ಬೆಂಗಳೂರು: ಬೀದರ್‌ನಲ್ಲಿರುವ ಶಾಹೀನ್ ಶಾಲೆಯಲ್ಲಿ ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರ ಶುಕ್ರವಾದ ಕರ್ನಾಟಕ ಹೈಕೋರ್ಟಿಗೆ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾಯಿದೆಗೆ (ಸಿಎಎ) ಸಂಬಂಧಿಸಿದಂತೆ ಕಳೆದ ವರ್ಷ ಬೀದರ್‌ನ ಶಾಹೀನ್ ಶಾಲೆಯ ವಿದ್ಯಾರ್ಥಿಗಳು ನಾಟಕ ಪ್ರಸ್ತುತಪಡಿಸಿದ್ದಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಪೊಲೀಸರ ನಡೆ ಬಗ್ಗೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.
ಇದನ್ನು ಓದಿ: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಮಕ್ಕಳು ಪ್ರಸ್ತುತಪಡಿಸಿದ್ದ ನಾಟಕವನ್ನು ಆಧಾರವಾಗಿಸಿಕೊಂಡು ಶಾಲೆಯ ವಿರುದ್ಧ ದಾಖಲಿಸಲಾಗಿದ್ದ ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಕೈಗೊಂಡ ಪ್ರಕರಣದ ವಿಚಾರಣೆಯನ್ನು ದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ಪೊಲೀಸ್ ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ದಿನದಂತ್ಯಕ್ಕೆ ಮೆಮೊ ಸಲ್ಲಿಸಲಾಗುವುದು. ಮೂರ್ನಾಲ್ಕು ದಿನಗಳಲ್ಲಿ ಅನುಪಾಲನಾ ವರದಿ ಸಲ್ಲಿಸಲಾಗುವುದು. ಸುತ್ತೋಲೆಯಲ್ಲಿ ಎರಡನೇ ನಿರ್ದೇಶನವಾದ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016 ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಕಳುಹಿಸಿದ್ದಾರೆ. ಈ ಘಟನೆ ಮುಂದೆ ಮರುಕಳಿಸುವುದಿಲ್ಲ” ಎಂದು ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು.
ಶಾಹೀನ್ ಶಾಲೆಯಲ್ಲಿ ಸಿಎಎ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧಿಸಿದಂತೆ 4, 5 ಮತ್ತು ಆರನೇ ತರಗತಿ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಸಂಭಾಷಣೆ ಇತ್ತು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರೊಬ್ಬರು ದೂರು ದಾಖಲಿಸಿದ್ದರು.
ಇದನ್ನು ಓದಿ: ಐಪಿಸಿಯಿಂದ ರಾಷ್ಟ್ರದ್ರೋಹದ ಸೆಕ್ಷನ್ 124ಎ ವಜಾ ಅರ್ಜಿ : ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ಇದನ್ನು ಆಲಿಸಿದ ನ್ಯಾಯಾಲಯವು ಈ ಸಂಬಂಧ ಮೂರು ವಾರಗಳಲ್ಲಿ ಅನುಪಾಲನಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ. ಅಲ್ಲದೇ ವಿಚಾರಣೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಿದೆ.
ವಿಚಾರಣೆಯ ಆರಂಭದಲ್ಲಿ ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ನ್ಯಾಯಪೀಠ ಹಿಂದೆ ಹೊರಡಿಸಿದ್ದ ವಿಸ್ತೃತ ಆದೇಶವನ್ನು ನೆನಪಿಸಿದರು. “ನ್ಯಾಯಾಲಯದ ಹಿಂದಿನ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಅಫಿಡವಿಟ್ ಸಲ್ಲಿಸಲಾಗಿಲ್ಲ. ಯಾವುದೇ ಹೇಳಿಕೆಯನ್ನೂ ನಮಗೆ ನೀಡಲಾಗಿಲ್ಲ” ಎಂದರು.
ವಿಚಾರಣೆಯ ಹಂತದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿಯೊಬ್ಬರ ತಾಯಿಯನ್ನು ಬಂಧಿಸಲಾಗಿತ್ತು. ಆನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬೀದರ್‌ನ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.