ಅತಿ ಹೆಚ್ಚು ಹಗರಣಗಳ ಸಚಿವ ಆರಗ ಜ್ಞಾನೇಂದ್ರ : ರಮೇಶ್‌ ಬಾಬು ಆರೋಪ

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಹಗರಣಗಳ ಸಚಿವರು ಯಾರಾದರೂ ಇದ್ದರೆ ಅದು ಗೃಹ ಸಚಿವ ಆರಗ ಜ್ಞಾನೇಂದ್ರ ಎಂದು ಮಾಜಿ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದು, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನ ಸಂಘ ಪರಿವಾರದಿಂದ ಬಂದಿದೆ ಎಂದು ಜನಸಂಘದ ಅಂದಿನ ನಾಯಕ ಗಣೇಶ್ ಭಟ್ ಅವರ ಹೆಸರನ್ನು ಗೃಹ ಸಚಿವರು ಪದೇ ಪದೆ ಉಲ್ಲೇಖ ಮಾಡ್ತಾರೆ. ಅವರು ಗೃಹ ಸಚಿವರಾದ ಮೊದಲ ದಿನದಿಂದ ಇಲ್ಲಿಯವರೆಗೆ ಒಂದಲ್ಲ ಒಂದು ಹಗರಣ ಮಾಡಿಕೊಂಡು ಬಂದಿದ್ದಾರೆ. ಪಿಎಸ್ಐ ಹಗರಣದಲ್ಲಿ ವಿದ್ಯಾ ಹಾಗರಗಿಗೆ ಗೃಹ ಸಚಿವರು ಪರೋಕ್ಷ ಬೆಂಬಲ ನೀಡಿದ್ದಾರೆ. ಆರಗ ಜ್ಞಾನೇಂದ್ರರಿಂದಾಗಿಯೇ ಪಿಎಸ್ಐ ಹಗರಣದಲ್ಲಿ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಅರೆಸ್ಟ್ ಆಗುವಂತಾಗಿದೆ ಎಂದು ಆರೋಪಿಸಿದರು.

 

 

ಇಡೀ ರಾಜಕಾರಣದಲ್ಲಿ ಸಜ್ಜನ ರಾಜಕಾರಣಿಗಳ ಪೈಕಿ ಕೆಲವೇ ಕೆಲವರಲ್ಲಿ ಕಿಮ್ಮನೆ ರತ್ನಾಕರ್ ಒಬ್ಬರು. ಕಿಮ್ಮನೆ ರತ್ನಾಕರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಆರಗ ಜ್ಞಾನೇಂದ್ರ ವ್ಯವಸ್ಥಿತವಾಗಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಆರಗ ಜ್ಞಾನೇಂದ್ರ ಅವರು ನಾಲ್ಕು ಬಾರಿ ಸೋತಿದ್ದರು. ಜನಸಂಘದಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಸಜ್ಜನ ರಾಜಕಾರಣಿಗಳಲ್ಲಿ ಕಿಮ್ಮನೆ ರತ್ನಾಕರ್ ಅವರು ಒಬ್ಬರು. ಅವರ ವಿರುದ್ಧ ಪ್ರಾಮಾಣಿಕವಾಗಿ ಗೆಲ್ಲುವುದಕ್ಕೆ ಆಗುತ್ತಿಲ್ಲ.

ಮಂಗಳೂರಿನಲ್ಲಿ ಒಂದು ಕಡ್ಡಟವನ್ನು ಮುಂದಿಟ್ಟುಕೊಂಡು ರತ್ನಾಕರ್​ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತ ಕೆಲಸ ಮಾಡುತ್ತಿದ್ದಾರೆ. ಅವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು. ಆರಗ ಜ್ಞಾನೇಂದ್ರ ಅವರ ಮಗನ ಕೈಯಲ್ಲಿ ಕ್ಷೇತ್ರವನ್ನು ಕೊಟ್ಟಿದ್ದಾರೆ. ಅವರ ಮೂಲಕ ಮರಳು ದಂಧೆ, ರಿಯಲ್ ಎಸ್ಟೇಟ್ ದಂಧೆ ರಾಜಾರೋಶವಾಗಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಅದೇ ರೀತಿ ಕಿಮ್ಮನೆ ರತ್ನಾಕರ್ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ, ತಿರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *