ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಮೊದಲ ಬಜೆಟ್ 2022-23ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಕೆಲವಕ್ಕೆ ಆದ್ಯತೆಯನ್ನು ನೀಡಿದ್ದು ಅದರ ಕೆಲ ಸಂಕ್ಷಿಪ್ತ ಮಾಹಿತಿ ಕೆಳಿಗಿಂತೆ ಇವೆ……
2022-23ನೇ ಸಾಲಿನ ಬಜೆಟ್ ಗಾತ್ರ 2,53,165 ಕೋಟಿ ರೂ. ಆಗಿದ್ದು, ಅದರಲ್ಲಿ ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಘೋಷಿಸಲಾಗಿದೆ. ಕೃಷಿಗೆ 33,700 ಕೋಟಿ, ಬೆಂಗಳೂರು ಅಭಿವೃದ್ಧಿಗೆ 8,409 ಕೋಟಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ 3,102 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಬಜೆಟ್ ಗಾತ್ರ ಶೇ. 7.7ರಷ್ಟು ಹೆಚ್ಚಳ
ಈ ಬಾರಿಯ ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇ. 7.7 ಹೆಚ್ಚಳವಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ – ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ. ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ – ಪಾಲುದಾರಿಕೆಯೊಂದಿಗೆ ಅಭಿವೃದ್ಧಿ, ನವಭಾರತಕ್ಕಾಗಿ ನವ ಕರ್ನಾಟಕ – ಹೊಸ ಚಿಂತನೆ, ಹೊಸ ಚೈತನ್ಯದ ಜತ ಹೊಸ ಮುನ್ನೋಟಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
ತೆರಿಗೆ ಹೆಚ್ಚಳ ಇಲ್ಲ
ಯಾವುದೇ ತೆರಿಗೆ ಹೆಚ್ಚಳ ಇಲ್ಲ, ರಾಜಸ್ವ ಕೊರತೆ ಅಂದಾಜು 14,699 ಕೋಟಿ, ವಿತ್ತೀಯ ಕೊರತೆ ಅಂದಾಜು 61,564 ಕೋಟಿ ಇದೆ.
ಸಾರಿಗೆ ಇಲಾಖೆಗೆ 8,007 ಕೋಟಿ ರಾಜಸ್ವ ಸಂಗ್ರಹಣೆ ಗುರಿ, ಅಬಕಾರಿ ಇಲಾಖೆಗೆ 29,000 ಕೋಟಿ ರಾಜಸ್ವ ಸಂಗ್ರಹ ಗುರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂಪಾಯಿ ರಾಜಸ್ವ ಗುರಿ, ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ತೆರಿಗೆ ಸಂಗ್ರಹ ಗುರಿ, 287 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಕೃಷಿ ಜಮೀನು ಮತ್ತು ಇತರೆ ಸ್ವತ್ತು ಡ್ರೋಣ್ ಸರ್ವೇ, 406 ಕೋಟಿ ವೆಚ್ಚದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಉನ್ನತೀಕರಣ, ಎಲ್ಲಾ ಪಾರಂಪರಿಕ ನೊಂದಾಯಿತ ಶಾಶ್ವತ ದಾಖಲೆಗಳ ಸ್ಕ್ಯಾನಿಂಗ್ ಮೊದಲ ಹಂತದಲ್ಲಿ ಬಿಬಿಎಂಪಿ ಮತ್ತು 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಕ್ಯಾನಿಂಗ್ ಗೆ 15 ಕೋಟಿ ಮೀಸಲು.
ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕಾಗಿ ನಿರ್ಧರ ಮಾಡಲಾಗಿದೆ.
ಸರ್ವರಿಗೂ ಸೂರು ಯೋಜನೆ
ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ 5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. 6,612 ಕೋಟಿ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಹೊಸ ಮನೆಗಳು, ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡಕ್ಕೆ ಮೊದಲ ಆದ್ಯತೆ, ಪ.ಜಾತಿ, ಪ.ಪಂಗಡದ ಅಲೆಮಾರಿ, ಅರೆ ಅಲೆಮಾರಿ ಜನಾಂಗ ಹಾಗೂ ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಆದ್ಯತೆ ನೀಡಲಾಗುವುದು ಎಂದು ಘೋಷಣೆ
25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ-ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ
ಮುಂದಿನ 2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸಲು ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ನಲ್ಲಿಗಳ ಮೂಲಕ ನೀರು ಸಂಪರ್ಕ ಒದಗಿಸುವುದು. ಕುಡಿಯುವ ನೀರು ಸಂಪರ್ಕಕ್ಕೆ 7 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವೆಂಬರ್‌ನಲ್ಲಿ ಇನ್ವೆಸ್ಟ್ ಕರ್ನಾಟಕ
ಹೂಡಿಕೆದಾರರನ್ನು ಆಕರ್ಷಿಸಲು ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮವು ಈ ಬಾರಿ ಬೆಂಗಳೂರಿನಲ್ಲಿ ನವೆಂಬರ್ 2ರಿಂದ 4ರವರೆಗೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ ಮಾಡಲು ಆದ್ಯತೆ. ಇದರಿಂದ 10 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.