ರಾಯಚೂರು ಜ.02 : ಕೊಯ್ಲಿಗೆ ಬಂದಿದ್ದ ಬ್ಯಾಡಗಿ ಮೆಣಸಿನಕಾಯಿಯನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಜಮೀನಿನಲ್ಲೇ ಕಿಡಿಗೇಡಿಗಳು ನಾಶಪಡಿಸಿದ ಘಟನೆ ಹೊನ್ನಕಾಟಮಳ್ಳಿಯಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ರೈತ ಕಾಸಿಂಸಾಬ್ ಪಿಲಿಗುಂದ ಎಂಬುವವರು ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಮೆಣಸಿನಕಾಯಿಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಲಾಭದ ನಿರೀಕ್ಷೆಯಲ್ಲಿ ರಾತ್ರಿ ಮಲಗಿದ್ದ ರೈತ ಬೆಳಗ್ಗೆ ಎದ್ದೇಳುವಷ್ಟರಲ್ಲಿ ಬೆಳೆ ನೆಲಸಮವಾಗಿತ್ತು! ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದು ಗ್ರಾಪಂ ಚುನಾವಣೆ ಎಂದು ರೈತ ಕಾಸೀಂಸಾಬ್ ಪಿಲಿಗೊಂದ್ ಆರೋಪ ಮಾಡಿದ್ದಾರೆ.
ಕಾಸಿಂಸಾಬ್ ಅವರ ಮಾವ ಬಾಬು ಸೈಯದ್ ಖಾನ್ ಎಂಬುವವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಹೆಚ್ಚುಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇವರ ಗೆಲುವಿನಲ್ಲಿ ಖಾಸಿಂಸಾಬ್ ರವರ ಕೊಡುಗೆ ಸಾಕಷ್ಟು ಇತ್ತು.
ಚುನಾವಣಾ ಫಲಿತಾಂಶ ಹೊರ ಬಿದ್ದ ಮಾರನೆಯ ದಿನ ರಾತ್ರಿ ದುಷ್ಕರ್ಮಿಗಳು ಬೆಳೆ ನಾಶ ಮಾಡಿದ್ದಾರೆ. ಎದುರಾಳಿ ಅಭ್ಯರ್ಥಿಗಳೆ ಈ ಕೃತ್ಯ ನಡೆಸಿದ್ದಾರೆ ಎಂದು ಕಾಸಿಂಸಾಬ್ ಆರೋಪಿಸಿದ್ದಾರೆ. ಎರಡು ಎಕರೆ ತೋಟದಲ್ಲಿ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಬೆಳೆ ಸಂಪೂರ್ಣವಾಗಿ ನಾಶವಾಗಿದ್ದ ಸುಮಾರು 12 ಲಕ್ಷ ರೂಪಾಯಿ ನಷ್ಟ ಎಂದು ಅಂದಾಜಿಸಲಾಗಿದೆ. ಕಾಸಿಂಸಾಬ್ ಜಮೀನಿಗೆ ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿನೀಡಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದೇವದುರ್ಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.