ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಯಡಿಯೂರಪ್ಪ ಆಶ್ವಾಸನೆ 

ಬೆಂಗಳೂರು: ಭೂಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್ ಧರಣಿ ಮಾಡುತ್ತಿವೆ. ಈಗಾಗಲೇ ರೈತ ಮುಖಂಡರ ಜೊತೆಗೆ ಚರ್ಚೆ ನಡೆಸಿ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಹೀಗಿದ್ದರೂ ಅವರು ಹೋರಾಟದ ಮಾರ್ಗ ತುಳಿದಿದ್ದಾರೆ ಎಂದರು.

ರೈತ ಮಗನಾಗಿ ಅನ್ನದಾತನ ಆಶಿರ್ವಾದದಿಂದ ನಾಲ್ಕನೇ ಬಾರಿ ಸಿಎಂ ಆಗಿದ್ದೇನೆ. ರೈತರ ಹಿತ ದೃಷ್ಟಿಯಿಂದ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ರೈತ ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವರಿಗೆ ಇನ್ನು ಮುಂದೆ ಅಧಿಕಾರ ಸಿಗಲಿದೆ ಎಂದ ಅವರು ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದರು.

ಕೆಲವು ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ಇದೆ. ಇದರಿಂದ ರೈತರು ಶೋಷಣೆಗೆ ಒಳಗಾಗುತ್ತಾರೆ. ಆದರೆ ಇದೀಗ ಕಾಯ್ದೆ ತಿದ್ದುಪಡಿಯಿಂದ ರೈತನಿಗೆ ನಿಜವಾದ ಸ್ವಾತಂತ್ರ್ಯ ಸಿಗಲಿದೆ. ಕಾಯ್ದೆ ತಿದ್ದುಪಡಿಯಿಂದ ಸರ್ಕಾರ ಎಪಿಎಂಸಿ ಬಾಗಿಲನ್ನು ಮುಚ್ಚಿಲ್ಲ ಬದಲಾಗಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೈತ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು ಒಂದು ವರ್ಷದಲ್ಲಿ ಇದರಿಂದ ಆಗುವ ಅನುಕೂಲ ರೈತರಿಗೆ ಮನವರಿಕೆ ಆಗಲಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಿ ರೈತರಿಗೆ ಮನವರಿಕೆ ಮಾಡಲಿದ್ದೇನೆ ಎಂದರು.

ಆತಂಕ ಬೇಡ: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ತಿದ್ದುಪಡಿಯ ಮೂಲಕ 108 ಎಕರೆ ಭೂಖರೀದಿ ಮಿತಿಯನ್ನು ಹಾಕುವ ಬದಲು ಹಿಂದೆ ಜಾರಿಯಲ್ಲಿ 54 ಎಕರೆ ಮಿತಿಯನ್ನೇ ಮುಂದುವರಿಸಲಾಗಿದೆ. ನೀರಾವರಿ ಭೂಮಿ ಯಾರಾದರೂ ಕೊಂಡುಕೊಂಡರೆ ಅದನ್ನು ನೀರಾವರಿ ಮಾತ್ರ ಉಪಯೋಗ ಮಾಡಬೇಕು ಎಂಬ ಷರತ್ತು ಕೂಡಾ ಇದೆ. ಇದರಿಂದ ಸಣ್ಣ ಅತೀ ಸಣ್ಣ ರೈತರಿಗೆ ತೊಂದರೆ ಆಗಲು ಬಿಡುವುದಿಲ್ಲ ಎಂದರು.
ರಾಜ್ಯದಲ್ಲಿ 18 ರಿಂದ 20 ಲಕ್ಷ ಎಕರೆ ಸಾಗುವಳಿ ಆಗದ ಬಂಜರು ಜಮೀನು ಇದೆ. . ಈ ತಿದ್ದುಪಡಿಯಿಂದ ಯಾರೂ ಬೇಕಾದರೂ ಕೃಷಿ ಮಾಡಲು ಅವಕಾಶವಿದ್ದು ಕೃಷಿ ಯೋಗ್ಯ ಅಲ್ಲದ ಭೂಮಿಯಲ್ಲಿ ಕೈಗಾರಿಕೆ ಮಾಡಲು ಅವಕಾಶವೂ ಇದೆ ಎಂದು ತಿಳಿಸಿದರು. ಇದರಿಂದ ನಿರುದ್ಯೋಗ ಸಮಸ್ಯೆ ಬಗೆ ಹರಿಯಲಿದೆ ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ರೈತರನ್ನು ಗೊಂದಲಕ್ಕೆ ದೂಡಬಾರದು ಎಂದು ಮನವಿ ಮಾಡಿಕೊಂಡರು.

Donate Janashakthi Media

Leave a Reply

Your email address will not be published. Required fields are marked *