ಅಪರೂಪದ ಪುಸ್ತಕ: ‘ಬರಿಯ ನೆನಪಲ್ಲ’

ಡಾ. ರಹಮತ್ ತರೀಕೆರೆ

ಸ್ರೇಲ್-ಪ್ಯಾಲೆಸ್ತೇನ್ ನಡುವಣ ರಾಜಕೀಯ ವಿವಾದದ ಚಾರಿತ್ರಿಕ ವಿವರಣೆಗಳಲ್ಲಿ ಹೆಚ್ಚು ತೊಡಗದೆ, ಪ್ಯಾಲೆಸ್ತೇನಿ ಲೇಖಕರ ತಾತ್ವಿಕತೆ, ಸೆರೆವಾಸ, ಪುಸ್ತಕನಿಷೇಧ, ಹೋರಾಟ ಮತ್ತು ಬರೆಹದ ಕಷ್ಟಸುಖಗಳನ್ನು ದಾಖಲಿಸುತ್ತ ಹೋಗುವುದು. ಈ ಕಾರಣಕ್ಕಾಗಿ ಹೋರಾಟಗಳ ಚರಿತ್ರೆಯ ಭಿತ್ತಿಯಲ್ಲಿ ರೂಪುಗೊಂಡ ಪ್ಯಾಲಸ್ತೇನಿ ಸಾಹಿತ್ಯದ ಚರಿತ್ರೆಯೂ ಕಾವ್ಯಮೀಮಾಂಸೆಯೂ ಆಗಿಬಿಡುವುದು. 

ಈಚೆಗೆ ಒಂದು ಪುಸ್ತಕ ಓದಿದೆ. ಇದು ಏಶ್ಯಾ-ಆಫ್ರಿಕಾ ಖಂಡದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಹೆಸರಾಗಿರುವ ಲೇಖಕ ಮಾರ್ಸೆಲ್ಲೊ ಡಿ ಸಿಂಟಿಯೊ ಅವರ `ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’. ಭೂಮಂಡಲದ ಗಾಯವೆನಿಸಿರುವ ಪ್ಯಾಲಸ್ತೇನಿನ ಹೋರಾಟಗಳೊಂದಿಗೆ ಬೇರೆಬೇರೆ ಬಗೆಯಲ್ಲಿ ತೊಡಗಿಕೊಂಡಿರುವ ಲೇಖಕರನ್ನು ಕುರಿತ ಇದನ್ನು, ಆ ಲೇಖಕರ ಜತೆ ನಡೆಸಲಾದ ಮಾತುಕತೆಯಾಧರಿಸಿ ರಚಿಸಲಾಗಿದೆ. ಈ ಮಾತುಕತೆಗಳು ಹೋರಾಟದ ಗರ್ಭದಲ್ಲಿರುವ ಲೇಖಕರು ಉರಿವ ರಾಜಕೀಯ ವಿದ್ಯಮಾನವನ್ನು ರೂಪಕಗಳಲ್ಲಿ ಹಿಡಿಯುವ ಹಾಗೂ ರಾಜಕೀಯ ಪ್ರಜ್ಞೆಯುಳ್ಳ ದಾರ್ಶನಿಕರಾಗುವ ಪರಿಯನ್ನು ಒಳಗೊಂಡಿವೆ. ಮಾತುಕತೆಗಳ ಜತೆ, ಅವರ ಕವಿತೆಗಳ ಉಲ್ಲೇಖವನ್ನೂ ವಿಶ್ಲೇಷಣೆಯನ್ನೂ ಕೃತಿ ಒಳಗೊಂಡಿದೆ.

ಇಂಗ್ಲೆಂಡು, ತನ್ನ ವಶದಲ್ಲಿದ್ದ ಪ್ಯಾಲೆಸ್ತೇನನ್ನು ವಿಭಜಿಸಿ ಇಸ್ರೇಲ್ ದೇಶವನ್ನು ಸೃಷ್ಟಿಸಿದ ಬಳಿಕ (1948), ಅಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಭಿತ್ತಿಯಲ್ಲಿ ಪ್ಯಾಲಸ್ತೇನೀ ಸಾಹಿತ್ಯವು ರೂಪುಗೊಂಡಿತು. ಲೋಕದ ಕಣ್ಣಲ್ಲಿ ಉಗ್ರಗಾಮಿಗಳಾಗಿ ಬಿಂಬಿತವಾಗಿರುವ, ಆದರೆ ತಮ್ಮ ಪೂರ್ವಜರಿಂದ ಬಂದ ಜಮೀನು ಮನೆ ತೋಟ ಗ್ರಂಥಭಂಡಾರಗಳನ್ನು ಕಳೆದುಕೊಂಡು, ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಜನರ ವೈಚಾರಿಕ ಪ್ರತಿನಿಧಿಗಳಂತಿರುವ ಈ ಲೇಖಕರ ದುಮ್ಮಾನಗಳನ್ನು ಈ ಕೃತಿ, ಪದರ ಪದರವಾಗಿ ತೆರೆಯುತ್ತಾ ಹೋಗುತ್ತದೆ. ಜನ ತಮ್ಮದೇ ತಾಯ್ನೆಲದಲ್ಲಿ ಅನಾಥರಂತೆ ಬದುಕುವ, ನಿತ್ಯವೂ ಅಪಮಾನ ಹಿಂಸೆ ಸಾವು ಪುಸ್ತಕನಿಷೇಧ ಸೆರೆವಾಸ ದೇಶಭ್ರಷ್ಟತೆ ಹಾಗೂ ಭೂಗತ ಜೀವನಗಳನ್ನು ಎದುರಿಸುವ ಸಂಘರ್ಷಮಯ ಪ್ರದೇಶದಲ್ಲಿ, ಸಾಹಿತ್ಯದಂತಹ ಕಲೆಯೊಂದು ಹೇಗೆ ರೂಪುಗೊಳ್ಳುತ್ತದೆ ಎಂಬುದಕ್ಕೆ, ಈ ಕೃತಿಯ ದಾಖಲೆ ಮಾತುಕತೆ ವಿಶ್ಲೇಷಣೆಗಳು ಸಾಕ್ಷಿಯಾಗಿವೆ.

ಇವನ್ನು ಓದುತ್ತಿದ್ದರೆ ಸಾಹಿತ್ಯಕ ತಾತ್ವಿಕ ರಾಜಕೀಯ ತತ್ವಾನುಭವಗಳ ಕೆಂಡಗಳು ತುಂಬಿದ ಕೊಂಡದಲ್ಲಿ ಹಾಯುತ್ತಿರುವಂತಹ ಅನುಭವವಾಗುತ್ತದೆ. ಕೆಲವು ಲೇಖಕರ ಅನುಭವಗಳು ಮೈಜುಂ ಅನಿಸುವಂತಿವೆ. ಒಬ್ಬ ಲೇಖಕ ತಾನು ಸಿಗರೇಟನ್ನು ಪ್ಯಾಕುಮಾಡುವ ತೆಳುವಾದ ಹಾಳೆಗಳ ಮೇಲೆ ಬರೆದ ಕಾದಂಬರಿಯನ್ನು ಬಿಡುಗಡೆಯಾಗುವ ಕೈದಿಗಳ ಗುದಭಾಗದಲ್ಲಿ ಅಡಗಿಸಿ ಹೊರಜಗತ್ತಿಗೆ ಕಳಿಸುತ್ತಾನೆ. ಮತ್ತೊಬ್ಬನಿಗೆ ಅಮೆರಿಕಕ್ಕೆ ಹೋದಾಗ, ನಡುವೆ ರೈಲನ್ನು ನಿಲ್ಲಿಸಿ ತಪಾಸಣೆಗೆ ಮಾಡದೆ ಪಯಣಿಸುವ ಅನುಭವ ಹೊಸತೆನಿಸುತ್ತದೆ. ಇದು ನಿತ್ಯವೂ ಚಳುವಳಿ ನಡೆಸುತ್ತಿರುವ ಪ್ಯಾಲೆಸ್ತೇನಿಯರು ಬದುಕಿನ ಎಷ್ಟೆಲ್ಲ ಸಣ್ಣಪುಟ್ಟ ಸಂತೋಷ ಮತ್ತು ಸ್ವಾತಂತ್ರ್ಯಗಳನ್ನು ಕಳೆದುಕೊಂಡಿರುವರು ಎಂಬುದನ್ನು ಮನವರಿಕೆ ಮಾಡುತ್ತದೆ.

ಕೃತಿಯ ವಿಶೇಷವೆಂದರೆ, ಇದು ಇಸ್ರೇಲ್-ಪ್ಯಾಲೆಸ್ತೇನ್ ನಡುವಣ ರಾಜಕೀಯ ವಿವಾದದ ಚಾರಿತ್ರಿಕ ವಿವರಣೆಗಳಲ್ಲಿ ಹೆಚ್ಚು ತೊಡಗದೆ, ಪ್ಯಾಲೆಸ್ತೇನಿ ಲೇಖಕರ ತಾತ್ವಿಕತೆ, ಸೆರೆವಾಸ, ಪುಸ್ತಕನಿಷೇಧ, ಹೋರಾಟ ಮತ್ತು ಬರೆಹದ ಕಷ್ಟಸುಖಗಳನ್ನು ದಾಖಲಿಸುತ್ತ ಹೋಗುವುದು. ಈ ಕಾರಣಕ್ಕಾಗಿ ಹೋರಾಟಗಳ ಚರಿತ್ರೆಯ ಭಿತ್ತಿಯಲ್ಲಿ ರೂಪುಗೊಂಡ ಪ್ಯಾಲಸ್ತೇನಿ ಸಾಹಿತ್ಯದ ಚರಿತ್ರೆಯೂ ಕಾವ್ಯಮೀಮಾಂಸೆಯೂ ಆಗಿಬಿಡುವುದು. ಇಲ್ಲಿರುವ ಪ್ಯಾಲೆಸ್ತೇನಿ ರಾಷ್ಟ್ರಕವಿ ಎನಿಸಿಕೊಂಡ ಮಹಮೂದ್ ದರ್ವಿಶ್ ಅವರನ್ನು ಕುರಿತ ಅಧ್ಯಾಯವು ಬಹಳ ಮಹತ್ವದ್ದಾಗಿದೆ. ಏಕಕಾಲಕ್ಕೆ ಇಸ್ರೇಲಿ ವಸಾಹತುವಾದದ ಜತೆ ಮಾತ್ರವಲ್ಲದೆ, ಪ್ಯಾಲೆಸ್ತೇನಿ ಸಮಾಜದಲ್ಲಿರುವ ಸಂಪ್ರದಾಯಸ್ಥ ದೃಷ್ಟಿಕೋನಗಳ ವಿರುದ್ಧವೂ ಸೆಣಸಾಟ ಮಾಡಬೇಕಾದ ಲೇಖಕಿಯರ ಅನುಭವ ಮತ್ತು ಚಿಂತನೆಗಳಂತೂ ಮತ್ತೂ ವಿಶಿಷ್ಟವಾಗಿವೆ.

ಇದನ್ನೂ ಓದಿ: ಭಾನುವಾರ (ಅ.29) ಸಮುದಾಯದ “ರಂಗಚಿಂತನ”ಪುಸ್ತಕ ಬಿಡುಗಡೆ

ಸಿಂಟಿಯೊ, ಈ ಕೃತಿ ರಚನೆಗಾಗಿ ಮಾಡಿರುವ ಪ್ರಯಾಣ, ಭೇಟಿಯಾದ ವ್ಯಕ್ತಿಗಳು, ಓದಿರುವ ಕೃತಿಗಳು, ಸೋಜಿಗ ಬರಿಸುತ್ತವೆ. ಅವರು ಪ್ಯಾಲಸ್ತೇನಿಯರ ಹೋರಾಟ ಮತ್ತು ಸಾಹಿತ್ಯಗಳ ಬಗ್ಗೆ ಸಹಾನುಭೂತಿ ಉಳ್ಳವರು. ಆದರೆ ಪ್ಯಾಲೆಸ್ತೇನಿ ಹೋರಾಟಗಳಲ್ಲಿರುವ ಅತಿರೇಕವಾದಗಳ ಬಗ್ಗೆ ಭಿನ್ನಮತವುಳ್ಳವರು ಕೂಡ. ಹೀಗಾಗಿ ಕೃತಿಯು ಪ್ಯಾಲೆಸ್ತೇನ್ ಹೋರಾಟ ಸಮಾಜ ಹಾಗೂ ಸಾಹಿತ್ಯಗಳ ಮೇಲೆ ವಿಮರ್ಶಾತ್ಮಕ ನೋಟಗಳನ್ನೂ ಒಳಗೊಂಡಿದೆ. ಇಂಗ್ಲೀಶ್ ಹೀಬ್ರೂ ಅರಬಿ ಭಾಷೆಗಳಲ್ಲಿ ಸೃಷ್ಟಿಯಾಗುತ್ತಿರುವ ಪ್ಯಾಲೆಸ್ತೇನಿ ಸಾಹಿತ್ಯವು, ವಸ್ತು ಮತ್ತು ಧೋರಣೆಯಲ್ಲಿ ಏಕರೂಪಿಯಾಗಿಲ್ಲ. ಅದು ಕೇವಲ ಹೋರಾಟಗಳ ರಾಜಕೀಯಕ್ಕೆ ತನ್ನನ್ನು ತೆತ್ತುಕೊಂಡಿಲ್ಲ. ಜನರ ಸಾಂಪ್ರದಾಯಿಕ ಆಲೋಚನಕ್ರಮ ಮತ್ತು ಕೆಲವು ಸಂಘಟನೆಗಳ ರಾಜಕೀಯ ದೃಷ್ಟಿಕೋನಗಳನ್ನು ಒಪ್ಪಲಾಗದ ಲೇಖಕರ ಧೀಮಂತ ಭಿನ್ನಮತಗಳನ್ನೂ ಒಳಗೊಂಡಿದೆ. ಜಿಯೋನಿಸ್ಟರಲ್ಲದ ಯಹೂದಿ ಸಾಮಾನ್ಯರ ಜತೆಗಿನ ಪ್ರೇಮ ಸ್ನೇಹ ಸಂಬಂಧಗಳ ಮಾನವೀಯ ಸೆಲೆಗಳನ್ನು ಸಹ ದಾಖಲಿಸುತ್ತದೆ ಎಂಬ ಆಯಾಮಗಳನ್ನು ಕೃತಿ ಶ್ರದ್ಧೆಯಿಂದ ಕಾಣಿಸುತ್ತದೆ.

ಕೆಲವು ವರ್ಷಗಳ ಹಿಂದೆ ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ಗಳಿಗೆ ಪ್ರವಾಸ ಹೋಗಿದ್ದ ನನಗೆ, ಪ್ಯಾಲೆಸ್ತೇನಿ ಲೇಖಕರನ್ನು ಭೇಟಿಮಾಡುವ ಆಸೆಯಿತ್ತು. ಸಾಹಿತ್ಯ ಮತ್ತು ರಾಜಕೀಯದ ಚರ್ಚೆ ಮಾಡುವುದಕ್ಕೆಂದೇ ಇರುವ ಕಾಫಿಕ್ಲಬ್ಬುಗಳನ್ನು ಸಹ ಬೆತ್ಲೆಹೆಂನಲ್ಲಿ ನೋಡಿದ್ದೆ. ಆದರೆ ಎಲ್ಲಿಯೂ ಯಾರ ಜತೆಯೂ ಮಾತುಕತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಪುಸ್ತಕವು ನನ್ನ ತಿರುಗಾಟದಲ್ಲಾದ ಕೊರತೆಯನ್ನು ತುಂಬಿಕೊಟ್ಟಿತು. ಅದಕ್ಕಾಗಿ ವೈಯಕ್ತಿಕವಾಗಿ ಆಕರ್ಷ ಅವರಿಗೆ ಕೃತಜ್ಞತೆಗಳು.

ಹಿಂದೆ ತೇಜಸ್ವಿ ನಿರಂಜನ ಅವರು ಪ್ಯಾಲೆಸ್ತೇನಿ ಕವಿತೆಗಳನ್ನು ಅನುವಾದಿಸಿದ್ದರು. ಬಳಿಕ ಲಕ್ಷ್ಮೀಪತಿ ಕೋಲಾರ ಪ್ಯಾಲೆಸ್ತೇನಿಯರ ಹೋರಾಟ ಕುರಿತು ನಾಟಕ ರಚಿಸಿದರು. ಈ ಸಾಲಿನಲ್ಲಿ ಯುವ ಲೇಖಕ ಆರ್.ಕೆ. ಆಕರ್ಷ ಅವರ ಈ ಕೃತಿ ಪ್ರಕಟವಾಗಿದೆ. ಹೊಸ ತಲೆಮಾರಿನ ತರುಣ ತರುಣಿಯರಲ್ಲಿ ಮತೀಯ ರಾಜಕಾರಣಕ್ಕೆ ಒಲಿದವರು: ಯಾವುದೇ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ನಿರಾಕರಿಸುತ್ತ ಮಾರುಕಟ್ಟೆ ಸಂಸ್ಕೃತಿಯು ಹುಟ್ಟುಹಾಕಿರುವ ಭೋಗವಾದವನ್ನೇ ನಂಬಿದವರು ಸಾಕಷ್ಟು ಜನರಿದ್ದಾರೆ. ಆದರೆ ಇಂಜಿನಿಯರಿಂಗ್ ಪದವೀಧರರಾದ ಆಕರ್ಷ ಅವರಂತೆ ಕೆಲವರಾದರೂ ನಾಡಿನ ಮತ್ತು ಲೋಕದ ನೋವುಗಳಿಗೆ ಮಿಡಿಯುವವರು ಕಡಿಮೆ ಇದ್ದಾರೆ. ಈ ಕೃತಿಯನ್ನು ಅನುವಾದಕ್ಕಾಗಿ ಆರಿಸಿಕೊಂಡಿರುವುದೇ, ಅವರ ವಿಶಿಷ್ಟ ಲೋಕದೃಷ್ಟಿಯ ಪ್ರತೀಕವಾಗಿದೆ. ತಾಯಿ ಎಂ.ಆರ್. ಕಮಲ ಕನ್ನಡಿಗರಿಗೆ ಅಮೆರಿಕದ ಆಫ್ರಿಕನರ ಹೋರಾಟಗಳ ಕಥನಗಳನ್ನು ಪರಿಚಯಿಸಿದ್ದರು; ಮಗ, ಜಗತ್ತಿನ ಇನ್ನೊಂದು ಭೂಭಾಗದ ಹೋರಾಟದ ಕಥನವನ್ನು ತರ್ಜುಮೆ‌ಮಾಡಿ ಕೊಟ್ಟಿದ್ದಾರೆ.

ಈ ಕೃತಿಯಲ್ಲಿ ಬರುವ ಅನೇಕ ಘಟನೆಗಳಿಗೆ ಕೊನೆಟಿಪ್ಪಣಿಗಳ ಅಗತ್ಯವಿತ್ತು. ರಾಜಕೀಯ ಚಿಂತನೆಗಳನ್ನು ಅನುವಾದಿಸುವಲ್ಲಿ ಕೆಲವು ಕಡೆ ಕನ್ನಡವು ಮತ್ತಷ್ಟು ಪಳಗಬೇಕಿತ್ತು ಎಂದು ಅನಿಸುತ್ತದೆ. ಈ ಸಣ್ಣ ಕೊರತೆ ಬಿಟ್ಟರೆ ಇದೊಂದು ಒಳ್ಳೆಯ ಪುಸ್ತಕ. ಇದನ್ನು ಓದಿದ ಬಳಿಕ, ಕನ್ನಡದಲ್ಲೂ ಇಂತಹದೊಂದು ಪುಸ್ತಕ ಬಂದರೆ ಹೇಗಿರುತ್ತದೆ ಎಂಬ ಕಲ್ಪನೆಯಂತೂ ಬಂದು ಹೋಗುತ್ತದೆ.

ವಿಡಿಯೋ ನೋಡಿ: ವಿಷವಟ್ಟಿ ಸುಡುವಲ್ಲಿ:”ಆರ್‌ಎಸ್‌ಎಸ್‌ ಸಿದ್ದಾಂತ ಪಠ್ಯದಲ್ಲಿ” ಹೇಗೆ ಸೇರಿಕೊಳ್ಳುತ್ತದೆ ಎಂಬುದನ್ನು ತೆರೆದಿಡುವ ಪುಸ್ತಕ

Donate Janashakthi Media

Leave a Reply

Your email address will not be published. Required fields are marked *