ಜೂನ್ 2020 ರಲ್ಲಿ ಮೊದಲು ಒಂದು ಸುಗ್ರೀವಾಜ್ಞೆಯಾಗಿ ತಂದ ಎಲ್ಲಾ ಮೂರು ರೈತ ವಿರೋಧಿ, ಕಾರ್ಪೊರೇಟ್-ಪರ ಕರಾಳ ಕಾನೂನುಗಳನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಗುರು ನಾನಕ್ ಜಯಂತಿ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಸೂಕ್ತ ಸಂಸದೀಯ ಪ್ರಕ್ರಿಯೆಗಳ ಮೂಲಕ ಪ್ರಕಟಣೆಯು ಜಾರಿಗೆ ಬರುವುದನ್ನು ಕಾಯುವುದಾಗಿ ಹೇಳಿದೆ. ಅದು ಸಂಭವಿಸಿದಲ್ಲಿ, ಇದು ಭಾರತದಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ರೈತ ಆಂದೋಲನದ ಒಂದು ಐತಿಹಾಸಿಕ ವಿಜಯವಾಗಲಿದೆ ಎಂದು ವರ್ಣಿಸಿದೆ.
ಇದನ್ನು ಓದಿ: ಮೂರೂ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧಾರ – ಪ್ರಧಾನಿ ಮೋದಿ
ಆದರೆ, ಈ ಹೋರಾಟದಲ್ಲಿ ಸುಮಾರು 700 ರೈತರು ಹುತಾತ್ಮರಾಗಿದ್ದಾರೆ. ಲಖಿಂಪುರ ಖಿರಿ ಹತ್ಯಾಕಾಂಡ ಸೇರಿದಂತೆ ಈ ಸಾವುಗಳನ್ನು ತಪ್ಪಿಸಬಹುದಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಹಟವೇ ಹೊಣೆಯಾಗಿದೆ ಎಂದೂ ಅದು ಹೇಳಿದೆ.
ರೈತರ ಈ ಚಳುವಳಿಯು ಮೂರು ಕರಾಳ ಕಾಯಿದೆಗಳನ್ನು ರದ್ದುಪಡಿಸಲು ಮಾತ್ರವಲ್ಲದೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಾನೂನಾತ್ಮಕ ಬೆಲೆ ಖಾತ್ರಿ ಮತ್ತು ಎಲ್ಲಾ ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಕೂಡ ಆಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿಗಳಿಗೆ ನೆನಪಿಸಿದೆ. ರೈತರ ಈ ಮಹತ್ವದ ಬೇಡಿಕೆ ಇನ್ನೂ ಬಾಕಿ ಇದೆ. ಅದೇ ರೀತಿ ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಹಿಂಪಡೆಯಬೇಕಿದೆ. ಸಂಯುಕ್ತ ಕಿಸಾನ್ ಮೋರ್ಚಾ ಶೀಘ್ರದಲ್ಲೇ ತನ್ನ ಸಭೆಯನ್ನು ನಡೆಸುತ್ತದೆ, ಎಲ್ಲಾ ಘಟನೆಗಳನ್ನು ಪರಿಗಣಿಸಿ ಯಾವುದಾದರೂ ಮುಂದಿನ ನಿರ್ಧಾರಗಳಿದ್ದಲ್ಲಿ ಅವನ್ನು ಪ್ರಕಟಿಸುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ಡಾ. ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಧುನಿ, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್, ಶಿವಕುಮಾರ್ ಶರ್ಮಾ (ಕಾಕ್ಕಾ ಜಿ) ಮತ್ತು ಯುಧ್ವೀರ್ ಸಿಂಗ್ ಜಂಟಿಯಾಗಿ ನೀಡಿರುವ ಈ ಹೇಳಿಕೆ ತಿಳಿಸಿದೆ.