ಕಲುಬುರುಗಿ: ರಾಜ್ಯದಲ್ಲಿ ಹಲವು ಪರೀಕ್ಷಾ ಅಕ್ರಮಗಳ ನಡುವೆ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಲೋಕೋಪಯೋಗಿ ಇಲಾಖೆ ಕಿರಿಯ ಇಂಜನಿಯರ್(ಜೆಇ) ಮತ್ತು ಸಹಾಯಕ ಇಂಜನಿಯರ್(ಎಇ) ನೇಮಕ ಪರೀಕ್ಷೆಯು 2021 ಡಿಸೆಂಬರ್ 14 ರಂದು ನಡೆದಿತ್ತು, ಹಾಗಾಗಿ ಈ ಪರೀಕ್ಷೆಯಲ್ಲೂ ಅಕ್ರಮವೆಸೆಗಿರುವುದು ಕಂಡುಬಂದಿದೆ.
ಈಗಾಗಲೇ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಹಗರಣದ ಬಗ್ಗೆ ಸಿಐಡಿ ತಂಡವು ತನಿಖೆ ಶುರುಮಾಡಿದ್ದು, ತನಿಖೆ ನಡೆದೆಂತಲ್ಲಾ ಹೊಸ ಹೊಸ ಹಗರಣಗಳು ಬೆಳಕಿಗೆ ಬರುತ್ತಿವೆ.
ಪಿಡಬ್ಲ್ಯುಡಿ ಇಲಾಖೆ ಜೆಇ-ಎಇ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿರುವ ಕೆಲವು ಮಾಹಿತಿಗಳು ಸಿಐಡಿ ತಂಡದ ಗಮನಕ್ಕೆ ಬಂದಿದ್ದು, ಈ ನೇಮಕಾತಿಯಲ್ಲೂ ಪಿಎಸ್ಐ ನೇಮಕಾತಿ ಹಗರಣದ “ಕಿಂಗ್ ಪಿನ್”ಗಳು ಎಂದೆನಿಸಿಕೊಂಡಿರುವ ನೀರಾವರಿ ಇಲಾಖೆ ಎ ಇ ಮಂಜುನಾಥ್ ಮೇಳಕುಂದಿ ಮತ್ತು ಆರ್ ಡಿ ಪಾಟೀಲ್, ನೇಮಕಾತಿ ಪರೀಕ್ಷೆಯಲ್ಲೂ ತಮ್ಮ ಕೈಚಳಕ ತೋರಿರುವುದು ಕಂಡುಬಂದಿದೆ. ಇದಕ್ಕೆ ಸಾಕ್ಷಿಯಾಗಿ ಎಇ ಮಂಜುನಾಥ್ ಅಕ್ರಮವೆಸಗಿದ್ದಾರೆಂದು ಎಂಬುದು ಬೆಂಗಳೂರಿನ ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಐಡಿ ತಂಡ ಹೇಳುತ್ತಿದೆ.
ಜೆಇ-ಎಇ ನೇಮಕ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದರು ಸರ್ಕಾರ ಸುಮ್ಮನಾಗಿತ್ತು ಎನ್ನಲಾಗಿದೆ. ಪರೀಕ್ಷೆ ಅಕ್ರಮವು ಬೆಂಗಳೂರಿನ ಸೇಂಟ್ ಜಾನ್ ಪ್ರೌಢಶಾಲೆ ಕೇಂದ್ರ ಸೇರಿ ಇನ್ನೂ ಹಲವು ಕಡೆ ಆರ್ ಡಿ ಪಾಟೀಲ್ ಮತ್ತು ಮಂಜುನಾಥ್ ಮೆಳಕುಂದಿ ಅವರ ತಂಡ ಪರೀಕ್ಷೆ ಶುರುವಾಗುವ ಕೆಲ ಸಮಯದ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ವ್ಯವಹಾರ ನಡೆಸಿದ್ದ ಅಭ್ಯಥಿಗಳಿಗೆ ಬ್ಲೂಟೂತ್ ನೀಡಿ ಉತ್ತರ ಹೇಳಿಸಿ ಪರೀಕ್ಷೆ ಬರೆಸುವ ಮೂಲಕ ಅಕ್ರಮ ನಡೆಸಿದ್ದಾರೆ.
ಪರೀಕ್ಷೆ ನಡೆಯುವ ವೇಳೆಯಲ್ಲಿ ಅದೇ ಪ್ರೌಢಶಾಲೆಯಲ್ಲಿ ಅಭ್ಯರ್ಥಿ ವೀರಣ್ಣ ಗೌಡ ಎಂಬಾತ ಬ್ಲೂಟೂತ್ ಕೆಲಸ ಮಾಡಿಲ್ಲ ಎಂದು ಅದನ್ನು ಆನ್ ಮಾಡಲು ಹೋಗಿ ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬದ್ದಿದ್ದು, ಈತನ ಜೊತೆ ಸೂಮು ಸಂಗಮೇಶ್ ಎಂಬುವರ ಮೇಲು ಅನ್ನಪೂರ್ಣೆಶ್ವರಿ ನಗರದ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಹಾಗಾಗಿ ಈ ಮೂವರ ಮೇಲೆ ಕೇಸ್ ದಾಖಲಿಸಿ ಬಂದಿಸಲಾಗಿತ್ತು.
ಆದರೆ ಎಇ ಮಂಜುನಾಥ್ ಮೇಳಕುಂದಿ ಮತ್ತು ಆರ್ ಡಿ ಪಾಟೀಲ್ ಅವರನ್ನು ಬಂಧಿಸಿಲ್ಲ. ಇವರಿಬ್ಬರ ಹೆಸರನ್ನು ಕೇವಲ ಚಾರ್ಜ್ ಶೀಟ್ ನಲ್ಲಿ ಮಾತ್ರ ದಾಖಲಿಸಲಾಗಿದೆ. ಹಾಗಾಗಿ ಇವರಿಬ್ಬರ ಮೇಲೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ತಿಳಿದು ಬಂದಿದೆ.