ಬೆಂಗಳೂರು: ಕರಾಳ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಘೋಷಣೆ ದೇಶದ ರೈತರ ಚಾರಿತ್ರಿಕ ಹೋರಾಟಕ್ಕೆ ಸಂದ ಭಾರೀ ದೊಡ್ಡ ವಿಜಯವಾಗಿದೆ. ಈ ಹೋರಾಟಕ್ಕೆ ಕಾರಣಿಭೂತರಾದ ಮಳೆ, ಚಳಿ, ಬಿಸಿಲು, ಬೆದರಿಕೆಗಳನ್ನು ಲೆಕ್ಕಿಸದೇ ದೆಹಲಿಯ ಗಡಿಗಳಲ್ಲಿ ಸತತ ಒಂದು ವರ್ಷದಿಂದ ಹೋರಾಟ ನಡೆಸಿದ ಲಕ್ಷಾಂತರ ರೈತರು ಹಾಗು ಇದರ ಭಾಗವಾಗಿ ದೇಶಾದ್ಯಂತ ವ್ಯಾಪಕ ಹೋರಾಟ ನಡೆಸಿದ ರೈತರು, ದಲಿತರು, ಕಾರ್ಮಿಕರನ್ನು ಸಂಯುಕ್ತ ಹೋರಾಟ-ಕರ್ನಾಟಕ ಅಭಿನಂದಿಸಿದೆ.
ಇದನ್ನು ಓದಿ: ಒಕ್ಕೂಟ ಸರ್ಕಾರದ ನಿರ್ಧಾರದಂತೆ ರಾಜ್ಯ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ಸ್ ಪಡೆಯಬೇಕು: ಕೆಪಿಆರ್‌ಎಸ್
ಪ್ರಧಾನಿ ಮೋದಿ ಕಾಯ್ದೆ ರದ್ದತಿ ಬಗ್ಗೆ ಘೋಷಣೆಯೊಂದಿಗೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ರಚನೆಯ ಬಗ್ಗೆ ಹಾಗು ವಿದ್ಯುತ್ ಕ್ಷೇತ್ರದ ಸಂಪೂರ್ಣ ಖಾಸಗಿಕರಣಕ್ಕೆ ಅವಕಾಶ ಮಾಡಿಕೊಡುವ ವಿದ್ಯುತ್ ಮಸೂದೆ-2020 ರ ವಾಪಸಾತಿಯ ಬಗ್ಗೆ ಮೌನ ವಹಿಸಿದ್ದಾರೆ. ಈ ಬೇಡಿಕೆಗಳನ್ನು ಸಹ ಈಡೇರಿಸಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕ ಆಗ್ರಹಿಸಿದೆ.
ಬಿಜೆಪಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು
ಇನ್ನೂ ಮುಖ್ಯವಾಗಿ ರೈತರ ಒಂದು ವರ್ಷದ ಸತತ ಹೋರಾಟದ ಕಾರಣದಿಂದ ತಮ್ಮ ತಪ್ಪಿನ ಅರಿವು ಆಗಿ ಕರಾಳ ಕೃಷಿ ಕಾಯ್ದೆ ವಾಪಸ್ಸು ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಆದರೆ ಅದೇ ಬಿಜೆಪಿಯ ರಾಜ್ಯ ಸರ್ಕಾರ ಈ ಕಾಯ್ದೆಯ ಮುಖ್ಯ ಅಂಶಗಳಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ತಂದು ಭಾರೀ ವೇಗವಾಗಿ ಜಾರಿ ಮಾಡುತ್ತಿದೆ.
ಇದನ್ನು ಓದಿ: ರೈತರ ಐತಿಹಾಸಿಕ ವಿಜಯ : ಯಾರೆಲ್ಲ ಏನು ಹೇಳಿದರು? ಪ್ರತಿಕ್ರಿಯೆ ನೋಡಿ
ಕೇಂದ್ರದ ನಿರ್ಧಾರದಂತೆಯೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪ್ರಧಾನಿ ಮೋದಿಯವರ ಹಾದಿಯಲ್ಲಿ ಹೆಜ್ಜೆ ಹಾಕಿ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿಗಳನ್ನು ಕೂಡಲೇ ರದ್ದು ಮಾಡಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಸಂಯುಕ್ತ ಹೋರಾಟ-ಕರ್ನಾಟಕ ಎಚ್ಚರಿಕೆ ನೀಡಿದೆ.
ಹೋರಾಟ ಮುಂದುವರಿಯುತ್ತದೆ
ಕೇಂದ್ರದಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತರಿಯ ಕಾನೂನು, ವಿದ್ಯುತ್ ಮಸೂದೆ-2020ರ ವಾಪಸಾತಿ ಹಾಗು ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳ ವಾಪಸಾತಿ, ಕಾರ್ಮಿಕ ಸಂಹಿತೆ ರದ್ಧತಿ, ಸಾರ್ವಜನಿಕ ಉದ್ಯಮಗಳ ಖಾಸಗೀಕರಣಕ್ಕೆ ತಡೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಿಯಂತ್ರಣ, ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಪರಿಹಾರ, ಹಾಲಿನ ದರ ಇಳಿಕೆಯ ವಿರುದ್ಧ ಮತ್ತಿತರೆ ಬೇಡಿಕೆಗಳನ್ನು ಈಡೇರಿಸುವ ತನಕ ರಾಜ್ಯದಲ್ಲಿ ಹೋರಾಟವನ್ನು ಮುಂದುವರಿಸಲು ಸಂಯುಕ್ತ ಹೋರಾಟ-ಕರ್ನಾಟಕ ನಿರ್ಧರಿಸಿದೆ.
ನವೆಂಬರ್ 26ರ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ
ದೆಹಲಿಯಲ್ಲಿನ ರೈತ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿಯನ್ನು ನವೆಂಬರ್ 26ರಂದು ನಡೆಸಲು ಘೋಷಿಸಲಾಗಿತ್ತು. ಈ ಕುರಿತು ನಾಳೆ(ನವೆಂಬರ್ 20) ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಪ್ರತಿಕಾಗೋಷ್ಠಿಯಲ್ಲಿ ಹೋರಾಟದ ರೂಪರೇಷೆಗಳನ್ನು ಘೋಷಣೆ ಮಾಡಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಯುಕ್ತ ಹೋರಾಟ-ಕರ್ನಾಟಕದ ಸಂಯೋಜಕರುಗಳಾದ ಬಡಗಲಪುರ ನಾಗೇಂದ್ರ, ಜಿ.ಸಿ.ಬಯ್ಯಾರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ ಕೆರೆಗೋಡು, ಮಾವಳ್ಳಿ ಶಂಕರ್, ಕೆ.ವಿ.ಭಟ್, ಪಿಆರ್‌ಎಸ್ ಮಣಿ, ನೂರ್ ಶ್ರೀಧರ್, ದೇವಿ, ವಾಸುದೇವರೆಡ್ಡಿ, ಜಯಣ್ಣ ಅವರು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.