ಬೆಂಗಳೂರು: ರಾಜ್ಯದಲ್ಲಿ ಯಾರು ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು, ಅಶಾಂತಿ ಸೃಷ್ಟಿಸುವ ಮೂಲಕ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು, ಕೂಡಲೇ ಯುಎಪಿಎ ಅಡಿಯಲ್ಲಿ ಬಂಧನ ಮಾಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ಸಂಘ ಪರಿವಾರದ ವಿವಿಧ ಆಕ್ಟೋಪಸ್ ಇದ್ದ ಹಾಗೆ, ಇವರ ಕೈಯಲ್ಲಿ ಈ ಕೆಲಸ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡಲು ಯಾರು ಪ್ರಯತ್ನ ಮಾಡುತ್ತಿದ್ದಾರೋ ಅವರನ್ನು ಭಯೋತ್ಪಾದಕರು ಎಂದು ಯುಎಪಿಎ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಪಿಎಸ್ಐ ಅಕ್ರಮ ಸರ್ಕಾರವೇ ಒಪ್ಪಿಕೊಂಡಿದೆ; ಅದಕ್ಷ ಗೃಹ ಮಂತ್ರಿ ರಾಜೀನಾಮೆ ನೀಡಬೇಕು
ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೋರಾಟಕ್ಕೆ ಬೆಂಬಲ
ಸರ್ಕಾರದ ನಿರ್ಣಯ 1200 ಉಪನ್ಯಾಸಕರ ವರ್ಗಾವಣೆ ಅವೈಜ್ಞಾನಿಕವಾಗಿದೆ. ಸಚಿವರ ಗಮನಕ್ಕೆ ತರುವ ನಿಟ್ಟಿನಲ್ಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡ ನಡೆಸುತ್ತಿರುವ ಧರಣಿಗೆ ಬೆಂಬಲ ನೀಡಿದ್ದೇವೆ. ಏಪ್ರಿಲ್ ಮೇ ತಿಂಗಳಲ್ಲಿ ಕಾಲೇಜು ಪರೀಕ್ಷೆ, ಮೌಲ್ಯಮಾಪನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವೈಜ್ಞಾನಿಕ ವರ್ಗಾವಣೆ ಸರಿಯಲ್ಲ. ಗರ್ಭಿಣಿ ಮಹಿಳೆಯರು, ಅಂಗವಿಕಲರು ಇರುತ್ತಾರೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಲ್ಲಿಯೂ ದಂಧೆ ನಡೆಯುತ್ತಿದೆ ಎಂದು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಸರ್ಕಾರ ಕಮಿಷನ್ ದಂಧೆ ನಡೆಸುತ್ತಿರುವುದರಲ್ಲಿ ಕುಖ್ಯಾತಿ ಗಳಿಸಿದೆ. ಶಿಕ್ಷಕರ ವರ್ಗಾವಣೆ ಕಮಿಷನ್ ದಂಧೆ ಊಹಾಪೋಹಗಳು ಇವೆ. ವರ್ಗಾವಣೆ ನೀತಿಯನ್ನು ಸರ್ಕಾರ ಜಾರಿಗೊಳಿಸಬೇಕು. ಏಕಾಏಕಿ ವರ್ಗಾವಣೆಯಿಂದ ಶಿಕ್ಷಣಕ್ಕೆ ಅಡ್ಡಿ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ತೊಂದರೆ ಆಗುತ್ತದೆ.
ಮರಿತಿಬ್ಬೇಗೌಡರ ಧರಣಿ ಹಿನ್ನೆಲೆಯಲ್ಲಿ ಸಚಿವರು ಖುದ್ದಾಗಿ ಭೇಟಿ ನೀಡಿ ಮಾತನಾಡಬೇಕು. ಅಧಿಕಾರಿಗಳ ಮಾತು ಕೇಳಿಕೊಂಡು ವರ್ಗಾವಣೆ ಮಾಡಬಾರದು. ಸಚಿವರು ತಕ್ಷಣವೇ ವರ್ಗಾವಣೆ ಪ್ರಕ್ರಿಯೆ ರದ್ದು ಮಾಡಬೇಕೆಂದು ಬಿ ಕೆ ಹರಿಪ್ರಸಾದ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಸದಸ್ಯರಾದ ವೆಂಕಟೇಶ್, ಗೋವಿಂದ ರಾಜು, ಮೋಹನ್ ಕೊಂಡಜ್ಜಿ ಉಪಸ್ಥಿತರಿದ್ದರು.