ನೀಟ್
ಕೋಟಾ, ರಾಜಸ್ಥಾನ: ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳ ಕಾಲ ನೀಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ನಡೆಸುತ್ತಿರುವ ದಿನನಿತ್ಯದ ಪರೀಕ್ಷೆ ನಡೆಸುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಕೋಚಿಂಗ್ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಜೆಇಇ ಮತ್ತು ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ವಾರ್ಷಿಕವಾಗಿ ಎರಡು ಲಕ್ಷ ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸುತ್ತಾರೆ.
ರಾಜಸ್ಥಾನದ ಈ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ 22 ವಿದ್ಯಾರ್ಥಿಗಳು 2023ರ ಇಲ್ಲಿಯವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣವು ಹೆಚ್ಚಳವಾಗಿದ್ದು, ಕಳೆದ ವರ್ಷ ಜಿಲ್ಲೆಯಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ಧರು. ಭಾನುವಾರದಂದು ನಾಲ್ಕು ಗಂಟೆಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ.
ಇದನ್ನೂ ಓದಿ: ನೀಟ್ ವಿರೋಧಿ ಮಸೂದೆ: ರಾಷ್ಟ್ರಪತಿಗೆ ರವಾನಿಸಿದ ತಮಿಳುನಾಡು ರಾಜ್ಯಪಾಲ
ಅವಿಷ್ಕರ್ ಶಂಬಾಜಿ ಕಾಸ್ಲೆ (17) ಅವರು ಜವಾಹರ್ ನಗರದಲ್ಲಿನ ತನ್ನ ಕೋಚಿಂಗ್ ಇನ್‌ಸ್ಟಿಟ್ಯೂಟ್ ಕಟ್ಟಡದ ಆರನೇ ಮಹಡಿಯಿಂದ ಮಧ್ಯಾಹ್ನ 3.15 ರ ಸುಮಾರಿಗೆ ಹಾರಿ ಜೀವಕಳೆದುಕೊಂಡಿದ್ದಾರೆ. ಅಣಕು ನೀಟ್ ಪರೀಕ್ಷೆಯನ್ನು ಬರೆದ ನಂತರ ಕೊಠಡಿಯಿಂದ ಹೊರನಡೆದ ವಿದ್ಯಾರ್ಥಿಯು ಅಲ್ಲಿಂದ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿಯನ್ನು ಆದರ್ಶ್ ರಾಜ್ (18) ಎಂದು ಗುರುತಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯು ರಾತ್ರಿ 7 ಗಂಟೆ ಸುಮಾರಿಗೆ ಕುನ್ಹಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ತಮ್ಮ ಕೋಚಿಂಗ್ ಸೆಂಟರ್‌ಗಳು ನಡೆಸಿದ್ದ ಸಾಮಾನ್ಯ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎಂದು ಇಂಡಿಯಾ ಟುಡೆ ವರದಿ ಹೇಳಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದ ನಂತರ ಕೋಟಾ ಜಿಲ್ಲಾಧಿಕಾರಿ ಒ.ಪಿ ಬಂಕರ್ ಅವರು ಭಾನುವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ, ಮುಂದಿನ ಎರಡು ತಿಂಗಳ ಕಾಲ ವಾಡಿಕೆಯ ಪರೀಕ್ಷೆಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ಕೋಚಿಂಗ್ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳಿಗೆ “ಮಾನಸಿಕ ಬೆಂಬಲ” ಒದಗಿಸಲು ಈ ನಿರ್ದೇಶನಗಳನ್ನು ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆಯಲ್ಲಿದ್ದರೆ, ಅವರಿಗೆ ದಯವಿಟ್ಟು ಸಹಾಯವನ್ನು ಒದಗಿಸಿ. ಇಂತಹ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ವಿಡಿಯೊ ನೋಡಿ: ಬುದ್ದಿ ಹೇಳಿದ ಉಪನ್ಯಾಸಕನಿಗೆ ಲಾಂಗ್ ತೋರಿಸಿದ ವಿದ್ಯಾರ್ಥಿ!Janashakthi Media