ಬೆಂಗಳೂರು: ರಾಜ್ಯದ ಎಂಟಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳು ಅಂದರೆ, ನವೆಂಬರ್ 09ರವರೆಗೆ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ, ಅಡಕೆ ಸೇರಿದಂತೆ ಇತರೇ ಬೆಳೆಗಳಿಗೆ ಅಪಾರ ನಷ್ಟವುಂಟು ಮಾಡಿರುವ ಮಳೆ, ಎರಡು ದಿನಗಳಿಂದ ಬಿಡುವು ಕೊಟ್ಟು, ನೆನ್ನೆಯಿಂದ ಮತ್ತೆ ಮಳೆ ಆರಂಭವಾಗಿದೆ. ಇದರಿಂದಾಗಿ ರೈತರಲ್ಲಿ ಆತಂಕ ಉಂಟು ಮಾಡಿದೆ.
ಬೆಂಗಳೂರು ನಗರದಲ್ಲಿ ಇಂದು ಹಿಂಗಾರು ಮಳೆಯ ಪ್ರಭಾವ ಬೀರಲಿದೆ. ಈ ವೇಳೆ ಅನೇಕ ಪ್ರದೇಶಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದಿನ ಎರಡು ದಿನ ಮಳೆ ಪ್ರಭಾವ ಇದ್ದರೂ ಸಹಿತ, ಕೆಲವು ಪ್ರದೇಶಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ. ಕೆಲವು ದಿನಗಳಿಂದ ಕಂಡುಬರುತ್ತಿರುವ ಮೋಡ ಮುಸುಕಿದ ವಾತಾವರಣ ನವೆಂಬರ್ 6ರ ವರೆಗೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಂದೆಡೆ ದೀಪಾವಳಿಯ ಸಂಭ್ರಮವಿದ್ದರೆ ಇನ್ನೊಂದೆಡೆ ಗುಡುಗು, ಸಿಡಿಲು ಮಳೆಯ ಆರ್ಭಟ ಜನರಲ್ಲಿ ನಿರಾಸೆ ಮೂಡಿಸಿದೆ. ಬಣ್ಣದ ಹಬ್ಬ, ಬೆಳಕಿನ ಹಬ್ಬ, ಪಟಾಕಿ ಹಬ್ಬ ದೀಪಾವಳಿದಲ್ಲಿ ಗುಡುಗು ಮಿಂಚಿನ ಆರ್ಭಟವೇ ಹೆಚ್ಚಾಗುತ್ತದೆ ಎನ್ನಲಾಗಿದೆ.
ಕೆಲವೆಡೆ ಅಧಿಕ ಮಳೆ
ಪಾವಗಡ, ಮೂಡುಬಿದಿರೆ, ಕಾರ್ಕಳ, ಕೋಟ, ಕಳಸ, ಶೃಂಗೇರಿ, ಬಾಳೆಹೊನ್ನೂರು, ಭಾಗಮಂಡಲ, ಧರ್ಮಸ್ಥಳ, ಬೆಳ್ತಂಗಡಿ, ಹಾವೇರಿ, ಆಗುಂಬೆ, ಅಗ್ರಹಾರ ಕೋಣಂದೂರು, ದಾವಣಗೆರೆಯಲ್ಲಿ ಈಗಾಗಲೇ ಮಳೆಯಾಗಿದೆ.
ಬೆಂಗಳೂರಲ್ಲಿ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಗಾವಿಯಲ್ಲಿ 15.0 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಈಗ ಹಿಂಗಾರು ಮಳೆ ಆರಂಭವಾಗಿದೆ. ಆರಂಭದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಆರ್ಭಟ ಮುಂದುವರೆದಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಅಣೆಕಟ್ಟೆಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.