ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣವನ್ನು ವಹಿಸಿಕೊಂಡಿರುವ ರಾಷ್ಟ್ರೀಯ ತನಿಖಾ ದಳ ತನ್ನ ಶೋಧಾಚರಣೆ ಮುಂದುವರೆಸಿದ್ದು, ಶಂಕಿತ ವ್ಯಕ್ತಿಗಾಗಿ ತುಮಕೂರು, ಬಳ್ಳಾರಿಯಲ್ಲಿ ಶೋಧ ಕಾರ್ಯ ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ. ರಾಮೇಶ್ವರಂ
ಬೆಂಗಳೂರಿನ ಸುಜಾತ ಸರ್ಕಲ್‌ನಲ್ಲಿ ಶಂಕಿತ ವ್ಯಕ್ತಿ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದು, ನಂತರ ತುಮಕೂರಿನಿಂದ ಬಳ್ಳಾರಿಗೆ ಬಸ್‌ನಲ್ಲಿ ಬಂದು ನಂತರ ಮಂತ್ರಾಲಯ- ಗೋಕರ್ಣ ಬಸ್ ಹತ್ತಿ ಬೇರೆ ಪ್ರದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾ ದಳ ಬಳ್ಳಾರಿ ಮತ್ತು ತುಮಕೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಶೋಧ ನಡೆಸಿ, ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.
ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್‌ಐಎ ತಂಡ ಮಾಹಿತಿ ಪಡೆದಿದ್ದು ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಹಕಾರ ನೀಡಿದ್ದಾರೆ. ಬೆಂಗಳೂರಿಂದ ಎರಡು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆಂದು ವರದಿಗಳು ತಿಳಿಸಿವೆ. ರಾಮೇಶ್ವರಂ
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ | ಆರೋಪಿಯ ಮಾಹಿತಿ ನೀಡಿದವರಿಗೆ ₹10 ಲಕ್ಷ ನಗದು ಬಹುಮಾನ: ಎನ್‌ಐಎ
ಶಂಕಿತ ಉಗ್ರ ಬೆಂಗಳೂರಿನಿಂದ ತುಮಕೂರು, ಅಲ್ಲಿಂದ ಬಳ್ಳಾರಿ ಹಾಗೂ ಭಟ್ಕಳಕ್ಕೆ ಪ್ರಯಾಣ ಮಾಡಿರುವ ಸುಳಿವು ಸಿಕ್ಕಿರುವುದಾಗಿ ತಿಳಿದು ಬಂದಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಗುರುವಾರ ಮಾತನಾಡಿದ ಅವರು, ”ಬಾಂಬ್ ಬ್ಲಾಸ್ಟ್ ಮಾಡಿರುವ ಆರೋಪಿಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಆತ ಯಾವ ಯಾವ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದಾನೆ ಎಂಬುದನ್ನು ಪತ್ತೆ ಮಾಡಬೇಕಿದೆ. ಅದಕ್ಕಾಗಿ ಪೊಲೀಸರು ಏಳೆಂಟು ತಂಡಗಳನ್ನಾಗಿ ಮಾಡಿಕೊಂಡು ಹುಡುಕಾಟ ನಡೆಸಲಾಗುತ್ತಿದೆ. ಸಿಸಿಬಿ ಜೊತೆಗೆ ಈಗ ಎನ್‌ಐಎ ಸಹ ಕಾರ್ಯಾಚರಣೆ ನಡೆಸುತ್ತಿದೆ. ಆರೋಪಿಯು ಬಸ್‌ಗಳಲ್ಲಿ ಪ್ರಯಾಣಿಸಿರುವ ಮಾಹಿತಿಯನ್ನು ಆಧರಿಸಿ ತುಮಕೂರಿನಲ್ಲೂ ಹುಡುಕಾಟ ನಡೆದಿದೆ” ಎಂದರು.
ರಾಮೇಶ್ವರಂ ಕೆಫೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬೀದರನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸ್ಫೋಟ ಪ್ರಕರಣದ ಆರೋಪಿ ಬಂಧನವಾಗಿಲ್ಲದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ. ಎನ್. ಎಸ್. ಜಿ ಹಾಗೂ ಸಿಸಿಬಿ ಎರಡೂ ಹುಡುಕಾಟ ಕೈಗೊಂಡಿದೆ ಎಂದರು. ಸುಳಿವುಗಳು ದೊರೆತಿದ್ದು, ತನಿಖೆ ಜಾರಿಯಲ್ಲಿದೆ ಎಂದರು. ರಾಮೇಶ್ವರಂ
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಎನ್‌ಐಎ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದು, ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ. ಇಲ್ಲಿಯವರೆಗೆ ಆರೋಪಿ ಚಹರೆ ಕಾಣುವ ಫೋಟೋ ಇರಲಿಲ್ಲ. ಎನ್‌ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಕಾಣಿಸುತ್ತದೆ.
ವಿಡಿಯೋ ನೋಡಿ : ಚುನಾವಣೆ ಬರ್ತಿದ್ದಂತೆ ಬಾಂಬ್ ಸ್ಪೋಟಗೊಳ್ಳೋದು ಯಾಕೆ? ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಏನು?