ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಿದ್ದು, ಅವರ ಪಿಂಚಣಿ ಸೌಲಭ್ಯವನ್ನು ರದ್ದು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಿಂದ ಒಂಬತ್ತು ಮಾಸಿಕ ಪಿಂಚಣಿಗಳನ್ನು ನೀಡುತ್ತಿದೆ. ಆದರೆ ಅರ್ಹತೆ ಇಲ್ಲದೇ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ ಕುರಿತು ಇಲಾಖೆಗೆ ಮಾಹಿತಿ ಬಂದ ಕೂಡಲೇ ಅವರನ್ನು ಗುರುತಿಸಿ, ಸೌಲಭ್ಯ ರದ್ದು ಮಾಡಲಾಗಿದೆ. ಶ್ರೀಮಂತರು, ಉದ್ಯೋಗಿಗಳು ಸೇರಿದಂತೆ ಹಲವು ಮಂದಿ ಅಕ್ರಮವಾಗಿ ಸಾಮಾಜಿಕ ಪಿಂಚಣಿ ಪಡೆಯುತ್ತಿದ್ದರು. ಮೃತಪಟ್ಟವರ ಹೆಸರಿನಲ್ಲಿಯೂ ಹಲವು ವರ್ಷಗಳಿಂದ ಪಿಂಚಣಿ ಪಾವತಿ ಆಗುತ್ತಿರುವುದು ಪತ್ತೆಯಾಗಿದೆ. ಇಂತಹವುಗಳೆಲ್ಲವನ್ನೂ ಗುರುತಿಸಿ ಸೌಲಭ್ಯ ರದ್ದು ಮಾಡಲಾಗಿದೆ ಎಂದು ಹೇಳಿದರು.
2020-21ರಲ್ಲಿ ಸಾಮಾಜಿಕ ಪಿಂಚಣಿ ಯೋಜನೆಗಳ ಅಡಿಯಲ್ಲಿ 7,800 ಕೋಟಿ ರೂ ನೆರವನ್ನು ವಿತರಿಸಲಾಗಿತ್ತು. ಪ್ರಸಕ್ತ ವರ್ಷ 9,483.51 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಅನರ್ಹ ಫಲಾನುಭವಿಗಳ ರದ್ಧತಿಯಿಂದ ಸರ್ಕಾರದ ಬೊಕ್ಕಸಕ್ಕೆ ರೂ.430 ಕೋಟಿ ಉಳಿತಾಯವಾಗಲಿದೆ ಎಂದರು.
ಪಿಂಚಣಿ ಮಂಜೂರಾತಿಗೆ ‘ಹಲೋ ಕಂದಾಯ ಸಚಿವರೇ’ ಎಂಬ ಸಹಾಯವಾಣಿ ಆರಂಭಿಸಲಾಗುವುದು. ಮಧ್ಯವರ್ತಿಗಳ ಕಾಟವಿಲ್ಲದೆ, ಫಲಾನುಭವಿಗಳಿಗೆ ಅಲೆದಾಟ ಇಲ್ಲದೆ ಪಿಂಚಣಿ ಮಂಜೂರು ಮಾಡಲಾಗುವುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ಒಳಗೆ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಾಗುವುದು. ಇದು ದೇಶದಲ್ಲೇ ಮಾದರಿ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಸ್ವಯಂ ನಕ್ಷೆ: ಕಂದಾಯ ಇಲಾಖೆಯ ಮೂಲಕ ಜಮೀನುಗಳ ಪೋಡಿ, 11-ಇ ನಕ್ಷೆ ಮತ್ತು ಭೂ ಪರಿವರ್ತನೆ ನಕ್ಷೆಗಳನ್ನು ಸ್ವಯಂ ಜಮೀನು ಮಾಲೀಕರೇ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದ್ದು, ಅದರಂತೆ, ‘ಸ್ವಾವಲಂಬಿ’ ಸ್ವಯಂ ನಕ್ಷೆ ಯೋಜನೆ ಜಾರಿಗೆ ತರಲಾಗಿದೆ ಎಂದು ಆರ್ ಅಶೋಕ ಹೇಳಿದರು.
ಇಲಾಖೆಗೆ ಪ್ರತಿ ವರ್ಷ ಹತ್ತು ಲಕ್ಷ ಪೋಡಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ನಾಲ್ಕು ಲಕ್ಷ ಮಾತ್ರ ವಿಲೇವಾರಿ ಆಗುತ್ತಿದ್ದವು. ಈಗಲೂ ಆರು ಲಕ್ಷ ಅರ್ಜಿಗಳು ಬಾಕಿ ಇವೆ. ಸ್ವಾವಲಂಬಿ ಯೋಜನೆಯಿಂದ ಈ ಎಲ್ಲ ಅರ್ಜಿಗಳೂ ತ್ವರಿತವಾಗಿ ವಿಲೇವಾರಿ ಆಗಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಭೂ ದಾಖಲೆಗಳ ಆಯುಕ್ತ ಮುನೀಶ್ ಮೌದ್ಗಿಲ್, ಸಾಮಾಜಿಕ ಪಿಂಚಣಿ ಇಲಾಖೆ ನಿರ್ದೇಶಕ ಸತೀಶ್ ಉಪಸ್ಥಿತರಿದ್ದರು.