ಬೆಂಗಳೂರು: ರಂಗಭೂಮಿ ಹಾಗೂ ಚಲನಚಿತ್ರ ನಟ ಆರ್.ಎಸ್.ರಾಜಾರಾಂ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 83 ವಯಸ್ಸಾಗಿತ್ತು.
ಕಿರುತೆರೆ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ ರಾಜಾರಾಂ ಅವರು ರಂಗಭೂಮಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ರಂಗಭೂಮಿಯಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡೇ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮ ಸಂಘಟಿತ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
ಜುಲೈ 10, 1938ರಲ್ಲಿ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ ಜನಿಸಿದರು. ಅವರ ತಂದೆ ಜಿ.ಎಸ್. ರಘುನಾಥರಾವ್ ಮತ್ತು ತಾಯಿ ಶಾರದಾಬಾಯಿ.
ಮಲ್ಲೇಶ್ವರದಲ್ಲಿ ‘ರಸಿಕ ರಂಜನಿ ಕಲಾವಿದರು’ ತಂಡವನ್ನು ಸ್ಥಾಪಿಸಿ ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್, ಕೆ.ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ನಟಿಸಿದ್ದಾರೆ. ‘ಹಣ ಹದ್ದು’, ‘ಮಗು ಮದ್ವೆ’, ‘ಪಂಚಭೂತ’, ‘ಹೋಂರೂಲು’, ‘ಅವರೇ ಇವರು- ಇವರೇ ಅವರು’ ಸೇರಿದಂತೆ ಇನ್ನೂ ಮಹತ್ವದ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನು ಓದಿ: ಡಾ. ಗುಂಡ್ಮಿ ಭಾಸ್ಕರ ಮಯ್ಯರ ಕ್ಲಾಸು ಇನ್ನಿಲ್ಲ!
ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಳಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆಯೂ ಅವರು ನಿರಂತರ ಒಡನಾಟ ಹೊಂದಿದ್ದರು. 1964ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ ‘ಸಚಿವಾಲಯ ಸಾಂಸ್ಕೃತಿಕ ಸಂಘ’ ಸ್ಥಾಪಿಸಿದರು. ವಾರ್ತಾ ಮತ್ತು ಪ್ರಚಾರ ಇಲಾಖೆ ಹಮ್ಮಿಕೊಳ್ಳುತ್ತಿದ್ದ ಸಂಗೀತ ಮತ್ತು ನಾಟಕ ವಿಭಾಗವು ಹಮ್ಮಿಕೊಳ್ಳುತ್ತಿದ್ದ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
1972ರಿಂದ ‘ನಟರಂಗ’ ಮತ್ತು 1983ರಿಂದ ‘ವೇದಿಕೆ’ಯ ರಂಗ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದ ಆರ್ ಎಸ್ ರಾಜಾರಾಂ ಅವರು ಸಿ.ಆರ್. ಸಿಂಹ ಅವರ ನಿರ್ದೇಶನದ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಶ್ರೀನಿವಾಸ್ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್. ಲೋಕನಾಥ್, ಆರ್. ನಾಗೇಶ್, ಪ್ರಕಾಶ್ ಬೆಳವಾಡಿ ಮುಂತಾದವರ ನಿರ್ದೇಶನದಲ್ಲಿ ‘ಮಂಡೋದರಿ’, ‘ವಿಗಡವಿಕ್ರಮರಾಯ’, ‘ಎಚ್ಚಮನಾಯಕ’, ‘ಟಿಪ್ಪುಸುಲ್ತಾನ್’, ‘ಕಿತ್ತೂರು ಚೆನ್ನಮ್ಮ’, ‘ರಕ್ತಾಕ್ಷಿ’, ‘ಸದಾರಮೆ’, ‘ಕಾಕನ ಕೋಟೆ’, ‘ತುಘಲಕ್’, ‘ಮೃಚ್ಛಕಟಿಕ’, ‘ಸಂಕ್ರಾಂತಿ’, ‘ಅಗ್ನಿ ಮತ್ತು ಮಳೆ’ ಮುಂತಾದ ಅತ್ಯಂತ ಪ್ರಮುಖ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ರಂಗಭೂಮಿ ಸೇರಿದಂತೆ ಹಲವಾರು ಧಾರವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಆರ್ ಎಸ್ ರಾಜಾರಾಂ ಅವರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.