ರೈತರ ವಿಮೆ ಹಣ ಪಾವತಿಗೆ ವಿಳಂಬವೇಕೆ: ಡಿ ಕೆ ಶಿವಕುಮಾರ್‌ ಪ್ರಶ್ನೆ

ಬೆಂಗಳೂರು: ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದರೂ ರಾಜ್ಯ ಸರ್ಕಾರ ರೈತರಿಗೆ ಸಹಾಯ ಹಸ್ತ ಚಾಚಿಲ್ಲ. ನಿಮ್ಮ ಸರ್ಕಾರ ವಿಮಾ ಕಂಪನಿಗಳ ಜೊತೆ ಶಾಮೀಲಾಗಿದೆ. ವಿಮಾ ಕಂಪನಿಗಳು ರೈತರಿಗೆ ಸರಿಯಾಗಿ ಹಣ ನೀಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾ ಕಂಪನಿಗಳು ರೈತರ ಬಳಿ ಕೋಟ್ಯಂತರ ರೂ. ವಿಮೆಯನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಬೆಳೆಹಾನಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ವಿಮಾ ಕಂಪನಿಗಳು ಸರಿಯಾಗಿ ಹಣ ನೀಡುತ್ತಿಲ್ಲ. ವಿಮೆಯನ್ನು ಕಟ್ಟಿಸೋಕೆ ಮಾತ್ರ ತರಾತುರಿಯಲ್ಲಿ ಸಭೆ ಮಾಡುತ್ತೀರಾ, ಅದೇ ಹಣ ವಾಪಸ್ ಕೊಡಿಸೋದಕ್ಕೆ ಮಾತ್ರ ಯಾಕೆ ತುರ್ತು ಸಭೆಯನ್ನು ಮಾಡುವುದಿಲ್ಲ. ಇಲ್ಲಿಯವರೆಗೂ ರಾಜ್ಯ ಸರ್ಕಾರ ವಿಮಾ ಕಂಪನಿಗಳ ಜೊತೆ ಮಾತನಾಡಿ ರೈತರಿಗೆ ಹಣ ವಾಪಸ್ ಕೊಡಿಸಿಲ್ಲ. ಸರ್ಕಾರ ಮಧ್ಯೆ ನಿಂತು ಕಾರ್ಯ ನಿರ್ವಹಿಸಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಮಾ ಕಂಪನಿಗಳು ರೈತರಿಗೆ ಒಂದು ತಿಂಗಳಲ್ಲಿ ಪರಿಹಾರ ನೀಡುವಂತೆ ಮಾಡಬೇಕು. ಎಲ್ಲಿದ್ದಾರೆ, ಮುಖ್ಯಮಂತ್ರಿ, ಎಲ್ಲಿದ್ದಾರೆ ಮುಖ್ಯ ಕಾರ್ಯದರ್ಶಿಗಳು ಎಂದು ಪ್ರಶ್ನಿಸಿದ ಡಿ ಕೆ ಶಿವಕುಮಾರ್‌, ಫಸಲ್ ಭೀಮಾ ಯೋಜನೆ ಮಾಡಿದ್ದೀರಿ. ಈ ಯೋಜನೆಯಲ್ಲಿ ಕಟ್ಟಿದ ಹಣ ಎಲ್ಲಿಗೆ ಹೋಯ್ತು. ಅದರಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಯೋಜನೆಯನ್ನು ಪ್ರಶ್ನಿಸಿದರು.

ಇನ್ನು ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದಿದ್ದ ಬೆಳೆ ಕೊಳೆತು ಹೋಗಿದೆ. ಮುಖ್ಯಮಂತ್ರಿಗಳು ಬೆಂಗಳೂರು ನಗರ ಸಂಚಾರ ಮಾಡಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ ರೂ. ಕೊಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಅವರೇ ನಿಮ್ಮ ಉತ್ಸಾಹ ಮೆಚ್ಚುವೆ, ಆದರೆ ರೈತರು ಇಷ್ಟೊಂದು ಹಾನಿ ಅನುಭವಿಸಿದ್ದಾರೆ, ನಿಮ್ಮ ಸರ್ಕಾರ ಯಾರ ಪರವಿದೆ? ಮನೆಗೆ ನೀರು ನುಗ್ಗಿದ್ದರೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಿದಂತೆ ರೈತರಿಗೆ ಪ್ರತಿ ಎಕರೆ ಭೂಮಿಗೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಿ ಎಂದು ಡಿ ಕೆ ಶಿವಕುಮಾರ್‌ ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *