ಹನೂರು: ರಸ್ತೆಗಳೆಲ್ಲ ಗುಂಡಿಮಯವಾಗಿದ್ದು ದಿನ ನಿತ್ಯ ಸಂಚಾರ ಮಾಡುವ ವಾಹನ ಸವಾರರಿಗೆ ಕಿರಿಕಿರಿಯಾಗಿದೆ ಅದೆ ರೀತಿ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಸುರೇಶ್ ರವರ ಪತ್ನಿ ಆಷಾರಾಣಿ 29 ವರ್ಷ ವಯಸ್ಸಿನ ಗರ್ಭಿಣಿ ಹನೂರು ಬಂಡಳ್ಳಿ ಸಂಪರ್ಕಿಸುವ ರಸ್ತೆ ಅದ್ವಾನದಿಂದಾಗಿ ಗರ್ಭಪಾತವಾದ ದುರ್ಘಟನೆ ಮಾರ್ಗಮದ್ಯೆ ಸಂಭವಿಸಿದೆ.
ಹನೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಸ್ವಂತ ಗ್ರಾಮ ಬಂಡಳ್ಳಿಗೆ ಹಿಂದಿರುಗುವ ಸಂದರ್ಭದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಾರನ್ನು ಬಾಡಿಗೆಗೆ ಪಡೆದು ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಗೆ ತೋರಿಸಲಾಗಿ ಅವರು ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದು, ಅದರಂತೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನು ಓದಿ: 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ ಎರಡೇ ದಿನಕ್ಕೆ ಕಿತ್ತೋಯ್ತು!
ಆದರೆ, ನಂತರ ವೈದ್ಯಕೀಯ ಆರೈಕೆ ಮಾಡಿದಾಗ ಮಗು ತೀರಿಕೊಂಡಿದೆ ಎಂದು ತಿಳಿದು ಬಂತು. ಅನಿವಾರ್ಯವಾಗಿ ಗರ್ಭಪಾತ ಮಾಡುವ ಪ್ರಮೇಯ ನಿರ್ಮಾಣವಾಯಿತು. ಸುಮಾರು 9 ವರ್ಷಗಳ ಕಾಲ ಯಾವುದೇ ಮಗು ಇಲ್ಲದೆ, ದಂಪತಿಗಳು ಮಗು ಆಗುತ್ತದೆ ಎಂಬ ಸಂತೋಷದಲ್ಲಿದ್ದರು. ಆದರೆ ಲೋಕವನ್ನೇ ನೋಡದ ಹಸುಗೂಸು, ತಾಯಿಯ ಗರ್ಭದಲ್ಲಿ ತೀರಿಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.
ಹಲವಾರು ವರ್ಷಗಳಿಂದ ಹನೂರ, ಬಂಡಳ್ಳಿ ರಸ್ತೆ ಅಭಿವೃದ್ಧಿ ಕಾಣದೆ, ಇಂತಹ ಅವಘಡಗಳು ಸಂಭವಿಸುತ್ತಿರುವುದು ಇದು ಹೊಸದೇನು ಅಲ್ಲ. ಈ ಭಾಗದ ಜನರು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಹಿಡಿಶಾಪ ಹಾಕುತ್ತಿದ್ದು ಒಂದು ವೇಳೆ ರಸ್ತೆ ಸರಿಪಡಿಸದಿದ್ದರೆ, ಈ ಬಾರಿಯ ವಿಧಾನಸಭಾ ಚುನಾವಣೆ ಬಹಿಷ್ಕಾರ ಹಾಕುತ್ತೀವಿ ಎಂದು ಸಾರ್ವಜನಿಕರು ತಿಳಿಸಿದರು. ಕೆಲವು ದಿನಗಳ ಹಿಂದೆ, ರಸ್ತೆಗೆ ತ್ಯಾಪೆ ಹಾಕಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಂದಾದಾಗ, ಜನರು ಪ್ರತಿಭಟಿಸಿದ್ದು, ಕಾಮಗಾರಿಯನ್ನು ತಡೆಹಿಡಿದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು.
ಇದನ್ನು ಓದಿ: ರಸ್ತೆ ಅವ್ಯವಸ್ಥೆಯಿಂದ ಎರಡೂವರೆ ಗಂಟೆ ಸಂಚಾರ ದಟ್ಟಣೆ; ಶಾಲೆಗೆ ಗೈರಾದ ಮಕ್ಕಳು-ಮೌನ ಪ್ರತಿಭಟನೆ
ಹನೂರು ಪಟ್ಟಣದಿಂದ ಬಂಡಳ್ಳಿ ಸಾಧ್ಯ ಸಂಪರ್ಕಿಸುವ ರಸ್ತೆಯಲ್ಲಿ, ಹಲವಾರು ಗ್ರಾಮಗಳಿದ್ದು, ಪ್ರತಿದಿನವೂ ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹಲವಾರು ಬಾರಿ ರಸ್ತೆಯ ದುರವಸ್ಥೆಯಿಂದಾಗಿ, ಅಪಘಾತವಾಗಿ ಸಾವು ಸಂಭವಿಸಿದ ಉದಾಹರಣೆಗಳು ಕೂಡ ಇವೆ. ಈ ಭಾಗದ ಜನರ ದ್ವಿಚಕ್ರ ವಾಹನ ಕಾರು ಬಸ್ಸುಗಳು ಸಹ ಈ ಕುಲಗೆಟ್ಟ ರಸ್ತೆಯಿಂದಾಗಿ, ವಾಹನಗಳು ರಿಪೇರಿಗೆ ಬರುತ್ತಿದ್ದು, ಯಾಕೆ ನಾವು ಇಂತಹ ಕುಲಗೆಟ್ಟ ರಸ್ತೆಗೆ ಕಂದಾಯ ಕಟ್ಟಬೇಕು ಎಂದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮೇಕೆದಾಟು ಹಾಗೂ ಚಿಕ್ಕಲ್ಲೂರಿನ ದೇವಸ್ಥಾನಕ್ಕೂ ಸಹ ಇದೇ ರಸ್ತೆ ಅವಲಂಬಿತವಾಗಿದೆ.
ವರದಿ: ಬಂಗಾರಪ್ಪ ಸಿ ಪೊನ್ನಾಚಿ