ಲೇಖಕಿ ರಾಜೇಶ್ವರಿ ತೇಜಸ್ವಿ‌ ನಿಧನ

ಬೆಂಗಳೂರು: ರಾಷ್ಟ್ರ ಕವಿ ಕುವೆಂಪು ಅವರ ಸೊಸೆ, ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ (84) ಅವರು ಇಂದು ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನಲ್ಲಿ ವಾಸವಾಗಿದ್ದ ರಾಜೇಶ್ವರಿ ತೇಜಸ್ವಿ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಬೆಂಗಳೂರಿಗೆ ಆಗಮಿಸಿದ್ದರು. ಕಳೆದ ನಾಲ್ಕು ದಿನಗಳಿಂದ ನಗರದ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಪತಿ ಪೂರ್ಣಚಂದ್ರ ತೇಜಸ್ವಿ ನಿಧನದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹ್ಯಾಂಡಪೋಸ್ಟ್ ತೋಟದ ಮನೆಯಲ್ಲಿ ತೇಜಸ್ವಿ ಅವರು ವಾಸಿಸುತ್ತಿದ್ದರು.

ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನ ಪುತ್ರಿಯ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ 5:30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ‌. ರಾಜೇಶ್ವರಿ ಅವರ ಮೃತದೇಹವನ್ನು ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ತೇಜಸ್ವಿ 1966ರಲ್ಲಿ ಪೂರ್ಣಚಂದ್ರ ತೇಜಸ್ವಿಯವರನ್ನು ವಿವಾಹವಾಗಿದ್ದರು. ‘ನನ್ನ ತೇಜಸ್ವಿ’, ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎಂಬ ಕೃತಿಗಳನ್ನು ಅವರು ರಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *