ಬೆಂಗಳೂರು: ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಆದೇಶಿದೆ. ಶಾಲೆಗಳ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಪಠ್ಯ ಪುಸ್ತಕಗಳು ಶಾಲೆಗಳಿಗೆ ತಲುಪಿಲ್ಲ. ಎರಡು ವರ್ಷದಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ಒತ್ತು ನೀಡುವ ಕಾರಣದಿಂದ ಶಾಲೆಗಳ ತ್ವರಿತ ಆರಂಭಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಪಠ್ಯ ಪುಸ್ತಕಗಳು ಕೈಗೆ ಸಿಗದೇ ಇದ್ದಲ್ಲಿ ಶಾಲೆ ತೆರೆದರೂ ಪ್ರಯೋಜನವಿಲ್ಲ ಎಂಬಂತಾಗುತ್ತದೆ.
ಇದನ್ನು ಓದಿ: ಪಠ್ಯಪುಸ್ತಕ ನೀಡದೆ ಶಾಲೆ ಆರಂಭಿಸಿದ್ದು ಯಾಕೆ? ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ?
ಕೊರೊನಾ ಮತ್ತು ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ಮುದ್ರಣ ಪೇಪರ್ ಬೆಲೆ ಗಗನಕ್ಕೇರಿದೆ. ಪಠ್ಯ ಪುಸ್ತಕ ಮುದ್ರಣದ ಗುತ್ತಿಗೆ ಮುನ್ನ ಇರುವ ಬೆಲೆಗೆ ಹೋಲಿಸಿದರೆ ಬೆಲೆ ಈಗ ದುಪ್ಪಟ್ಟಾಗಿದೆ. ಅಷ್ಟು ಬೆಲೆ ಕೊಟ್ಟರೂ ಪೇಪರ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಪಠ್ಯ ಪುಸ್ತಕ ಮುದ್ರಣ ಗುತ್ತಿಗೆ ಪಡೆದ ಮುದ್ರಣಕಾರರು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಷ್ಟವಾದರು ಪರವಾಗಿಲ್ಲ, ಕಾಲಮಿತಿಯಲ್ಲಿ ಪುಸ್ತಕ ಕೊಡಬೇಕೆಂದರೂ ಸಹ ಮುದ್ರಣ ಪೇಪರ್ ಲಭ್ಯವಾಗುತ್ತಿಲ್ಲ ಎಂದು ಮುದ್ರಣಾಲಯ ಮಾಲೀಕರು ಕಷ್ಟ ತೋಡಿಕೊಂಡಿದ್ದಾರೆ.
ಅಲ್ಲದೆ, ಸದ್ಯ ಪಠ್ಯ ಪುಸ್ತಕಗಳನ್ನು ಕಾಲಮಿತಿಯಲ್ಲಿ ಪೂರೈಕೆ ಮಾಡುವಂತೆ ಮುದ್ರಣಾಲಯ ಮಾಲೀಕರಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದ್ದು ಅಲ್ಲದೆ, ಕಾಲಮಿತಿಯಲ್ಲಿ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡದಿದ್ದರೆ ದಂಡ ವಿಧಿಸುವುದಾಗಿ ತಿಳಿಸಿದೆ.
ದಂಡ ವಿಧಿಸಿದ ಸರ್ಕಾರ
ಪಠ್ಯ ಪುಸ್ತಕಗಳನ್ನು ಕಾಲಮಿತಿಯಲ್ಲಿ ಪೂರೈಕೆ ಮಾಡದೇ ಮುದ್ರಣಾಲಯಗಳು ವಿಳಂಬ ಮಾಡುತ್ತಿವೆ. ಮತ್ತಷ್ಟು ವಿಳಂಬವಾದರೆ ಅದಕ್ಕೆ ಮುದ್ರಣಾಲಯ ಮಾಲೀಕರನ್ನು ಹೊಣೆ ಮಾಡಲಾಗುತ್ತದೆ. ಮುದ್ರಣಾಲಯ ಮಾಲೀಕರ ಮನವಿ ಮೇರೆಗೆ ಹಲವು ಬದಲಾವಣೆ ತಂದಿದ್ದೇವೆ. ಇಷ್ಟಾಗಿಯೂ ಪಠ್ಯ ಪುಸ್ತಕ ಕಾಲಕ್ಕೆ ಸರಿಯಾಗಿ ಪೂರೈಕೆ ಮಾಡಿಲ್ಲ ಅಂದರೆ ದಂಡ ವಿಧಿಸಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಪಠ್ಯಪುಸ್ತಕ ಮುದ್ರಣವಗಿಲ್ಲ, ಪಾಠಗಳು ನಡೆದಿಲ್ಲ ಆದರೆ ಪರೀಕ್ಷೆ ಮಾತ್ರ ನಿಗದಿಯಾಗಿದೆ?!
ಪಠ್ಯ ಪುಸ್ತಕ ಮುದ್ರಣದ ಗುತ್ತಿಗೆ ಪಡೆಯುವಾಗಲೇ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ದಂಡದ ಷರತ್ತು ವಿಧಿಸಲಾಗಿರುತ್ತದೆ. ಹೀಗಾಗಿ ಪಠ್ಯ ಪುಸ್ತಕ ಮುದ್ರಣಾಲಯಗಳು ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಿಸುವಂತಾಗಿದೆ.
ರಾಜ್ಯದ ಪಠ್ಯ ಕ್ರಮ ಶಾಲೆಗಳಿಗೆ 530 ಮಾದರಿಗಳ 6 ಕೋಟಿ ಪಠ್ಯ ಪುಸ್ತಕಗಳು 2022-23 ಕ್ಕೆ ಅಗತ್ಯವಿದೆ. ಆದರೆ ಕಾಗದಗಳು ಸಿಗದ ಕಾರಣ ಮುದ್ರಣಾಲಯಗಳು ತಾತ್ಕಾಲಿಕವಾಗಿ ಪಠ್ಯ ಪುಸ್ತಕ ಮುದ್ರಣ ಸ್ಥಗಿತಗೊಳಿಸಿದ್ದಾರೆ. ಶೇ 32 ರಷ್ಟು ಪಠ್ಯ ಪುಸ್ತಕ ಪೂರೈಕೆ ಬಾಕಿ ಇದೆ. ಮೇ 14 ರೊಳಗೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
ಕಾಲಮಿತಿಯಲ್ಲಿ ಪೂರೈಕೆ ಮಾಡದೇ ವಿಳಂಬ ಮಾಡಿದರೆ, ಅವರಿಗೆ ಬಿಲ್ ಮೊತ್ತದ ಆಧಾರದ ಮೇಲೆ ದಂಡದ ಮೊತ್ತ ವಿಧಿಸಿ ಕಡಿತಗೊಳಿಸಲಾಗುತ್ತದೆ. ಎಷ್ಟು ದಿನ ವಿಳಂಬ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ದಂಡ ನಿರ್ಧಾರವಾಗಲಿದೆ. ವಿಳಂಬ ಆದಷ್ಟು ದಂಡದ ಮೊತ್ತ ಹೆಚ್ಚಾಗಲಿದೆ ಎಂದು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಠ್ಯ ಪುಸ್ತಕ ಮುದ್ರಣದಲ್ಲಿ ವಿಳಂಬಕ್ಕೆ ಪೇಪರ್ ಕೊರತೆ ಕಾರಣ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮದ್ಯ ಪ್ರವೇಶಿಸಿಸಬೇಕು. ತಮಿಳುನಾಡು ಸರ್ಕಾರದ ಜತೆಗೆ ಮಾತುಕತೆ ಮಾಡಿ, ಪಠ್ಯ ಪುಸ್ತಕ ಮುದ್ರಣಕ್ಕೆ ಬೇಕಿರುವ ಪೇಪರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈವರೆಗೂ ಶೇ 68 ರಷ್ಟು ಪಠ್ಯ ಪುಸ್ತಕ ಮುದ್ರಣವಾಗಿದೆ. ಶೇ 32 ರಷ್ಟು ಬಾಕಿಯಿದ್ದು, ಅತಿ ಶೀಘ್ರದಲ್ಲಿ ಬಾಕಿ ಪಠ್ಯ ಪುಸ್ತಕ ಮುದ್ರಣಕ್ಕೆ ಸರ್ಕಾರ ಪರ್ಯಾಯ ದಾರಿ ಕಂಡುಕೊಳ್ಳಬೇಕಿದೆ.