ಮಂಗಳೂರು : ಮಂಗಳೂರು, ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಸ್ಥಾನ ಕೊಡಿಸುವುದಾಗಿ ನಂಬಿಸಿ 17.5 ಲಕ್ಷ ಪಡೆದ ಆರೋಪದಲ್ಲಿ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ನನ್ನು ಬಂಧಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕರಾಗಿರುವ ಡಾ.ಜೈಶಂಕರ್ ಅವರು ಮೋಸ ಹೋದ ಪ್ರಾಧ್ಯಾಪಕರು. ಮಂಗಳೂರು ವಿವಿಯ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಾಕರಾಗಿರುವ ವಿವೇಕ್ ಆಚಾರ್ಯ ಮೂಲಕ ಪರಿಚಯಿಸಿಕೊಂಡಿದ್ದರು. ಪ್ರಾಧ್ಯಾಪಕರಿಗೆ ಹಣ ಪಡೆದು ವಂಚಿಸಿರುವ ಆರೋಪಿ ಪ್ರಸಾದ್ ಅತ್ತಾವರ (40 ವರ್ಷ) ಈಗ ಜೈಲುಪಾಲಾಗಿದ್ದಾನೆ.
ಇದನ್ನು ಓದಿ : ಲಾಕ್ಡೌನ್ ಇಲ್ಲ, ನೈಟ್ ಕರ್ಫ್ಯೂ ಇಲ್ಲ, ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ
ಆರೋಪಿಯ ವಿರುದ್ಧ ಸೆಕ್ಷನ್ 406, ಸೆಕ್ಷನ್ 417, ಸೆಕ್ಷನ್ 506, ಸೆಕ್ಷನ್ 34ರ ಕಲಂನಡಿ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪೊಲೀಸರ ಮನವಿಗೆ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
‘ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮತ್ತು ಪ್ರಮುಖರ ಜೊತೆ ತಮಗೆ ನಂಟು ಇದೆ. ರೂ.30 ಲಕ್ಷ ಕೊಟ್ಟರೆ ಕುಲಪತಿ ಮಾಡಿಸುತ್ತೇನೆ’ ಎಂದು ನಂಬಿಸಿದ್ದ ಪ್ರಸಾದ್ ಅತ್ತಾವರ, ಗಣ್ಯ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡ ಫೋಟೊಗಳನ್ನು ತೋರಿಸಿದ್ದರು. ವಿವೇಕ ಆಚಾರ್ಯ ಅವರ ಮೂಲಕ ಪ್ರಾಧ್ಯಾಪಕರಿಂದ ರೂ.17.5 ಲಕ್ಷ ಪಡೆದುಕೊಂಡಿದ್ದರು. ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದಿದ್ದರು.
ಪ್ರಾಧ್ಯಾಪಕ ಜೈಶಂಕರ್ ಕುಲಪತಿ ಆಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಅಲ್ಲದೆ ಅದಕ್ಕಾಗಿ ತೀವ್ರ ಲಾಬಿ ನಡೆಸಿದ್ದರು ಎನ್ನಲಾಗಿದೆ.‘ವರ್ಷ ಕಳೆದರೂ ಯಾವುದೇ ಕೆಲಸ ಆಗಿರಲಿಲ್ಲ. ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆಯೇ ಪ್ರಾಧ್ಯಾಪಕರು ಹಣ ವಾಪಸ್ ಕೇಳಿದ್ದರು. ಆಗ ಪ್ರಸಾದ್ ಅತ್ತಾವರ ಬೈದು, ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿವೇಕ್ ಆಚಾರ್ಯ ಹೇಳಿದ್ದಾರೆ.
ಇದನ್ನು ಓದಿ : ಉದ್ಯೋಗ ಆಹುತಿ ತಡೆಯಿರಿ
ಮಂಗಳೂರಿಗೆ ಮುಖ್ಯಮಂತ್ರಿಗಳು ಬರುತ್ತಿದ್ದಾಗ ಹತ್ತಿರದ ನಂಟು ಇರುವಂತೆ ಪೋಸ್ ಕೊಡುತ್ತಿದ್ದ. ಪ್ರಸಾದ್ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಬಂದರು, ಕದ್ರಿ ಮತ್ತು ಕಂಕನಾಡಿ ಠಾಣೆಗಳಲ್ಲಿ ಹಲವು ಕೇಸುಗಳನ್ನು ಎದುರಿಸುತ್ತಿದ್ದಾನೆ.
ವಿವಿಧ ಹಿಂದೂ ಸಂಘಟನೆಗಳ ನಂಟು ಹೊಂದಿರುವ ಪ್ರಸಾದ್ ಅತ್ತಾವರ, ಶ್ರೀರಾಮ ಸೇನೆ ಜಿಲ್ಲಾಘಟಕದ ಅಧ್ಯಕ್ಷನಾಗಿ, ರಾಜ್ಯ ಸಂಚಾಲಕನಾಗಿ ಕೆಲಸ ಮಾಡಿದ್ದರು. ಅಲ್ಲಿಂದ ಹೊರಬಂದು ರಾಮಸೇನೆಯನ್ನು ಆರಂಭಿಸಿದ. ಅದರ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷನೂ ತಾನೇ ಎಂದು ಹೇಳಿಕೊಂಡಿದ್ದಲ್ಲದೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಸಖ್ಯ ಬೆಳೆಸಿಕೊಂಡಿದ್ದ. 2016 ರಲ್ಲಿ ಬಿಜೆಪಿ ಸೇರಿದ್ದರು. 2009 ರಲ್ಲಿ ನಡೆದ ಅಮ್ನೇಷಿಯಾ ಪಬ್ ಮೇಲಿನ ದಾಳಿಯ ಪ್ರಮುಖ ಆರೋಪಿಯಾಗಿದ್ದರು. ಆದರೆ, ಕೋರ್ಟ್‌ನಲ್ಲಿ ಆರೋಪ ಸಾಬೀತಾಗಿರಲಿಲ್ಲ.
ಇದನ್ನು ಓದಿ : ವಿಮೆ ಉದ್ದಿಮೆಯ ಖಾಸಗೀಕರಣ ‘ವಿದೇಶೀ’ಕರಣ ಅವಿವೇಕದ ನಡೆ
‘ಪ್ರಸಾದ್ ಅತ್ತಾವರ ಹೆಸರು ಕಂಕನಾಡಿ ನಗರ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಇತರ ಠಾಣೆಗಳಲ್ಲೂ ದೂರುಗಳಿವೆ’ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಇದೇ ರೀತಿ ಹಲವರಿಂದ ಹಣ ಪಡೆದು ಮೋಸಗೈದಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಅದರ ಬಗ್ಗೆ ದೂರು ಬಂದಲ್ಲಿ ತನಿಖೆ ಮಾಡಲಾಗುವುದು ಎಂದು ಕಮಿಷನರ್ ತಿಳಿಸಿದರು.