ರಾಜ್ಯ ಮಹಿಳಾ ಆಯೋಗ ಅಧ್ಯಕ್ಷರ ಭೇಟಿಗೆ ಅವಕಾಶ ನೀಡದ ಪೊಲೀಸರು: ಪ್ರತಿಭಟನಾಕಾರರ ಆಕ್ರೋಶ

ಯಾದಗಿರಿ: ಮಹಿಳೆ ನಗ್ನಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ  ಬಳಿ ಪ್ರತಿಭಟನೆ ನಡೆಯಿತು.

ಘಟನೆಯ ಕುರಿತು ತಿಪ್ಪೆಸಾರಿಸುವ ಕೆಲಸಕ್ಕೆ ಮುಂದಾದ ಜಿಲ್ಲಾಧಿಕಾರಿ, ಮಹಿಳಾ ಆಯೋಗದ ಅಧ್ಯಕ್ಷೆಯ ವಿರುದ್ದ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಮಹಿಳಾ ಸಮುದಾಯ ಆಕ್ರೋಶವನ್ನು ಹೊರಹಾಕಿದ್ದಾರೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ನೀಲಾ ಕೆ. ಮಾತನಾಡಿ ʻʻಮಹಿಳೆ ನಗ್ನ ಮಾಡಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುತ್ತಿದ್ದರೂ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಭೇಟಿ ಮಾಡಲು ಬಿಡದೇ ಪೊಲೀಸರು ತಮ್ಮನ್ನು ಕಡೆಗಣಿಸಿದ್ದಾರೆʼʼ ಎಂದು ಆರೋಪಿಸಿದರು.

ಇದನ್ನು ಓದಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ: ಆರೋಪಿಗಳ ಬಂಧನ

ಕರ್ನಾಟಕ ರಾಜ್ಯದಲ್ಲಿ ಹೆಣ್ಣು‌ಮಕ್ಕಳಿಗೆ ಸುರಕ್ಷತೆಯಿಲ್ಲ ಎನ್ನುವ ಭಾವನೆ ಕಾಡುತ್ತಿದೆ. ಒಂದು ಕಡೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರವರು ಯುವತಿ ಸಂಜೆ ಸಮಯದಲ್ಲಿ ಏಕೆ ಹೊರಗೆ ಹೋಗಬೇಕೆಂದು ಪ್ರಶ್ನಿಸಿ ರಾಜ್ಯದ ಮಾನವನ್ನೇ ಹರಾಜು ಹಾಕಿದ್ದಾರೆ ಎಂದು ಲೇವಡಿ ಮಾಡಿದರು.

ಮಹಿಳೆಯನ್ನು ಥಳಿಸಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಇಂಥ ಘಟನೆಯನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಿದರೆ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೇ ಬಾಗಿಲಿನ ಆಚೆ ನಿಲ್ಲಿಸಲಾಗಿದೆ. ಅವರು ತೆರಳಿದ ನಂತರ ನಮ್ಮನ್ನು ಒಳ ಬಿಡಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಇದು ಹೇಯ ಕೃತ್ಯ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇದರ ಹಿಂದಿರುವ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಂತ್ರಸ್ತ ಮಹಿಳೆಗೆ ₹5 ಲಕ್ಷ ಪರಿಹಾರ ನೀಡಿ, ಸರ್ಕಾರಿ ನೌಕರಿ, ವಾಸಕ್ಕೆ ಮನೆ, ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದರು.

ಸಂತ್ರಸ್ತೆಯನ್ನು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತೀರಿ. ಚಾರಿತ್ರ್ಯಹರಣ ಮಾಡುತ್ತೀರಿ. ಜೀವನ ಭದ್ರತೆ ಕಲ್ಪಿಸಿ, ಮಹಿಳೆಯನ್ನು ಅಂಥ ಕೃತ್ಯದಿಂದ ಬಿಡಿಸಬೇಕು ಎಂದು ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಿದ ಕಾರ್ಯಕರ್ತೆಯರು ಪೊಲೀಸರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ಇದನ್ನು ಓದಿ: ಯಾದಗಿರಿ ಮಹಿಳೆಯ ಮೇಲಿನ‌ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಪ್ರತಿಭಟನಾ ಸ್ಥಳಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕರೆಸುವಂತೆ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ನಮಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದು ಹರಿಹಾಯ್ದರು. ಪೊಲೀಸರು ಮಹಿಳಾ ಆಯೋಗದ ಅಧ್ಯಕ್ಷರನ್ನು ಕರೆಸಿದ ನಂತರ ಅವರಿಗೆ ಘಟನೆ ವಿವರವನ್ನು ತಿಳಿಸಿ ಸೂಕ್ತಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಯೊಳಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಬಿಜೆಪಿ ಸರಕಾರ ಹಾಗೂ ಜಿಲ್ಲಾಧಿಕಾರಿ ಡಾ.ರಾಗಪ್ರೀಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಜಿಲ್ಲಾಧಿಕಾರಿ ಡಾ.ರಾಗಪ್ರೀಯಾ , ಜಿಲ್ಲಾ ಎಸ್ ಪಿ ಡಾ.‌ಸಿ ಬಿ ವೇದಮೂರ್ತಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಕಾರರ ಮನವೊಲಿಸಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಘಟನೆಯನ್ನು ಖಂಡಿಸುತ್ತೇನೆ. ಈಗಾಗಲೇ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಎಸ್‌ಪಿಯವರಿಗೆ ತಿಳಿಸಿದ್ದೇನೆ. ಸದ್ಯ ಪರಿಹಾರ ‍ವಿತರಿಸಲಾಗಿದೆ ಎಂದರು. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಪವಿಭಾಗಧಿಕಾರಿ ಪ್ರಶಾಂತ ಹನಗಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಪ್ರತಿಭಟನಾಕಾರರ ಮನವೊಲಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲ ಸಾಬ ನದಾಫ್‌, ಜನವಾದಿ ಮಹಿಳಾ ಸಂಘಟನೆ ಸಂಚಾಲಕಿ ಸವಿತಾ ಪೂಜಾರಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಮಹಿಳಾ ಉಪ ಸಮಿತಿಯ ಜಿಲ್ಲಾ ಸಂಚಾಲಕಿ ರಂಗಮ್ಮ ಕಟ್ಟಿಮನಿ ಸೇರಿದಂತೆ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಇದ್ದರು.

Donate Janashakthi Media

Leave a Reply

Your email address will not be published. Required fields are marked *