ದೆಹಲಿ : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ವರಿಂದರ್‌ಪಾಲ್ ಸಿಂಗ್ ಅವರು, ಭಾರತೀಯ ರಸಗೊಬ್ಬರ ಉದ್ದಿಮೆಗಳ ಸಂಘ(ಎಫ್‌ಎಐ) ನೀಡಲಿರುವ ‘ಎಫ್‌ಎಐ ಸುವರ್ಣ ಮಹೋತ್ಸವ ಪ್ರಶಸ್ತಿ’ಯನ್ನು ನಿರಾಕರಿಸಿದ್ದಾರೆ.
ಸಸ್ಯ ಪೋಷಣೆ ಕ್ಷೇತ್ರದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ ವರಿಂದರ್‌ಪಾಲ್ ಸಿಂಗ್ ಅವರನ್ನು ಎಫ್‌ಐಐ ಗೋಲ್ಡನ್ ಜುಬಿಲಿ ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿಯು ₹2 ಲಕ್ಷ ನಗದು, ಚಿನ್ನದ ಪದಕ ಒಳಗೊಂಡಿತ್ತು. ಅಪಾಯಕಾರಿ ಕೃಷಿ ಮಸುದೆಗಳನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಹಾಗಾಗಿ ನಾನು ವಿನಮ್ರವಾಗಿ ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ‘ ಎಂದು ಮಾಧ್ಯಮಗಳಿಗೆ ವರಿಂದರ್ ಪಾಲ್ ತಿಳಿಸಿದ್ದಾರೆ.
ಸೋಮವಾರ ನಡೆದ ಎಫ್‌ಎಐ ವಾರ್ಷಿಕ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವರಿಂದರ್ ಪಾಲ್ ಸಿಂಗ್ ಅವರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವುದನ್ನು ಎಫ್‌ಎಐನ ಮಹಾ ನಿರ್ದೇಶಕ ಸತೀಶ್ ಚಂದರ್ ದೃಢಪಡಿಸಿದ್ದಾರೆ.
ಎಫ್‍ಎಎ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಒಟ್ಟು 34 ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಮನ್ಸುಖ್ ಲಾಲ್ ಮಾಂಡವಿಯಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.