- ದೆಹಲಿಯ ಶಾಹೀನ್ ಬಾಗ್ನಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಗಮನ ಸೆಳೆದಿದ್ದ ಬಿಲ್ಕೀಸ್
ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಅಜ್ಜಿ ಬಿಲ್ಕೀಸ್ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಒಂದೇ ಕಾರಣಕ್ಕೆ ದೆಹಲಿ ಪೊಲೀಸರು ಇದೀಗ 82 ವರ್ಷದ ಅಜ್ಜಿ ಬಿಲ್ಕೀಸ್ ಅವರನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ದೇಶಕ್ಕೆ ಕೊರೋನಾ ಸೋಂಕು ವಕ್ಕರಿಸುವವರೆಗೆ ದೆಹಲಿಯ ಶಾಹೀನ್ ಬಾಗ್ನಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟ ಇಡೀ ದೇಶದ ಮತ್ತು ಇಡೀ ವಿಶ್ವದ ಗಮನ ಸೆಳೆದಿತ್ತು. ಈ ಹೋರಾಟದಲ್ಲಿ ಭಾಗಿಯಾಗಿದ್ದ ಬಿಲ್ಕೀಸ್ ಸಹ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚೆಗೆ ಟೈಮ್ ನಿಯತಕಾಲಿಕೆ ಬಿಡುಗಡೆ ಮಾಡಿದ್ದ 2020ರ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲೂ ಈ ಅಜ್ಜಿ ಸ್ಥಾನ ಪಡೆದಿದ್ದರು.
ನಾವು ರೈತರ ಮಕ್ಕಳು. ಹೀಗಾಗಿ ಇಂದಿನ ರೈತರ ಪ್ರತಿಭಟನೆಯನ್ನು ನಾವು ಬೆಂಬಲಿಸುತ್ತೇವೆ. ರೈತ ವಿರೋಧಿ ಸರ್ಕಾರದ ನೀತಿಯ ವಿರುದ್ಧ ಧ್ವನಿ ಎತ್ತುತ್ತೇವೆ. ಸರ್ಕಾರ ನಮ್ಮ ಮಾತನ್ನು ಕೇಳಬೇಕು.
– ಬಿಲ್ಕೀಸ್ ದಾದಿ
ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ಅಶ್ರುವಾಯು, ಜಲಫಿರಂಗಿಗಳ ಪ್ರಯೋಗದ ಮೂಲಕ ರೈತರನ್ನು ದೆಹಲಿ ಗಡಿಯಲ್ಲೇ ತಡೆಯುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲಾಗಿದೆ. ಸರ್ಕಾರದ ಯಾವ ದಬ್ಬಾಳಿಕೆಗೂ ಕುಗ್ಗದ ರೈತರು ಇದೀಗ ದೆಹಲಿ ಹೊರವಲಯದಲ್ಲಿ ಬೀಡುಬಿಟ್ಟಿದ್ದಾರೆ. ಕೊನೆಗೂ ರೈತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಅವರನ್ನು ಮಾತುಕತೆಗೆ ಆಹ್ವಾನಿಸಿದೆ.
ಇದೇ ಸಂದರ್ಭದಲ್ಲಿ 82 ವರ್ಷದ ಬಿಲ್ಕೀಸ್ ದಾದಿ, ಪ್ರತಿಭಟನಾಕಾರರೊಂದಿಗೆ ಸೇರಲು ಸಿಂಧೂ ಗಡಿ(ದೆಹಲಿ-ಹರಿಯಾಣ ಗಡಿ)ಯಲ್ಲಿ ರೈತರಿಗೆ ತನ್ನ ಬೆಂಬಲ ಸೂಚಿಸಲು ಇಂದು ಆಗಮಿಸಿದ್ದರು. ರೈತ ಹೋರಾಟದಲ್ಲಿ ಸಕ್ರೀಯವಾಗಬೇಕು ಎಂಬುದು ಅವರ ಇಚ್ಚೆಯಾಗಿತ್ತು. ಆದರೆ, ಇದಕ್ಕೆ ಅವಕಾಶ ನೀಡದ ಪೊಲೀಸರು ಅವರನ್ನು ಬಂಧಿಸಿ ಸ್ಥಳದಿಂದ ಕರೆದೊಯ್ದಿದ್ದಾರೆ.