ಬೆಂಗಳೂರು: 2023ರಲ್ಲಿ ಜರುಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆ ವಿಚಾರವಾಗಿ ಇಂದು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರ ನಡೆದಿದ್ದು, ಕೈ-ಕೈ ಮೀಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸರಣಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಬೆಂಗಳೂರು ನಗರದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಬಣಗಳ ನಡುವೆ ಮಾರಾಮಾರಿ ನಡೆದು, ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ಇದನ್ನು ಓದಿ: 2023ರ ವಿಧಾನಸಭಾ ಚುನಾವಣೆ; ಅಖಾಡಕ್ಕಿಳಿದ ಸಿದ್ದರಾಮಯ್ಯ-ಕೋಲಾರದಲ್ಲಿ ಭರ್ಜರಿ ಸ್ವಾಗತ
ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ (ಕೆಪಿಸಿಸಿ) ಕಚೇರಿಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮೂರು ಬಣಗಳ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಪದ್ಮಾವತಿ, ಮನೋಹರ್, ಮಾಜಿ ಉಪ ಮೇಯರ್ ಪುಟ್ಟರಾಜು ಬಣಗಳ ನಡುವೆ ದೊಡ್ಡ ದನಿಯಲ್ಲಿ ವಾಗ್ವಾದ ನಡೆದಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಅಂತಿಮಗೊಳಿಸುವ ನಿಟ್ಟಿನಲ್ಲಿ ಹಲವು ನಾಯಕರ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸಮಿತಿಗಳು ಸಭೆ ನಡೆಸಿ ನಾಳೆಯೊಳಗೆ ಪ್ರತಿಕ್ಷೇತ್ರಕ್ಕೆ ಮೂವರು ಪ್ರಬಲ ಆಕಾಂಕ್ಷಿಗಳ ಹೆಸರನ್ನು ಸೂಚಿಸಬೇಕಿದೆ. ಅದರ ಪ್ರಕಾರ ಬೆಂಗಳೂರು ನಗರದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಭೆ ನಡೆದಿತ್ತು.
ಸಭೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸಹ ಪಕ್ಷದ ಅಭ್ಯರ್ಥಿ ಸೋಲು ಕಂಡರು. ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರೇ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಿದರು. ಇದು ಪಕ್ಷದ ಸೋಲಿಗೆ ಕಾರಣವಾಯಿತು. ಈ ಮೊದಲಿನ ಬಿಬಿಎಂಪಿ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು ಎಂದು ಆಕ್ಷೇಪಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪದ್ಮಾವತಿ ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ. ಇದರಿಂದ ಸಭೆಯಲ್ಲಿ ಏಕಾಏಕಿ ಆರೋಪ ಪ್ರತ್ಯಾರೋಪಗಳು ನಡೆದಿದೆ. ತಳ್ಳಾಟ ನೂಕಾಟ ನಡೆದು, ಪರಸ್ಪರ ಹಲ್ಲೆ ಮಾಡಲು ಮುಂದಾದರು. ಹಲವು ಬಣಗಳ ನಡುವೆ ಗಲಾಟೆ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.