ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಎಂಬಾತನ ಕಗ್ಗೊಲೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ಖಂಡಿಸಿದೆ. ಯಾವುದೇ ಭಿನ್ನಾಭಿಪ್ರಾಯ, ವಿರೋಧಗಳೆನೇ ಇದ್ದರೂ, ಅದನ್ನು ಕೊಲೆಯಂತಹ ಗಂಭೀರ ಅಪರಾಧದ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸುವುದನ್ನು ಸಿಪಿಐ(ಎಂ) ಒಪ್ಪುವುದಿಲ್ಲ. ತಕ್ಷಣವೇ ಈ ಕೊಲೆಯ ಹಿಂದಿನ ಸಂಚನ್ನು ಭೇದಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಲು ಸಿಪಿಐ(ಎಂ) ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಶಿವಮೊಗ್ಗ ನಗರದಲ್ಲಿ ಉದ್ವಿಘ್ನ ವಾತಾವರಣವನ್ನು ಉಂಟು ಮಾಡಲಾಗಿದೆ. ಹಲವು ಅಂಗಡಿ ಮುಗ್ಗಟ್ಟುಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಲಾಗಿದೆ. ಕತ್ತಿ, ತಲವಾರ ಮತ್ತು ಮಚ್ಚುಗಳನ್ನಿಡಿದು ಬೆದರಿಸುವುದು ನಡೆದಿದೆ. ಶಾಸಕರು, ಅಧಿಕಾರಿಗಳು ಹಾಗೂ ಪೋಲೀಸರ ಸಮ್ಮುಖದಲ್ಲಿಯೇ ಈ ಧಾಳಿ ದಬ್ಬಾಳಿಕೆಗಳು ನಡೆದಿವೆ ಎನ್ನಲಾಗಿದೆ. ಈ ಆಸ್ತಿ- ಪಾಸ್ತಿಗಳಿಗೆ ಹಾನಿ ಮಾಡುವ, ಆಯುಧಗಳನ್ನಿಡಿದು ಬೆದರಿಸುವ ಕುಕೃತ್ಯವನ್ನು ಮತ್ತು ಜಿಲ್ಲಾಡಳಿತ ಹಾಗೂ ಕರ್ನಾಟಕ ಸರಕಾರಗಳು ಈ ಘಟನೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಮತ್ತೊಮ್ಮೆ ವಿಫಲವಾಗಿರುವುದನ್ನು ಸಿಪಿಐ(ಎಂ) ಖಂಡಿಸುತ್ತದೆ ಮತ್ತು ಒಟ್ಟು ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಗೃಹ ಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಕೊಲೆಗಡುಕರಿಂದ ಮತ್ತು ಆಸ್ತಿ ಪಾಸ್ತಿಗಳ ಮೇಲೆ ದಾಳಿ ಮಾಡುವ ಪುಂಡರಿಂದ ರಕ್ಷಣೆ ಇಲ್ಲವಾಗಿದೆ. ಈ ಘಟನೆಯು ಹಿಜಾಬ್- ಶಾಲು ವಿವಾದ ಹಾಗೂ ಕೆಂಪು ಕೋಟೆಯ ಮೇಲೆ ಕೇಸರಿ ದ್ವಜಾರೋಹಣದಂತಹ ಭಾವನಾತ್ಮಕ ವಿಷಯಗಳನ್ನು ಕೆದಕಿ ರಾಜ್ಯದಾದ್ಯಂತ ಸೌಹಾರ್ಧತೆಯನ್ನು ಕದಡುವ ವಿಷಯದ ಮುಂದುವರಿಕೆಯಾಗಿದೆ. ಸರಕಾರವೇ ಅಲ್ಪಸಂಖ್ಯಾತರ ಹಾಗೂ ದಲಿತರ ವಿರುದ್ಧದ ಕಾಯ್ದೆಗಳಿಗೆ ಕ್ರಮವಹಿಸುವ ಮೂಲಕ, ಸೌಹಾರ್ಧತೆ ಕದಡುವ ಮತ್ತು ದ್ವೇಷಕ್ಕೆ ಕುಮ್ಮಕ್ಕು ನೀಡುತ್ತದೆ. ಅದೇ ರೀತಿ, ಬಿಜೆಪಿಯ ಸಚಿವರು, ಶಾಸಕರುಗಳು ಆರ್.ಎಸ್.ಎಸ್.ಗೆ ಹತ್ತಿರವಾಗುವ ದುರುದ್ದೇಶದಿಂದ ಪ್ರಚೋಧನಾತ್ಮಕ ಹೇಳಿಕೆ ನೀಡುತ್ತಿದ್ದಾರೆ.
ಕೊಲೆಯಾದ ಯುವಕನ ಕುಟುಂಬಕ್ಕೆ ಹಾಗೂ ಆಸ್ತಿ ಮತ್ತು ವಾಹನಗಳ ಹಾನಿಗೆ ತಕ್ಷಣವೇ ಸರಕಾರ ಪರಿಹಾರವನ್ನು ಘೋಷಿಸಬೇಕು. ಆಸ್ತಿ ಹಾಗೂ ವಾಹನಗಳಿಗೆ ಹಾನಿ ಮಾಡಿದ ಮತ್ತು ಅಯುಧಗಳನ್ನಿಡಿದು ಪ್ರಚೋದನೆ ಮಾಡಿದ ಪುಂಡರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಹಾಗೂ ಸೌಹಾರ್ಧತೆಯನ್ನು ಪುನರ್‌ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಹರ್ಷನ ಕೊಲೆಯ ಸಂದರ್ಭದಲ್ಲಿ ಆತನ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಲು ಮಂತ್ರಿಗಳು ಮತ್ತು ಶಾಸಕರು ದೌಡಾಯಿಸಿರುವುದು ಸ್ವಾಗತಾರ್ಹವಾಗಿದೆ. ಆದರೇ, ಗದಗ ಜಿಲ್ಲೆಯ ನರಗುಂದದಲ್ಲಿ ಇತ್ತೀಚೆಗೆ ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ಯುವಕರ ಮೇಲೆ ದಾಳಿ ನಡೆಸಿದಾಗ ಸಮೀರ ಎಂಬ ಯುವಕ ಮರಣ ಹೊಂದಿದ್ದ, ಮತ್ತೊಬ್ಬ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಅದೇ ರೀತಿ, ವಿಜಯಪುರ ಜಿಲ್ಲೆಯ ಮುಸ್ಲಿಂ ಯುವಕನೋರ್ವ ಬೇರೊಂದು ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದನೆಂಬ ಕಾರಣಕ್ಕೆ ಯುವತಿಯ ಕುಟುಂಬದವರು ಯುವಕನ ತಾಯಿಯ ಸಮ್ಮುಖದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸದರಿ ಯುವಜನರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಇದುವರೆಗೂ ಯಾವುದೇ ಮಂತ್ರಿಗಳು ಹಾಗೂ ಶಾಸಕರು ಭೇಟಿ ನೀಡಿಲ್ಲ. ಇದು ಬಹಳ ಸ್ಪಷ್ಟವಾಗಿ ತಾರತಮ್ಯ ನೀತಿಯಾಗಿದೆ. ಈ ತಾರತಮ್ಯವನ್ನು ಸಿಪಿಐ(ಎಂ) ಬಲವಾಗಿ ಪ್ರತಿರೋಧಿಸುತ್ತದೆ. ಇಂತಹ ತಾರತಮ್ಯ ನೀತಿಯನ್ನು ಕೈ ಬಿಡಬೇಕು ಮತ್ತು ತಕ್ಷಣವೇ ಈ ಯುವಜನರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ಸಿಪಿಐ(ಎಂ) ಒತ್ತಾಯಿಸಿದೆ.
ಇದಕ್ಕೆಲ್ಲಾ, ರಾಜ್ಯ ಸರಕಾರ ಮತ್ತು ಮತಾಂಧ ಶಕ್ತಿಗಳೇ ಹೊಣೆಗಾರರಾಗಿವೆ. ಜನಾದೇಶವಿಲ್ಲದ ಆಪರೇಷನ್ ಕಮಲವೆಂಬ ಅನೈತಿಕ ಮಾರ್ಗ ಹಾಗೂ ಒಕ್ಕೂಟ ಸರಕಾರದ ಅಧಿಕಾರ ದುರ್ಬಳಕೆ ಮೂಲಕ ಬಲವಂತವಾಗಿ ಅಧಿಕಾರ ಮುನ್ನಡೆಸುವ ಈ ಸರಕಾರಕ್ಕೆ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಆದಾಗಲೂ ಭಂಡತನದಿಂದ ಮುಂದುವರೆಯುತ್ತದೆ. ಇವುಗಳೆಲ್ಲಾ, ರಾಜ್ಯದ ಜನತೆಯ ದುಃಖದಾಯಕ ಪರಿಸ್ಥಿತಿಯಿಂದ ಮತ್ತು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ರಾಜ್ಯ ಹಾಗೂ ದೇಶವನ್ನು ತೆರೆದುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ದ ಬೆಳೆಯುತ್ತಿರುವ ಜನತೆಯ ತೀವ್ರ ಅಸಮಾಧಾನವನ್ನು, ಬೇರೆಡೆ ಸೆಳೆದು ಕಂಪನಿಗಳ ರಕ್ಷಣೆಗೆ ಕ್ರಮವಹಿಸಲು ಮತ್ತು ದೇಶದ ಐದು ರಾಜ್ಯಗಳ ಚುನಾವಣೆಯಲ್ಲಿ ಇಂತಹ ಭಾವಾನಾತ್ಮಕ ವಿಷಯಗಳ ಮೂಲಕ ರಾಜಕೀಯ ಲಾಭ ಪಡೆಯುವ ಸಂಚನ್ನು ಆರ್.ಎಸ್.ಎಸ್. ಮತ್ತು ಬಿಜೆಪಿ ಹಾಗೂ ಮುಸ್ಲಿಂ ಮತಾಂಧ ಶಕ್ತಿಗಳು ಹೊಂದಿವೆ ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು. ಈ ಸಂಚನ್ನು ಸೋಲಿಸಲು ರಾಜ್ಯದ ಜನತೆ ಸೌಹಾರ್ಧತೆಯನ್ನು ಬಲಪಡಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.