ಬೆಂಗಳೂರು: ರಾಜ್ಯದ 541 ಖಾಸಗಿ ಪಿಯು ಕಾಲೇಜುಗಳಲ್ಲಿ ಕಳೆದ ಮೂರು ವರ್ಷದ ಶೈಕ್ಷಣಿಕ ವರ್ಷದಲ್ಲಿ ಒಬ್ಬ ವಿದ್ಯಾರ್ಥಿಯು ದಾಖಲಾಗದಿರುವುದು ವರದಿಯಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ 166 ಕಾಲೇಜುಗಳಲ್ಲಿಯೂ ದಾಖಲಾತಿ ಶೂನ್ಯವಿರುವ ಪರಿಸ್ಥಿತಿಯಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ಸತತ ಮೂರು ವರ್ಷಗಳ ಕಾಲ ಶೂನ್ಯ ಪ್ರವೇಶ ಹೊಂದಿರುವ ಕಾಲೇಜುಗಳನ್ನು ಮುಂದುವರಿಸಲು ಅನುಮತಿ ಇಲ್ಲದಿದ್ದರೂ, ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಈ ವರ್ಷಕ್ಕೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲು ನಿರ್ಧರಿಸಿದೆ. ಶೂನ್ಯ ಪ್ರವೇಶಾತಿ ಹೊಂದಿರುವ ಕಾಲೇಜುಗಳು ಪರವಾನಗಿ ನವೀಕರಣಕ್ಕಾಗಿ ಇಲಾಖೆಯನ್ನು ಸಂಪರ್ಕಿಸಿದರೆ ಅನುಮತಿಸಲಾಗುವುದು ಎಂದು ಪಿಯು ಶಿಕ್ಷಣ ಇಲಾಖೆ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿದ್ದಾರೆ.
ಶೂನ್ಯ ದಾಖಲಾತಿಗೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಪಿಯು ಬೋರ್ಡ್ ಅಧಿಕಾರಿಯೊಬ್ಬರು, ಹೆಚ್ಚಿನ ಶುಲ್ಕ ಅಥವಾ ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಶೂನ್ಯ ಪ್ರವೇಶಗಳು ಆಗಿರಬಹುದು. ಅಲ್ಲದೆ, ವಿದ್ಯಾರ್ಥಿಗಳು ಹಿಂದಿನ ವರ್ಷಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಕಾರಣ ಈ ಕಾಲೇಜುಗಳನ್ನು ಆಯ್ಕೆ ಮಾಡದಿರಲು ನಿರ್ಧರಿಸಿರಬಹುದು ಅಥವಾ ಕೆಲವು ವಿವಾದಗಳಲ್ಲಿ ಭಾಗಿಯಾಗಿರಬಹುದು ಎಂದು ತಿಳಿಸಿದ್ದಾರೆ.