ಬಾಗಲಕೋಟೆ : ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕೆಲಸ ಕಳೆದುಕೊಂಡ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಹನಮಂತ ಚಿಚಖಂಡಿ (30) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ರನ್ನ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ 400ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಂದಿದ್ದಾರೆ. 250 ಕೋಟಿಗೂ ಅಧಿಕ ಸಾಲದ ಹೊರೆ ಕಾರ್ಖಾನೆ ಮೇಲಿದೆ. ಕಾರ್ಖಾನೆಯನ್ನೇ ನಂಬಿದ್ದ ರೈತರು ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆ ಹೊರಿಸಿದ್ದ ಸಾಲದಿಂದ ಒಬ್ಬ ಕಾರ್ಮಿಕ ಮೃತನಾಗಿದ್ದಾನೆ.
ಆತ್ಮಹತ್ಯೆಗೆ ಕಾರಣವೇನು : ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಮಿಕನ ಹೆಸರಿನಲ್ಲಿ ಆಡಳಿತ ಮಂಡಳಿ 8 ಲಕ್ಷ ರೂಪಾಯಿ ಸಾಲ ತೆಗೆದಿದೆ. ಇದೇ ರೀತಿ ಕಾರ್ಖಾನೆ ಆಡಳಿತ ಮಂಡಳಿ ರೈತರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್ನಿಂದ 60 ಕೋಟಿ ರೂಪಾಯಿ ಸಾಲ ಎತ್ತಿದೆ. ಎರಡು ವರ್ಷಗಳಿಂದ ಉದ್ಯೋಗ ಇಲ್ಲದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹನಮಂತ ಚಿಚಖಂಡಿ, ತನ್ನದಲ್ಲದ ಸಾಲಕ್ಕೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ಖಾನೆ ಪುನಾರಂಭ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಮತ್ತು ಕಾರ್ಮಿಕರು ಕಳೆದ ಎರಡು ತಿಂಗಳಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೋರಾಟ ಆರಂಭವಾಗಿ ತಿಂಗಳುಗಳೇ ಕಳೆದರೂ ಯಾವುದೇ ಜನಪ್ರತಿನಿಧಿಗಳು ಶುದ್ಧ ಮನಸ್ಸಿನಿಂದ ಕಾರ್ಖಾನೆ ಕಾರ್ಮಿಕರ ಮತ್ತು ರೈತರ ಹಿತ ಕಾಪಾಡಲು ಮುಂದೆ ಬರುತ್ತಿಲ್ಲ. ಬದಲಿಗೆ ರಾಜಕೀಯ ಲಾಭ ನಷ್ಟದ ಲೇಕ್ಕಾಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇನ್ನೂ ಕಾರ್ಖಾನೆಬೀ ಸ್ಥಿತಿಗೆ ಬರಲು ಹಾಗೂ ಭ್ರಷ್ಟಾಚಾರ ನಡೆಯಲು ಸಚಿವ ಗೋಂವಿದ್ ಕಾರಜೋಳ್ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :ಜೈ ಭೀಮ್ ಹಿರೋ ಸೂರ್ಯಗೆ ಲೀಗಲ್ ನೋಟಿಸ್: ವಿಸ್ಟ್ಯಾಂಡ್ ವಿತ್ ಸೂರ್ಯ ಎಂದ ಜಾಲತಾಣಿಗರು
ತನಿಖೆಗೆ ಕೋರ್ಟ್ ಆದೇಶ : ರನ್ನ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ 12 ಕೋಟಿ ರೂಪಾಯಿ ಸಾಲ ಪಡೆದು ಹಣ ದುರ್ಬಳಕೆ ಮಾಡುತ್ತಿರು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಸೇರಿ ಕಾರ್ಖಾನೆ ಆಡಳಿತ ಮಂಡಳಿಯ 22 ಜನರ ವಿರುದ್ಧ ತನಿಖೆಗೆ ಬಾಗಲಕೋಟೆ ಸಿಜೆಎಮ್ ನ್ಯಾಯಾಲಯ ನವೆಂಬರ್ 12 ರಂದು ಆದೇಶ ಹೊರಡಿಸಿದೆ.
ರನ್ನ ಸಕ್ಕರೆ ಕಾರ್ಖಾನೆ ಗೋದಾಮು ಹಾಗೂ ಹ್ಯಾಶ್ ಯಾರ್ಡ್ ಘಟಕ ನಿರ್ಮಾಣ ಹೆಸರಲ್ಲಿ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿಂದ 12 ಕೋಟಿ ಸಾಲ ಪಡೆದು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದಡಿ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೇರಿದಂತೆ 22 ಜನರ ವಿರುದ್ಧ ನವೆಂಬರ್ 9ರಂದು ತನಿಖೆಗೆ ಆದೇಶ ನೀಡಿದೆ. ರಾಮಣ್ಣ ತಳೇವಾಡ ಹಾಗೂ ಆಡಳಿತ ಮಂಡಳಿ ಎಸಗಿದ್ದು ಶಿಕ್ಷಾರ್ಹ ಅಪರಾಧ. ಸೆಕ್ಷನ್ 405, 406, 409, 415, 417, 420ರಡಿ ಅಪರಾಧ ಪ್ರಕರಣದ ಶಿಸ್ತುಬದ್ಧ ತನಿಖೆ ನಡೆಸಲು ಬಾಗಲಕೋಟೆಯ ನವನಗರ ಠಾಣೆಯ ಸಿಪಿಐಗೆ ಕೋರ್ಟ್ ಆದೇಶ ನೀಡಿದೆ.
ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದೆ. 12 ಕೋಟಿ ರೂ. ಸಾಲ ಪಡೆದು ದುರ್ಬಳಕೆ ಆರೋಪ ಸಂಬಂಧ ಜಿಲ್ಲಾ ಸಿಜೆಎಮ್ ಕೋರ್ಟ್ನಲ್ಲಿ 2021ರ ಅಕ್ಟೋಬರ್ 7ರಂದು ಖಾಸಗಿ ದೂರು ದಾಖಲಾಗಿತ್ತು. ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶಿವಪ್ಪ ಮಿರ್ಜಿ ಕೇಸ್ ದಾಖಲಿಸಿದ್ದರು. ಈ ಸಂಬಂಧ ಈಗ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ.
ಹೀಗಿರುವಾಗ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ರಾಮಣ್ಣ ತಳೆವಾಡ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.