ಬೆಂಗಳೂರು: ಈ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ತೆರಿಗೆ ವರಮಾನದಲ್ಲಿ 7,850.29 ಕೋಟಿ ರೂಪಾಯಿ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಅನುದಾನದ ರೂಪದಲ್ಲಿ 28,254.76 ಕೋಟಿ ರಾಜ್ಯಕ್ಕೆ ಲಭ್ಯವಾಗಬೇಕಾಗಿತ್ತು. ಆದರೆ, ಡಿಸೆಂಬರ್ ಅಂತ್ಯದವರೆಗೆ 19,737.88 ಕೋಟಿ ಬಂದಿದ್ದು, 8,507.88 ಕೋಟಿ ರೂಪಾಯಿ ಕೊರತೆಯಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ವರಮಾನ ಹಂಚಿಕೆಯಲ್ಲಿ 24,273.06 ಕೋಟಿ ಬರಬೇಕು, 16,422.77 ಕೋಟಿಯಷ್ಟೇ ಬಂದಿದೆ. ವಿವಿಧ ಯೋಜನೆಗಳಿಂದ ರಾಜ್ಯಕ್ಕೆ ನೀಡಬೇಕಿದ್ದ ಅನುದಾನಗಳಲ್ಲೂ ಕೊರತೆಯಾಗಿದೆ ಎಂದು ತಿಳಿಸಿದರು.
ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲು ಶೇ.4.71ರಷ್ಟು ಎಂಬುದಾಗಿ 14ನೇ ಹಣಕಾಸು ಆಯೋಗ ನಿಗದಿಪಡಿಸಿತ್ತು. ಆದರೆ 15ನೇ ಹಣಕಾಸು ಆಯೋಗ ರಾಜ್ಯದ ಪಾಲನ್ನು ಶೇ.3.64ಕ್ಕೆ ಇಳಿಸಿದೆ.
ಸರಕು ಮತ್ತು ಸೇವಾ ತೆರಿಗೆ ಪರಿಹಾರದಲ್ಲೂ ಕೊರತೆ ಉದ್ಭವಿಸಿದೆ, ಈ ವರ್ಷ 12,708 ಕೋಟಿ ರೂ. ಜಿಎಸ್ಟಿ ಪರಿಹಾರದ ರೂಪದಲ್ಲಿ ದೊರೆಯಬಹುದು ಎಂಬ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿತ್ತು. ಆದರೆ ಡಿಸೆಂಬರ್ ಅಂತ್ಯದವರೆಗೆ ಜಿಎಸ್ಟಿ ಪರಿಹಾರ ರೂಪದಲ್ಲಿ 6,897.97 ಕೋಟಿ ರೂ. ಮಾತ್ರ ನೀಡಲಾಗಿದೆ. ಜಿಎಸ್ಟಿ ಹಂಚಿಕೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ದೊರೆಯಬಹುದು, ಇದರಿಂದಾಗಿ ಕೇಂದ್ರದಿಂದ ಬರಬೇಕಾದ ವರಮಾನದ ಪಾಲಿನಲ್ಲಿ ಕೊರತೆ ಉಳಿಯುವ ಸಾಧ್ಯತೆ ಕಡಿಮೆಯಿದೆ
2020-2021ನೇ ಹಣಕಾಸು ವರ್ಷದಲ್ಲಿ ತೆರಿಗೆ ವರಮಾನ ಹಂಚಿಕೆಯ ಪಾಲಿನ ರೂಪದಲ್ಲಿ 28,591.23 ಕೋಟಿ ರಾಜ್ಯಕ್ಕೆ ಬರಬೇಕಿತ್ತು. ಆದರೆ 21,694.11 ಕೋಟಿ ರೂ. ಮಾತ್ರ ಲಭ್ಯವಾಗಿತ್ತು. ಕೊರೊನಾ ಸಂಕಷ್ಟದಲ್ಲಿ ಕೇಂದ್ರದ ತೆರಿಗೆ ಪಾಲಿನಲ್ಲೂ 6,897.12 ಕೋಟಿಯಷ್ಟು ಕೊರತೆ ಉಂಟಾಗಿತ್ತು.