ಬೆಂಗಳೂರು: ʻಒಂದು ತಿಂಗಳಲ್ಲಿ ಮಂತ್ರಿ ಮಾಡಿ, ಇಲ್ಲಾ ಸರ್ಕಾರ ಕಳ್ಕೊಳ್ಳಿ ʼಎಂದು ಸರ್ಕಾರಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡೆಡ್‌ಲೈನ್ ಕೊಟ್ಟಿದ್ದು, ಮಂತ್ರಿ ಮಾಡದಿದ್ರೆ ಈ ಸರ್ಕಾರ ಉರುಳಿಸ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕ್ರಮಗಳಿಂದ, ಹಾಗೂ ಹಾನಗಲ್, ಸಿಂದಗಿ ಉಪಚುನಾವಣೆಯಿಂದ ದೂರ ಉಳಿದಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡಿ ಎಂದು ಹೈಕಮಾಂಡ್‌ಗೆ ಜಾರಕಿಹೊಳಿ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಆದರೆ ಯಾರು ಗಮನ ನೀಡುತ್ತಿಲ್ಲ. ಹಾಗಾಗಿ ಸರಕಾರವನ್ನು ಉರಳಿಸುವ ಯೋಜನೆಯನ್ನು ರಮೇಶ್ ಜಾರಿಕಿಹೊಳಿ ಮಾಡಿಕೊಂಡಿದ್ದಾರಂತೆ.
“ಬಿಜೆಪಿ ಸರ್ಕಾರ ಬಂದಿದ್ದೇ ನನ್ನಿಂದ, ನನಗೇ ಮಂತ್ರಿಗಿರಿ ಇಲ್ಲ, ನನ್ನ ತ್ಯಾಗದಿಂದ ಬಿಜೆಪಿಯವ್ರು ಅಧಿಕಾರ ಅನುಭವಿಸುತ್ತಿದ್ದಾರೆ. ನನ್ನನ್ನು ಮಂತ್ರಿ ಮಾಡದಿದ್ರೆ ಈ ಸರ್ಕಾರ ಉಳಿಸೋದಿಲ್ಲ” ಎಂದು ರಮೇಶ್ ಜಾರಕಿಹೊಳಿ ಆರ್‌ಎಸ್‌ಎಸ್ ಮುಖಂಡರ ಮೂಲಕ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ ಎಂಬ ಬಿಸಿ ಬಿಸಿ ವಿಚಾರ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಸಿಎಂ ಬಸವರಾಜ್ ಬೊಮ್ಮಾಯಿವರಿಗೆ ಹೊಸ ಟೆನ್ಷನ್ ಆರಂಭವಾಗಿದೆ. ಮುಂದಿನ ವಾರ ಇದೇ ವಿಚಾರವಾಗಿ ಸಿಎಂ ದೆಹಲಿಗೆ ಹೋಗಲಿದ್ದು ಸಂಪುಟ ವಿಸ್ತರಣೆ ವಿಚಾರ ಚರ್ಚೆಗೆ ಬರಲಿದೆ. ನಾಲ್ಕು ಖಾಲಿ ಸ್ಥಾನಗಳಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಸ್ಥಾನ ಸಿಗುವುದು ಖಚಿತ ಎಂದು ರಮೇಶ್ ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಆರ್‌ಎಸ್‌ಎಸ್ ಜೊತೆ ಸಾಲು ಸಾಲು ಸಭೆಗಳು : ಅಥಣಿಯಲ್ಲಿ ಜಾರಕಿಹೊಳಿ, ಆರ್‌ಎಸ್‌ಎಸ್ ಉತ್ತರ ಪ್ರಾಂತ್ಯ ಪ್ರಮುಖರಾಗಿರುವ ಅರವಿಂದ ರಾವ್ ದೇಶಪಾಂಡೆ ಅವರನ್ನು ಭೇಟಿಯಾಗಿದ್ದಾರೆ. ಸುದೀರ್ಘ ಮಾತುಕತೆ ಮೂಲಕ ನಡೆದ ಸಭೆಯಲ್ಲಿ ಹೈಕಮಾಂಡ್ ಜೊತೆ ಮಾತನಾಡುವುದಾಗಿ ಅರವಿಂದ್‌ರಾವ್ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವಾರವಷ್ಟೇ, ರಮೇಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿ ಬಿಜೆಪಿಯ ಪ್ರಮುಖ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಎರಡು ದಿನಗಳಿಂದ ಸಿಎಂ ಬೊಮ್ಮಾಯಿವರ ನಿವಾಸಕ್ಕೆ ಭೇಟಿ ನೀಡುತ್ತಲೆ ಇದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ನಡೆ ಏನಾಗಬಹುದು ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಗರಿಗೆದರಿದೆ.