ಕೋಟಾ : ವಿದ್ಯಾರ್ಥಿನಿಯ ಬಳಿ ಲೈಂಗಿಕವಾಗಿ ಸಹಕರಿಸಲು ಬೇಡಿಕೆಯಿಟ್ಟ ಆರೋಪದಡಿ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಗಿರೀಶ್ ಪರ್ಮಾರ್ ಬಂಧಿತ ಆರೋಪಿ.
ಬಿ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿನಿಗೆ ಹೆಚ್ಚು ಅಂಕ ನೀಡುವುದಾಗಿ ಆಮಿಷವೊಡ್ಡಿ ಲೈಂಗಿಕವಾಗಿ ಸಹಕರಿಸಲು ಗಿರೀಶ್ ಪರ್ಮಾರ್ ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿನಿ ಒಪ್ಪದೇ ಇದ್ದಾಗ ಆಕೆಯನ್ನು ತನ್ನ ಸಬ್ಜೆಕ್ಟ್ನಲ್ಲಿ ಫೇಲ್ ಮಾಡಿದ್ದಾರೆ.
ಇದರಿಂದ ಮನನೊಂದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ಡಿಸೆಂಬರ್ 21 ರಂದು ಗಿರೀಶ್ ಪರ್ಮಾರ್ರನ್ನು ಪೊಲೀಸರು ಬಂಧಿಸಿದ್ದು, ಡಿಸೆಂಬರ್ 22 ರಂದು ವಿಶ್ವವಿದ್ಯಾಲಯ ಅವರನ್ನು ಸೇವೆಯಿಂದಲೂ ಅಮಾನತುಗೊಳಿಸಿತ್ತು. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ವಿದ್ಯಾರ್ಥಿ ಅರ್ಪಿತ್ ಅಗರ್ವಾಲ್ ಮೂಲಕ ಗಿರೀಶ್ ಪರ್ಮಾರ್ ಆ ವಿದ್ಯಾರ್ಥಿನಿಗೆ ಲೈಂಗಿಕ ಕ್ರಿಯೆಗೆ ಬೇಡಿಕೆಯಿಟ್ಟಿದ್ದು, ಪ್ರಾಧ್ಯಾಪಕನಿಗೆ ಸಹಾಯ ಮಾಡಿದ ಅರ್ಪಿತ್ ಅಗರ್ವಾಲ್ನನ್ನೂ ಬಂಧಿಸಲಾಗಿದೆ. ಗಿರೀಶ್ ಪರ್ಮಾರ್ ಮತ್ತು ಅರ್ಪಿತ್ ಅಗರ್ವಾಲ್ ವಿದ್ಯಾರ್ಥಿನಿ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಆಡಿಯೋ ಪೊಲೀಸರಗೆ ದೊರಕಿದೆ.
ದಾದಾಭರಿ ಪೊಲೀಸ್ ಠಾಣೆಯಲ್ಲಿ ಪ್ರಾಧ್ಯಾಪಕ ಹಾಗೂ ಅರ್ಪಿತ್ ಅಗರ್ವಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 385, 354 (ಎ), 354 (ಡಿ), 384 ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಮರ್ ಸಿಂಗ್ ಹೇಳಿದ್ದಾರೆ.
ತನಿಖೆಗೆ ಆಗಮಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ತಂಡ : ಘಟನೆ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ತನ್ನ ಮೂವರು ಸದಸ್ಯರ ತಂಡವನ್ನು ತನಿಖೆ ನಡೆಸಲು ವಿಶ್ವವಿದ್ಯಾಲಯಕ್ಕೆ ಕಳುಹಿಸಿದೆ. ಗೀತಾ ಭಟ್ NCW ತಂಡದ ಮುಖ್ಯಸ್ಥರಾಗಿದ್ದಾರೆ. ಪ್ರವೀಣ್ ಸಿಂಗ್ ಮತ್ತು ಶಾಲಿನಿ ಸಿಂಗ್ ಎನ್‌ಸಿಡಬ್ಲ್ಯು ತಂಡದ ಇತರ ಸದಸ್ಯರಾಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗೀತಾ ಭಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುವುದು ಮತ್ತು ಆಯೋಗವು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲಿದೆ ಎಂದು ಹೇಳಿದರು. ಗೀತಾ ಭಟ್ ಅವರು ದೆಹಲಿ ವಿಶ್ವವಿದ್ಯಾಲಯದ ಮಹಿಳಾ ಶಿಕ್ಷಣ ಮಂಡಳಿಯ ನಿರ್ದೇಶಕರು ಮತ್ತು NCW ನ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.ಐದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಆಯೋಗ ಹೇಳಿದೆ. ಮೂವರು ಸದಸ್ಯರ ಸಮಿತಿಯು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮತ್ತು ಇತರ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.