ರಂಗಾಯಣ ಉಳಿಸಿ – ಅಡ್ಡಂಡ ಕಾರ್ಯಪ್ಪ ವಜಾಗೊಳಿಸಿ – ರಂಗಾಸಕ್ತರ ಪ್ರತಿಭಟನೆ

ಮೈಸೂರು : ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರನ್ನು ವಜಾಗೊಳಿಸಲು ಆಗ್ರಹಿಸಿ ರಂಗಾಯಣ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ರಂಗಯಣದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರ ಅಡ್ಡಂಡ ಕಾರ್ಯಪ್ಪ ಅವರನ್ನು ವಜಾಗೊಳಿಸಬೇಕು ಇಲ್ಲವೇ ಅವರೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಬಹೂರೂಪಿ ನಾಟಕೋತ್ಸವಕ್ಕೆ ಪರ್ಯಾಯ ಉತ್ಸವವನ್ನು ನಡೆಸಲಾಗುವುದು ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ತಿಳಿಸಿದರು.

ಪ್ರತಿಭಟನೆ ಉದ್ದೇಶಿಸಿ ಜನಪರ ಗಾಯಕ ಜನಾರ್ದನ (ಜನ್ನಿ) ಮಾತನಾಡಿ, ಮೈಸೂರಿನ ರಂಗಪ್ರಿಯರಾಗಲಿ, ಕರ್ನಾಟಕದ ರಂಗಾಸಕ್ತರಾಗಲಿ, ರಂಗಾಯಣವನ್ನು ಒಂದು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿ ದಶಕಗಳೇ ಕಳೆದಿವೆ. ರಂಗಾಯಣವನ್ನು ಕಟ್ಟಿಬೆಳಸಿದ ಈವರೆಗಿನ ರಂಗಕಲೆಯ ಅಧ್ಯಾಪಕರಾಗಲಿ, ರಂಗಾಯಣದ ನಿರ್ದೇಶಕರಾಗಲಿ, ರಂಗಾಸಕ್ತರಾಗಲಿ ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ, ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ ‘ಬಹುರೂಪಿ’ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ.

ಇದು ಒಬ್ಬರ ಸಾಧನೆಯಲ್ಲ; ರಂಗಾಯಣದ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕಲಾವಿದರು, ಕಲಾರಸಿಕರು ಎಲ್ಲ ಸೇರಿದ ಸಾಮೂಹಿಕ ಪ್ರಯತ್ನದ ಫಲ. ಹಾಗೆಯೇ ಈ ಬಹುರೂಪಿ ಉತ್ಸವಕ್ಕೆ ಸರಕಾರ, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲವನ್ನೂ ಒದಗಿಸುತ್ತ ಬಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲು ಅವಕಾಶವೇ ಇಲ್ಲದಂತೆ ಈ ಹಬ್ಬ ಎರಡು ದಶಕಗಳ ಕಾಲ ನಡೆದುಕೊಂಡು ಬಂದಿದೆ. ಈಗ ಅಡ್ಡಂಡ ಕಾರ್ಯಪ್ಪ ಅದನ್ನು ನಾಶ ಮಾಡುತ್ತಿದ್ದರೆ ಎಂದು ಜನ್ನಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ ಪ.ಮಲ್ಲೇಶ್, ಲಕ್ಷ್ಮೀನಾರಾಯಣ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ರಂಗಕರ್ಮಿ ಎಸ್.ಆರ್.ರಮೇಶ್, ಮೈಮ್ ರಮೇಶ್ ಸೇರಿದಂತೆ ಸಂಘಟನೆಗಳು ಮುಖಂಡರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *