ಉಜ್ಜಯಿನಿ: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಜೋಡಿಯ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರದ ನಡುವೆ ಸದ್ಯ ಮಧ್ಯ ಪ್ರದೇಶ ರಾಜ್ಯದಲ್ಲಿರುವ ಇಲ್ಲಿನ ಸುಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಬಂದ ಸಂದರ್ಭದಲ್ಲಿ ದೇವಸ್ಥಾನ ಪ್ರವೇಶಿಸದಂತೆ ಭಜರಂಗ ದಳದ ಕಾರ್ಯಕರ್ತರು ತಡೆವೊಡ್ಡಿದ್ದರಿಂದಾಗಿ ವಾಪಸ್ಸಾಗಿರುವ ಘಟನೆ ನಡೆದಿದೆ.
ದಂಪತಿಗಳು ಸಾಂಪ್ರದಾಯಿಕ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಬಂದಿದ್ದು, ದೇವಸ್ಥಾನದ ಶಿಷ್ಟಾಚಾರಗಳನ್ನೂ ಪಾಲಿಸಿದ್ದಾರೆ. ತಮಗೆ ಮತ್ತು ಸಿನಿಮಾಗೆ ಒಳ್ಳೆದಾಗಲಿ ಎಂದು ಪ್ರಾರ್ಥಿಸಲು ಬಂದ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಹಾಗೂ ನಿರ್ದೇಶಕ ಅಯಾನ್ ಮುಖರ್ಜಿ ಅವರನ್ನು ಭಜರಂಗ ದಳದ ಕಾರ್ಯಕರ್ತರು ತಡೆದಿರುವುದು ರಣಬೀರ್ ಕಪೂರ್ ಹಲವು ದಿನಗಳ ಹಿಂದೆ ನೀಡಿದ ಹೇಳಿಕೆಯೇ ಕಾರಣವಾಗಿದೆ. ಅವರು ಎಂದೋ ಒಮ್ಮೆ ಹೇಳಿದ ಸಣ್ಣ ವಿಚಾರವನ್ನು ಭಜರಂಗದಳದ ಕಾರ್ಯಕರ್ತರು ದೊಡ್ಡದು ಮಾಡುತ್ತಿದ್ದಾರೆ.
ಅರೆಕ್ಷಣದಲ್ಲಿ ಎದುರಾದ ಬೆಳವಣಿಗೆಯಿಂದ ಗಲಿಬಿಲಿಗೊಂಡ ರಣಬೀರ್ ಮತ್ತು ಆಲಿಯಾ ಭಟ್, ಅದೆಷ್ಟೇ ಸಮಾಧಾನ ಹೇಳಿದರೂ ಕೇಳದ ಕಾರಣದಿಂದಾಗಿ ದೇವಸ್ಥಾನ ಪ್ರವೇಶಿಸದೆ ಹೊರಗೆ ಉಳಿದರು. ಕೇವಲ ನಿರ್ದೇಶಕ ಅಯಾನ್ ಮುಖರ್ಜಿ ಒಬ್ಬರೇ ದೇವಸ್ಥಾನದ ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆದರು.
ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಮಾಂಸಹಾರದ ಬಗ್ಗೆ ಮಾತನಾಡುತ್ತಾ, ತಮ್ಮದು ಮಾಂಸದೂಟ ಮಾಡುವ ಕುಟುಂಬ. ಅದರಲ್ಲೂ ನಾನಾ ರೀತಿಯ ಮಾಂಸದಡಿಗೆ ತಮ್ಮ ಮನೆಯಲ್ಲಿ ತಯಾರಾಗುತ್ತದೆ. ನನಗೆ ದನದ ಮಾಂಸವೆಂದರೆ ತುಂಬಾ ಇಷ್ಟ ಎಂದು ಹೇಳಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಇದೀಗ ಭಜರಂಗದಳದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ದೇವಸ್ಥಾನ ಪ್ರವೇಶಿಸದಂತೆ ತಡೆ ಹಿಡಿದಿರುವ ಘಟನೆ ನಡೆದಿದೆ.
ಬಜರಂಗ ದಳದ ಕಾರ್ಯಕರ್ತ ಅಂಕಿತ್ ಚೌಬೇ ‘ಕೆಲವು ದಿನಗಳ ಹಿಂದೆ ರಣಬೀರ್ ಕಪೂರ್ ಅವರು ಮಾಂಸಾಹಾರದ ಬಗ್ಗೆ ಮಾತನಾಡುತ್ತ ತಮಗೆ ಚಿಕನ್, ಮಟನ್ ಹಾಗೂ ಗೋಮಾಂಸ ಇಷ್ಟ ಎಂದು ಹೇಳಿದ್ದರು. ಹಾಗಾಗಿ ಅವರು ಮಹಾಕಾಳೇಶ್ವರ ದೇವರನ್ನು ಆರಾಧಿಸಲು ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ.
ಇನ್ನೂ ಬಿಡುಗಡೆಯಾಗದಿರುವ ಬಾಲಿವುಡ್ನ ‘ಬ್ರಹಾಸ್ತ್ರ’ ಸಿನಿಮಾದ ಟ್ರೇಲರ್ ನೋಡಿದ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಸಹ ಭಾರೀ ಸದ್ದು ಮಾಡಿತ್ತು. ವಿರೋಧಿಗಳ ಪ್ರಕಾರ ದೇವಸ್ಥಾನದ ಒಳಗೆ ಶೂ ಧರಿಸಿ ಹೀರೋ ಪ್ರವೇಶ ಮಾಡಿರುವ ದೃಶ್ಯ ಟ್ರೇಲರ್ನಲ್ಲಿ ಕಾಣಿಸಿತ್ತು. ಅದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಅದಕ್ಕೆ ನಿರ್ದೇಶಕ ಅಯಾನ್ ಮುಖರ್ಜಿ ಸಮಜಾಯಿಸಿ ನೀಡಿದ್ದರು.
‘ಬ್ರಹಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲೂ ಈ ಸಿನಿಮಾ ಮೂಡಿಬಂದಿದೆ. ಹಿಂದಿ ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಅಮಿತಾಭ್ ಬಚ್ಚನ್, ನಾಗಾರ್ಜುನ ಮುಂತಾದ ಪ್ರಮುಖ ಕಲಾವಿದರು ಇದರಲ್ಲಿ ನಟಿಸಿದ್ದಾರೆ.