ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ರಾಮೇಶ್ವರಂ
ಕಪ್ಪು ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೋಟೆಲಿಗೆ ಬಂದಿದ್ದ ವ್ಯಕ್ತಿಯೊಬ್ಬ ತಿಂಡಿ ತಿಂದ ಬಳಿಕ ಹ್ಯಾಂಡ್‌ವಾಶ್ ಮಾಡುವ ಜಾಗದಲ್ಲಿ ಬ್ಯಾಗ್ ಇಟ್ಟು ಹೋಗಿದ್ದ. ಸಿಸಿಟಿವಿಯಲ್ಲಿ ಆರೋಪಿಯ ಪ್ರತಿಯೊಂದು ಚಲನವಲನ ಸೆರೆಯಾಗಿದೆ. ಈ ದೃಶ್ಯವನ್ನು ಆಧಾರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಹಿಂದೆಯೂ ಬ್ಯಾಗ್ ಇಟ್ಟಿದ್ದರು!
ಸ್ಫೋಟದ ಕುರಿತು ಮಾಧ್ಯಮ ಪ್ರತಿನಿಗಳಿಗೆ ಪ್ರತಿಕ್ರಿಯಿಸಿರುವ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ, ‘‘ಕೆಫೆಯ ಕೈ ತೊಳೆಯುವ ಸ್ಥಳದಲ್ಲಿ ಮೊದಲಿಗೆ ಸ್ಫೋಟ ಸಂಭವಿಸಿದೆ. ಕಿಚನ್ ಹೊರಗಡೆ ಪ್ಲೇಟ್‌ಗಳನ್ನಿಡುವ ಸ್ಥಳದಲ್ಲಿಎರಡನೇ ಬಾರಿಗೆ ಸ್ಫೋಟ ಸಂಭವಿಸಿದೆ. ಕೆಫೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿಲ್ಲಅಥವಾ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿಲ್ಲ. ಹೊರಗಿನಿಂದ ತಂದಿಟ್ಟ ಬ್ಯಾಗ್ ಸ್ಫೋಟವಾಗಿದೆ. ಹೊರಗಡೆಯಿಂದ ಹೋಟೆಲ್‌ಗೆ ತಂದಿಟ್ಟಿದ್ದ ಬ್ಯಾಗ್‌ನಲ್ಲಿದ್ದ ವಸ್ತುಗಳು ಸ್ಫೋಟಗೊಂಡಿವೆ. 10 ಸೆಕೆಂಡ್ ಅಂತರದಲ್ಲಿಎರಡು ಬಾರಿ ಸ್ಫೋಟವಾಗಿದೆ’’ ಎಂದು ತಿಳಿಸಿದ್ದಾರೆ.
‘‘ಅಪರಿಚಿತ ವ್ಯಕ್ತಿಗಳು ಈ ಹಿಂದೆ ಎರಡು ಬಾರಿ ಹೋಟೆಲ್‌ಗೆ ಅನುಮಾನಾಸ್ಪದ ಬ್ಯಾಗ್ ತಂದಿಟ್ಟು ಹೋಗಿದ್ದರು. ಒಂದು ಬ್ಯಾಗ್ ತೆಗೆದು ನೋಡಿದಾಗ ಮಡಕೆ ಕುಡಿಕೆ ಪತ್ತೆಯಾಗಿದ್ದವು. ಮತ್ತೊಂದು ಬ್ಯಾಗ್ ಅನ್ನು ನಿರ್ಜನ ಪ್ರದೇಶದಲ್ಲಿರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಪೊಲೀಸರಿಗೆ ಒಪ್ಪಿಸಲಾದ ಆ ಬ್ಯಾಗ್‌ನಲ್ಲಿಏನಿತ್ತು ಎಂಬುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಸಹ ಕೊಟ್ಟಿದ್ದೆವು. ಶುಕ್ರವಾರ ಸಹ ವಾಶ್‌ಬೇಸಿನ್ ಬಳಿ ಬ್ಯಾಗ್ ತಂದಿಟ್ಟು ಹೋಗಿದ್ದರು. ಆ ಜಾಗದಲ್ಲೇ ಸ್ಫೋಟ ಸಂಭವಿಸಿದೆ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ : 5 ಮಂದಿಗೆ ಗಾಯ
ಸಿಎಂ ಭೇಟಿ : ಬ್ರೂಕ್‌ಫೀಲ್ಡ್ ಮತ್ತು ವೈದೇಹಿ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಗಾಯಾಳುಗಳನ್ನು ಮಾತಾಡಿಸಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರತಿಪಕ್ಷ ಬಿಜೆಪಿಗೆ ತಿಳಿಸಿದ್ದಾರೆ.
ಸ್ಫೋಟದಲ್ಲಿ ಯಾವುದೇ ಸಂಘಟನೆ ಭಾಗಿಯಾಗಿದೆಯೇ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೆಳಿದ್ದಾರೆ. “ಮಂಗಳೂರಿನ ಘಟನೆಗೂ ಇದಕ್ಕೂ ಲಿಂಕ್ ಇರುವಂತೆ ಕಾಣುತ್ತಿದೆ. ಎರಡೂ ಕಡೆ ಬಳಸಿದ ಸ್ಫೋಟಕ ಸಾಮಾಗ್ರಿಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸರು ಕೂಡ ಬಂದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.