ಜೈಪುರ: ರಾಜಸ್ಥಾನ ರಾಜ್ಯದ ಶಾಲೆಯೊಂದರಲ್ಲಿ ದಲಿತ ಬಾಲಕನ ಮೇಲಿನ ಹಲ್ಲೆ ಮತ್ತು ಹತ್ಯೆಯ ಪ್ರಕರಣದ ಬಳಿಕ ಇದೀಗ ಮತ್ತೊಂದು ಘಟನೆ ಸಂಭವಿಸಿದ್ದು, ಸರ್ಕಾರಿ ಶಾಲೆಯಲ್ಲಿ ದಲಿತ ಬಾಲಕಿಯರಿಬ್ಬರು ಊಟ ಬಡಿಸಿದರೆಂದು ತಿಳಿದು ಮಕ್ಕಳಿಗೆ ಊಟವನ್ನು ಬಿಸಾಡಿ ಎಂದು ಅಡುಗೆಯ ಸೂಚಿಸಿರುವ ಘಟನೆ ನಡೆದಿದೆ.
ರಾಜಸ್ಥಾನದ ಉದಯಪುರ ಜಿಲ್ಲೆಯ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಆರೋಪಿ ಅಡುಗೆಯವ ಲಾಲ್ ರಾಮ್ ಗುರ್ಜರ್ ಎನ್ನುವವನ್ನು ಗೋಗುಂದ ಠಾಣೆ ಪೊಲೀಸರು ಬಂಧಿಸಿದ್ದಾರೆ ಮತ್ತು ಎಸ್‌ಸಿ ಮತ್ತು ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಲಾಲ್ ರಾಮ್ ಗುರ್ಜರ್ ತಯಾರಿಸಿದ ಮಧ್ಯಾಹ್ನದ ಊಟವನ್ನು ದಲಿತ ಬಾಲಕಿಯರು ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆತನು ಇತರೆ ವಿದ್ಯಾರ್ಥಿಗಳಿಗೆ ಊಟವನ್ನು ಎಸೆಯುವಂತೆ ಸೂಚನೆ ನೀಡಿದ್ದಾನೆ. ಅದರಂತೆ ವಿದ್ಯಾರ್ಥಿಗಳು ಊಟವನ್ನು ಎಸೆದಿರುವ ಘಟನೆ ನಡೆದಿದೆ.
ಘಟನೆಯ ಬಗ್ಗೆ ಬಾಲಕಿಯರು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ಬಳಿಕ ಅವರು ಕೆಲವರೊಂದಿಗೆ ಶಾಲೆಗೆ ಆಗಮಿಸಿ ಅಡುಗೆಯವನ ಕ್ರಮವನ್ನು ಖಂಡಿಸಿದ್ದಾರೆ ಮತ್ತು ಆತನ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ದಲಿತ ಬಾಲಕಿಯರು ಬಡಿಸಿದ ಊಟ ಎಸೆಯುವಂತೆ ಸೂಚಿಸಿರುವುದು ನಿಜವೆಂದು ಕಂಡುಬಂದಿದ್ದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಬಾಲಕಿಯರು ಊಟವನ್ನು ಬಡಿಸಿದ್ದಕ್ಕೆ ಇತರ ವಿದ್ಯಾರ್ಥಿನಿಯರಿಗೆ ಅದನ್ನು ಎಸೆದಿರುವುದು ತಿಳಿದುಬಂದಿದೆ ಎಂದಿದ್ದಾರೆ.
ಅಡುಗೆಯವನು ಯಾವಾಗಲೂ ತಾನೇ ಆಯ್ಕೆ ಮಾಡಿದ ಮೇಲ್ವರ್ಗದ ವಿದ್ಯಾರ್ಥಿಗಳಿಂದ ಊಟವನ್ನು ಬಡಿಸುತ್ತಿದ್ದರು. ಆದರೆ ವಿದ್ಯಾರ್ಥಿಗಳು ಸರಿಯಾಗಿ ಊಟವನ್ನು ಬಡಿಸುತ್ತಿಲ್ಲ ಎಂಬ ಕಾರಣಕ್ಕೆ ದಲಿತ ಬಾಲಕಿಯರಿಗೆ ಊಟ ಬಡಿಸುವಂತೆ ಶಿಕ್ಷಕರೊಬ್ಬರು ಸೂಚನೆ ನೀಡಿದ್ದರು ಎನ್ನಲಾಗಿದೆ ಇದರ ನಂತರ ಈ ಘಟನೆ ಸಂಭವಿಸಿದೆ.