ರೈತರ ಹೋರಾಟ ಭೂಮಿಯ ಅಸ್ತಿತ್ವದ ಪ್ರಶ್ನೆ  : ಡಾ. ನರೇಂದ್ರ ರೈ

ಕೊಟ್ಟಿಗೆಹಾರ : ಜ.09: ರೈತರ ಹೋರಾಟ ರೈತರ ಅಸ್ತಿತ್ವದ ಪ್ರಶ್ನೆಯಲ್ಲ ಇದು ಭೂಮಿಯ ಅಸ್ತಿತ್ವದ ಪ್ರಶ್ನೆ ಎಂದು ಪ್ರಾಧ್ಯಾಪಕ, ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದರು. ಕೋಶ ಓದು ದೇಶ ನೋಡು ಬಳಗ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ) ಆಯೋಜನೆಯಲ್ಲಿ, ಸಹಮತ, ಸಹಯಾನದ ಸಹಭಾಗಿತ್ವದಲ್ಲಿ ತೇಜಸ್ವಿ ಪ್ರತಿಷ್ಠಾನ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಓದು ಅಭಿಯಾನದ ಸಮಾರೋಪ ಸಮಾರಂಭವನು ತೇಜಸ್ವಿಯವರ ಪುಸ್ತಕ ತೆರೆಯುವ ಮೂಲಕ ಡಾ. ನರೇಂದ್ರ ರೈ ದೇರ್ಲ ಉದ್ಘಾಟಿಸಿದರು.

ನರೇಂದ್ರ ರೈ

ಬಳಿಕ ಉದ್ಘಾಟನಾ ಭಾಷಣ ಮಾಡಿದ ಅವರು, ರೈತರ ಹೋರಾಟ ರೈತರ ಅಸ್ತಿತ್ವದ ಪ್ರಶ್ನೆಯಲ್ಲ ಇದು ಭೂಮಿಯ ಅಸ್ತಿತ್ವದ ಪ್ರಶ್ನೆ. ಪ್ರಸ್ತುತ ರೈತ ಗುಣವಿರುವ ಕೊನೆಯ ತಲೆಮಾರು ಇದೆ ಎಂಬುದು ನನ್ನ ಭಾವನೆ. ನಾವು ರೈತರ ಗುಣ ಅವಳಡಿಸಿಕೊಳ್ಳಬೇಕಾದರೆ ನೇಗಿಲು ಹಿಡಿದು, ಹೊಲ ಹೊತ್ತು ಜೀವನ ನಡೆಸಬೇಕಾಗಿಲ್ಲ. ರೈತರ ದಾರಿಯ ಅನ್ವೇಷಣೆಯೇ ರೈತ ಗುಣ ಎಂದು ಅಭಿಪ್ರಾಯಪಟ್ಟರು.

ಮುಖದ ಎದುರು ಮುಖ ಕೊಟ್ಟು ಮಾತನಾಡಲಾಗದ, ಸತ್ಯವನ್ನು ಸುಳ್ಳಾಗಿಸುವ ಸುಳ್ಳನ್ನು ಸತ್ಯವಾಗಿಸುವ ಈ ಕಾಲದಲ್ಲಿ ಓದುವವರು ಇದ್ದಾರೆ, ಅದರಲ್ಲೂ ತೇಜಸ್ವಿಯವರನ್ನು ಓದುವ ಯುವಪೀಳಿಗೆಯಿದೆ ಎಂಬುದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.

ತೇಜಸ್ವಿಯವರು ಇಲ್ಲದ ಲೋಕದಲ್ಲಿ ನಾನು ಇರಲಾರೆ ಎಂಬ ಅನಂತಮೂರ್ತಿಯವರ ಮಾತನ್ನು ನೆನಪಿಸಿಕೊಂಡ ಅವರು, ಪ್ರಸ್ತುತ ಅನಂತಮೂರ್ತಿ, ಲಂಕೇಶ, ಸುಬ್ಬಣ್ಣ, ರಾಮ್‍ದಾಸ್, ತೇಜಸ್ವಿಯವರಂತಹ ಯುವ ಪೀಳಿಗೆಯನ್ನು ತಿದ್ದುವ, ರಿಪೇರಿ ಮಾಡುವ ಸಂಸ್ಕೃತಿ ಇಲ್ಲದೆ ನಮ್ಮ ಪ್ರಶ್ನೆ, ತಕರಾರು ಇಂಗಿ ಹೋಗುತ್ತಿದೆ ಎಂದರು.

ಲೇಖಕ ಕೆ.ಪಿ ಸುರೇಶ್ ಮಾತನಾಡುತ್ತಿರುವುದು

ನಾವೀಗ ನಮ್ಮ ದೇಶದಲ್ಲಿ ಎಷ್ಟು ಅಟಾಂ ಬಾಂಬ್‍ಗಳಿವೆ, ಎಷ್ಟು ಯುದ್ಧ ವಿಮಾನಗಳಿವೆ. ಬೇರೆ ದೇಶದಲ್ಲಿ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕಿಕೊಂಡು ಖುಷಿ ಪಡುತ್ತೇವೆ. ಆದರೆ, ನಾವು ನಮ್ಮ ಭೂಮಿಗೆ ಬೇಕಾದಷ್ಟು ನೀರು, ಆಮ್ಲಜನಕ, ಗಾಳಿ ಇದೆಯೇ ಎಂಬುದರ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಓದು ಬಳಗದ ಮುನೀರ್ ಕಾಟಿಪಳ್ಳ, ಯುವ ತಲೆಮಾರು ಓದಿನಿಂದ ವಿಮುಖ ಹೊಂದಿ ಸಾಮಾಜಿಕ ಜಾಲತಾಣದ ವಿಚಾರವನ್ನೇ ತಲೆಗೆ ತುಂಬಿಸುತ್ತಿದ್ದಾರೆ. ನಾವು ಅದೇ ಸಾಮಾಜಿಕ ಜಾಲತಾಣವನ್ನು ಬಳಸಿ ಓದು ಅಭಿಯಾನ ಆರಂಭಿಸಿದ್ದು ಯುವ ಜನರಲ್ಲಿ ಓದಿನ ಹವ್ಯಾಸ ಮೂಡಿಸುವ ಬೆಳೆಸುವ ಪ್ರಯತ್ನ ನಡೆಸುತ್ತಿದ್ದೇವೆ. ಈಗಾಗಲೇ ಈ ಓದು ಅಭಿಯಾನ ಹಲವಾರು ಜನರನ್ನು ಸೆಳೆದಿದ್ದು ಚರ್ಚೆಗಳು ನಡೆದಿದೆ ಎಂದರು.

ತೇಜಸ್ವಿಯವರು ಪ್ರಸ್ತುತ ನಡೆಯುತ್ತಿರುವ ಕೋಮುಸಂಘರ್ಷ ಮೊದಲಾದವುಗಳನ್ನು ತಮ್ಮ ಕೃತಿಯ ಮೂಲಕ ಈ ಹಿಂದೆಯೇ ತಿಳಿಸಿದ್ದಾರೆ. ಓದಿನಿಂದ ನಾವು ಸೈದ್ಧಾಂತಿಕ ಸ್ಪಷ್ಟತೆ ಪಡೆದು ದೇಶದ ಪ್ರಸ್ತುತ ಚಳುವಳಿಯಲ್ಲಿ ಕೈ ಜೋಡಿಸೋಣ ಎಂದು ಹೇಳಿದರು.

ವೇದಿಕೆಯಲ್ಲಿ ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ, ಲೇಖಕ ಕೆ.ಪಿ. ಸುರೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಡಾ. ರಮೇಶ್, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಆರ್. ರಾಘವೇಂದ್ರ ಉಪಸ್ಥಿತರಿದ್ದರು. ಶಿಕ್ಷಕ ಪೂರ್ಣೇಶ್ ಮತ್ತಾವರ ಕಾರ್ಯಕ್ರಮ ನಿರೂಪಿಸಿದರು.

Donate Janashakthi Media

Leave a Reply

Your email address will not be published. Required fields are marked *