಿ ಬರೆದಿದ್ದಾರೆ. ಸಾಮಾಜಿಕತೆ ಬಿಟ್ಟು ಆರ್ಥಿಕತೆ ಇಲ್ಲ. ನಿಜವಾದ ಆರ್ಥಿಕತೆ ಎಂದರೆ, ಕೆಳಸ್ತರದ ಜನರನ್ನು ಮೇಲಕ್ಕೆ ಎತ್ತುವುದೇ ಆಗಿದೆ’ ಎಂದು ವಿಶ್ಲೇಷಿಸಿದರು.

‘ಬಜೆಟ್‌ ವಿಚಾರದಲ್ಲಿ ಆಡಳಿತ–ವಿರೋಧ ಪಕ್ಷಗಳ ಕಂಠಪಾಠ ಒಂದೇ ಆಗಿರುತ್ತದೆ. ನಿಜವಾದ ಬಜೆಟ್‌ ವಿಶ್ಲೇಷಣೆ ನಡೆಯುತ್ತಿಲ್ಲ. ರಾಜಕಾರಣಿಗಳು ಪಕ್ಷದ ನೆಲೆಯಿಂದ ದೂರವುಳಿದು ಸಮಾಜಕ್ಕೆ ಪೂರಕವಾಗಿ ವಿಶ್ಲೇಷಣೆ ನಡೆಸಬೇಕು. ಅಭಿವೃದ್ಧಿಯ ಆದ್ಯತೆ ಸಮಾನತೆಯಿಂದ ಕೂಡಿರಬೇಕು. ಬಜೆಟ್‌ ಎಂದರೆ ಅಂಕಿಸಂಖ್ಯೆಯ ಮೇಲಾಟ ಮಾತ್ರ ಆಗಿರಬಾರದು’ ಎಂದು ಪ್ರತಿಪಾದಿಸಿದರು.

‘ಎಲ್ಲರ ಯೋಚನೆಗಳು ಅರ್ಥಗರ್ಭಿತವಾದರೆ ಮಾತ್ರ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಒಂದೇ ಎಂದು ಭಾವಿಸಿದ್ದೇವೆ. ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿ ಮುಖ್ಯ’ ಎಂದು ಕೇಶವ ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್‌.ಆರ್‌.ಕೇಶವ ಮಾತನಾಡಿ, ‘ದೇಶದಲ್ಲಿ ನೈಜ ಅಭಿವೃದ್ಧಿ ಮುನ್ನೆಲೆಗೆ ಬರಬೇಕಿದೆ. ಜನಪಂಥೀಯ ಅಭಿವೃದ್ಧಿ ವಾದ ಬಹಳ ಪ್ರಮುಖ. ಆದರೆ, ರಾಜಕೀಯ ಕಾರಣಕ್ಕೆ ಎಡ, ಬಲಪಂಥೀಯ ವಾದದಲ್ಲಿ ಅಭಿವೃದ್ಧಿ ವಿಚಾರ ಗೌಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ್‌ ಅಧ್ಯಕ್ಷತೆ ವಹಿಸಿದ್ದರು. ಡಾ.ಟಿ.ಆರ್‌.ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್‌, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ, ಬಿ. ರಾಜಶೇಖರ್‌ ಮೂರ್ತಿ ಮೊದಲಾದವರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *