ನವದೆಹಲಿ ಜ 23 : ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನ್ನನ್ನು ರೈತರು ಪತ್ತೆ ಹಚ್ಚಿದ ಘಟನೆ ನಡೆದಿದೆ.
ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಯುಂಟುಮಾಡುವ ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನನ್ನು ರೈತರೇ ಹಿಡಿದಿದ್ದಾರೆ ಎಂದು ANI ಸುದ್ದಿ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ವರದಿ ಪ್ರಕಟಿಸಿದೆ. ಜನವರಿ 22 ರಂದು ಅಪರಿಚಿತ ವ್ಯಕ್ತಿಯನ್ನು ಹಿಡಿದು ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಸಮವಸ್ತ್ರ ಧರಿಸಿ ನಾಲ್ವರು ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಬೇಕು ಆ ಮೂಲಕ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಯುಂಟು ಮಾಡುವ ಪಿತೂರಿ ನಡೆಸಿದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ. ಹರಿಯಾಣದ ರಾಯ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಈ ಯೋಜನೆ ಕಾರ್ಯಗತಗೊಳಿಸಲು ನಮಗೆ ತರಬೇತಿ ನೀಡಿದ್ದಾರೆ ಎಂದು ಆರೋಪಿ ಹೇಳಿರುವುದಾಗಿ ANI ತಿಳಿಸಿದೆ.
ಕಳೆದ ಸರಿ ಎರಡು ತಿಂಗಳಿಂದ ರೈತರು ಚಳಿ,ಮಳೆ-ಗಾಳಿ ಲೆಕ್ಕಿಸದೆ ಮೂರೂ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ 11 ಸುತ್ತಿನ ಸಂಧಾನ ಮಾತುಕತೆಗಳು ನಡೆದಿವೆ ಆ ಎಲ್ಲ ಮಾತುಕತೆಗಳು ವಿಫಲಗೊಂಡಿವೆ. ಕೃಷಿಕಾಯ್ದೆ ರದ್ದಾಗಬೇಕು ಎಂಬುದು ರೈತರ ಮುಖ್ಯ ಬೇಡಿಕೆ ಆಗಿದೆ.
ಇದನ್ನೂ ಓದಿ : 11 ನೇ ಸುತ್ತಿನ ಮಾತುಕತೆಯೂ ವಿಫಲ: 26 ರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ಗೆ ರೈತರ ಸಿದ್ಧತೆ
ಈ ಮಧ್ಯೆ, ಜನವರಿ 26ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಪ್ರತಿಭಟನೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಅಂದು ದೇಶದ ಎಲ್ಲಾ ರಾಜ್ಯ, ಜಿಲ್ಲೆಗಳಲ್ಲೂ ಶಾಂತಿಯುತ ಗಣತಂತ್ರ ಪರೇಡ್ ನಡೆಯಲಿದೆ ಎಂದು ರೈತರು ತಿಳಿಸಿದ್ದಾರೆ.