ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಮತ್ತೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನಾಯಕತ್ವದಲ್ಲಿ ನಡೆಯುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ. ಆದರೆ ನಮ್ಮ ಎನ್ ಡಿಎ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ ಒಳ್ಳೆಯ ಮನುಷ್ಯ. ಇಲ್ಲಿ ಅವರಿಗೆ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಗೆ ಹೋಗಿದ್ದಾರೆ. ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಗೊತ್ತಿಲ್ಲ ಎಂದರು. ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಚಾರದ ನೇತೃತ್ವವಹಿಸುವಂತೆ ಕೇಳಿದ್ದಾರೆ. ಆದರೆ ನನ್ನ ಬದಲಿಗೆ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಕೊಡುವಂತೆ ಕೇಳಿದ್ದೇನೆ ಎಂದರು.
ಡಿ ಕೆ ಶಿವಕುಮಾರ್ ಪಾರ್ಟ್ ಟೈಮ್ ನೀರಾವರಿ ಸಚಿವ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ. ಶಿವಕುಮಾರ್ ಬದಲಿಗೆ ಪೂರ್ಣ ಪ್ರಮಾಣದ ನೀರಾವರಿ ಸಚಿವರನ್ನು ಕೊಡಬೇಕು ಎಂದು ಆಗ್ರಹಿಸಿದರು.
ಬಿಎಸ್ ಯಡಿಯೂರಪ್ಪ ಸಿಎಂ ಆಗಲು ಯೋಗೇಶ್ವರ ಕಾರಣ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಹೇಳಿಕೆ ನೂರಕ್ಕೆ ನೂರು ಸತ್ಯ ಇದೆ. ಯೋಗೇಶ್ವರ ಹಾಗೂ ನಾನು, ಎನ್ ಆರ್ ಸಂತೋಷ ಮೂರು ಜನ ಪ್ರಂಟ್ ಲೈನ್ನಲ್ಲಿ ಇದ್ವಿ. ಸಮ್ಮಿಶ್ರ ಸರ್ಕಾರದಲ್ಲಿ ನಾನು, ಆರ್ ಶಂಕರ ಮಂತ್ರಿ ಆಗಿದ್ವಿ. ನಾವು ಅಂದು ಮಂತ್ರಿ ಇದ್ದಾಗ ಸಿದ್ದರಾಮಯ್ಯನವರ ಮನೆಗೆ ಹೋಗಿದ್ವಿ. ಅಂದೇ ಸಂಜೆ ಸರ್ಕಾರ ತೆಗೆಯಬೇಕು ಎಂದು ತೀರ್ಮಾನ ಮಾಡಿದ್ವಿ. ಅಂದೇ ಈ ಸರ್ಕಾರ ತೆಗೆಯಬೇಕು ಅಂತಾ ನಾನು ಆರ್ ಶಂಕರ್ ಮಾತಾಡಿದ್ದೇವು. ಆದರೆ ಈಗ ಕೆಲವೊಂದು ವಿಷಯಗಳನ್ನು ಈಗ ಬಹಿರಂಗ ಪಡಿಸಲ್ಲ. ಉಪ ಚುನಾವಣೆ ಪಕ್ಷಕ್ಕೆ ಮುಜುಗರ ಆಗೋದು ಬೇಡ ಎಂದು ಹೇಳಿದರು.