ಬೆಳಗಾವಿ: ರಸ್ತೆ ಅಪಘಾತದಿಂದ ಎಎಸ್‌ಐ ಕುಟುಂಬ ಸೇರಿ ನಾಲ್ವರು ಮರಣ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಎಎಸ್‌ಐ ಕುಟುಂಬದ ಇಬ್ಬರು ಸೇರಿ ನಾಲ್ವರು ಮರಣ ಹೊಂದಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ, ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿ ಆಗಿದ ಪರಿಣಾಮ ಅಪಘಾತವಾಗಿದೆ. ಮೃತರನ್ನು ಕುಡಚಿ ಎಎಸ್ಐ ಪರಶುರಾಮ ಹಲಕಿ ಅವರ ಪತ್ನಿ ರುಕ್ಮಿಣಿ ಹಲಕಿ (48), ಪುತ್ರಿ ಅಕ್ಷತಾ (22) ಕಾರು ಚಾಲಕ ನಿಖಿಲ್ ಕದಂ (24) ಹಾಗೂ ಹಣಮವ್ವ ಚಿಪ್ಪಲಕಟ್ಟಿ ಮರಣ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಎಎಸ್‌ಐ ಪರಶುರಾಮ ಹಲಕಿ ವಾಹನದಲ್ಲಿ ಇರಲಿಲ್ಲ.

ರುಕ್ಮಿಣಿ, ಅಕ್ಷತಾ ಹಾಗೂ ನಿಖಿಲ್‌ ಸ್ಥಳದಲ್ಲೇ ಕೊನೆಯುಸಿರೆಳೆದರು. ಬೈಕಿನಲ್ಲೂ ಮೂವರು ಸಂಚರಿಸುತ್ತಿದ್ದರು. ಅವರಲ್ಲಿ ಹಣಮವ್ವ ಎನ್ನುವ ವೃದ್ಧೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೈಕ್‌ ಸವಾರ ಹಾಗೂ ಹಿಂಬದಿಯಲ್ಲಿ ಕುಳತವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ.

ರುಕ್ಮಿಣಿ ಹಲಕಿ ಹಾಗೂ ಪುತ್ರಿ ಅಕ್ಷತಾ ಯರಗಟ್ಟಿ ಕಡೆಗೆ ಹೊರಟಿದ್ದಾಗ ಎದುರಿಗೆ ಬಂದ ಸಿಮೆಂಟು ತುಂಬಿದ್ದ ಲಾರಿಯೊಂದು  ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಹಿಂದೆಯೇ ಬರುತ್ತಿದ್ದ, ಬೈಕ್‌ ಸವಾರರಿಗೂ ಈ ವಾಹನಗಳು ಗುದ್ದಿವೆ. ಅಪಘಾತದ ರಭಸಕ್ಕೆ ಕಾರು, ಬೈಕ್‌ ಸಂಪೂರ್ಣ ನಜ್ಜುಗುಜ್ಜಾದವು. ಲಾರಿ ಅಡಿಗೆ ಸಿಲುಕಿದ ಕಾರಿನಲ್ಲಿದ್ದ ದೇಹಗಳನ್ನು ತೆಗೆಯಲು ಸಾಕಷ್ಟು ಶ್ರಮಿಸಬೇಕಾಯಿತು. ಸರಣಿ ಅಪಘಾತದಿಂದಾಗಿ ಬಾಚಿ– ರಾಯಚೂರು ರಾಜ್ಯ ಹೆದ್ದಾರಿ ಸಂಚಾರ ಕೆಲಕಾಲ ಬಂದ್‌ ಆಗಿದ್ದವು.

ಎರಡು ತಾಸಿನ ನಂತರ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು. ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *